ಸರ್ಕಾರಿ ಶಾಲೆಯ ಮರಿ ವಿಜ್ಞಾನಿಗಳು!


"ನಾಳೆ ಏನು ಮಕ್ಳೇ?" ಅಂದ್ಕೂಡ್ಲೇ ದೊಡ್ಡ ಕ್ಲಾಸಿನವ್ರು 'ರಾಷ್ಟ್ರೀಯ ವಿಜ್ಞಾನ ದಿನ' ಅಂದ್ರೆ ಚಿಕ್ಕವ್ರು, 'ಸಿ ವಿ ರಾಮನ್ ಜಯಂತಿ' ಅಂತ ಕಿರುಚ್ಕೊಂಡ್ವು. ಜಯಂತಿಗಳ ಪ್ರಭಾವ ಜೋರಾಗೇ ಇದೆ ಅಂತ ನಗು ಬಂದಿತ್ತು.

"ನಾಳೆ ಎಲ್ಲ ಗೊತ್ತಾಗುತ್ತೆ. ಈಗಾಗ್ಲೇ ಯಾರ್ಯಾರು ಸ್ಪರ್ಧೆಗಳಿಗೆ ಸೇರಿದೀರಾ, ನಾಳೆ ರೆಡಿಯಾಗಿ ಬನ್ನಿ" ಅಂದೆ. ಒಟ್ಟಾರೆ ನನ್ನ ಎರಡು ದಿನದ ಸಿದ್ಧತೆಯ ಭರಾಟೆ, ಫೆಬ್ರವರಿ 28ರ ಬಗ್ಗೆ ಎಲ್ಲರಲ್ಲೂ ಉತ್ಸುಕತೆ ಮೂಡಿಸಿತ್ತು.

ಸರ್ಕಾರಿ ಶಾಲೆಗಳು ಅಂದ್ರೆ ದಡ್ಡ ವಿದ್ಯಾರ್ಥಿಗಳ, ಸೋಂಬೇರಿ ಶಿಕ್ಷಕರ ನೆಲೆ ಅನ್ನೋದು ಸಾಮಾನ್ಯರ ಭಾವ. ಆದ್ರೆ ಸರ್ಕಾರಿ ಶಾಲೆಗಳಲ್ಲೂ ಮಕ್ಕಳ ಸೃಜನಶೀಲತೆಗೆ ನೆರವಾಗುವ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಅವುಗಳ ಪೈಕಿ ವಿಜ್ಞಾನ ದಿನವೂ ಒಂದು. ದೊಡ್ಡ ಸಾಧನಗಳನ್ನು ಖರೀದಿಸಿ, ಅದಕ್ಕಿಂತ ಅದ್ಧೂರಿಯಾಗಿ ಪ್ರಸಂಟೇಷನ್ನು ಕೊಡುವಷ್ಟು ಸಿರಿವಂತರಲ್ಲ ನಮ್ಮ ಶಾಲೆಯ ವಿದ್ಯಾರ್ಥಿಗಳು. ಆದರೆ, ತಟ್ಟೆ-ಲೋಟ-ನೀರಿನ ಬಾಟಲು-ಬಲೂನು ಇತ್ಯಾದಿ ಸರಳ ಸಾಧನಗಳ ಮೂಲಕ ತಾವು ಓದಿ ಅರ್ಥೈಸಿಕೊಂಡಿದ್ದನ್ನು ಸಮರ್ಥವಾಗಿ ನೋಡುಗರಿಗೆ ಅರ್ಥಮಾಡಿಸಿದ್ರು. ಮಕ್ಕಳ ಅಮಿತೋತ್ಸಾಹ ನೋಡುತ್ತಿದ್ದ ನನಗೆ ಈ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು ಸಾರ್ಥಕವಾಯ್ತು ಎಂಬ ಸಣ್ಣ ಖುಷಿ.. 

ಬೆಳಿಗ್ಗೆ ಬರ್ತಿದ್ದ ಹಾಗೆ, ಮಕ್ಕಳು ಗೇಟಿನ, ಕ್ಲಾಸ್ ರೂಮಿನ ಎದ್ರು ಬಾಳೆ ಕಂದು ಕಟ್ಟಿದ್ರು. ಭಾಷಣ, ಪ್ರಬಂಧ, ಪ್ರಯೋಗ, ವಿಜ್ಞಾನ ಚಿತ್ರ ರಚನೆ ಸ್ಪರ್ಧೆಗಳಿಗೆ ಸೇರಿದವ್ರು, ಎರಡೂ ಕಿವಿ ಮುಚ್ಕೊಂಡು ಓದ್ತಿದ್ರು. ವಿಜ್ಞಾನ ಸಂಘದ ಅಧ್ಯಕ್ಷ, ಉಪಾಧ್ಯಕ್ಷೆ ನಿನ್ನೆ ರೆಡಿ ಮಾಡಿಟ್ಟಿದ್ದ ಚಾರ್ಟನ್ನ ಫ್ರಂಟ್ ನೋಟಿಸ್ ಬೋರ್ಡ್ಗೆ ಅಂಟಿಸ್ತಿದ್ರು.

"ಏನ್ ಮೇಡಂ ಈ ತರ ರೆಡಿ ಮಾಡ್ಸಿದೀರಾ, ಎಲ್ಲಾ ವಿಜ್ಞಾನಮಯ", ಅಂತಿದ್ರೆ ನಾನ್ ಅಂದ್ಕೊಂಡಿದ್ದಕ್ಕಿಂತ ಹೆಚ್ಚಾಗಿನೇ ಮಕ್ಕಳ ಸಂಭ್ರಮ ನೋಡಿ ಖುಷಿ. ಪ್ರಾರ್ಥನಾ ಅವಧಿನಲ್ಲಿ, 7ನೇ ತರಗತಿ ಸಂಗೀತಾ, ರಾಮನ್ ಬಗ್ಗೆ, ರಾಮನ್ ಎಫೆಕ್ಟ್ ಬಗ್ಗೆ ಹೇಳ್ತಾ, "ಆ ವರದಿ ಮಂಡನೆಯಾದ ದಿನ ಫೆಬ್ರವರಿ 28, ಆ ದಿನವನ್ನ ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸ್ತೇವೆ" ಅಂತ ಹೇಳ್ದಾಗ, ನಿನ್ನೆ ಜಯಂತಿ ಅಂತ ಕೂಗಿದ್ದ 5ನೇ ಕ್ಲಾಸಿನ ವಿಕಾಸ್, ಮದನ್ ಒಬ್ರನ್ನೊಬ್ರು ನೋಡಿ ತಿಳೀತಾ ಅಂತ ತಲೆ ಅಲ್ಲಾಡಿಸ್ತಿದ್ರು!

ವಿಜ್ಞಾನ ಚಿತ್ರ ರಚನೆ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ಹುಮ್ಮಸ್ಸು
ನಂತರ ಶುರುವಾದ್ವು ಸ್ಪರ್ಧೆಗಳು. ಇರುವ ಆರೂ ಜನ ಶಿಕ್ಷಕರು ತೀರ್ಪುಗಾರರಾದ್ವಿ. ಭಾಷಣದಲ್ಲಿ ಸ್ಪೂರ್ತಿ ನಡುಗಿದ್ರೆ, ಮೇಘನಾ ಮಾತು ಮರೆತು ನಾಚಿ ನಿಂತಳು. ಅವ್ರಿಗೆ ಧೈರ್ಯ ತುಂಬಿದ್ವಿ. ಸರಳ ಪ್ರಯೋಗಗಳಲ್ಲಿ ಗಡಿಬಿಡಿಯಲ್ಲಿ ಕಾರ್ತಿಕ್ ಸೊಲ್ಯೂಷನ್ಸ್ ಚೆಲ್ಲಿದ್ರೆ , ಪವನ್ ಬಲೂನ್ ಊದಿ ಇನ್ನೇನು ತೋರಿಸ್ಬೇಕು ಅನ್ನೋದ್ರಲ್ಲಿ ಬಲೂನು ಢಂ ಅನ್ನೋದು. 3ನೇ ಕ್ಲಾಸಿನ ಮೋಹನ ಬಾಟಲಿಗೊಂದು ತೂತು ಮಾಡಿ, ಮ್ಯಾಜಿಕ್ ಮಾಡ್ತೀನಿ ಅಂತ ವಿವರಣೆ ಕೊಡ್ತಿದ್ರೆ, ನಮ್ಮೆಲ್ಲರ ಮುಖಗಳೂ ಇಷ್ಟಗಲ!

ಬಹುಮಾನ ವಿತರಣೆ ಸಂದರ್ಭದಲ್ಲಿ, ಎಲ್ಲಾ ಶಿಕ್ಷಕರೂ, ವಿಜ್ಞಾನದ ಬಗ್ಗೆ ,ವಿಜ್ಞಾನಿಗಳ ಬಗ್ಗೆ, ನಿತ್ಯ ನೋಡುವ ಕೌತುಕಗಳ ಬಗ್ಗೆ ಹೇಳಿದ್ರು. ಕುಮಾರ್ ಸರ್ ಪ್ರಯೋಗಾನೂ ಮಾಡಿದ್ರು.

ಮಕ್ಕಳಲ್ಲಿ ಪ್ರಶ್ನಿಸೋ ಮನೋಭಾವ ಬೆಳೆಸ್ಬೇಕು ಅಂತ ಮಹಾನ್‌ ಶಿಕ್ಷಕ, ಶಿಕ್ಷಣ ತಜ್ಞ ಎಚ್‌.ನರಸಿಂಹಯ್ಯ ಹೇಳ್ತಿದ್ರು ಅಂತ ಓದಿದ ನೆನಪು. ಪ್ರಶ್ನಿಸೋದು ವೈಜ್ಞಾನಿಕ ಮನೋಭಾವದ ಮೂಲಗುಣ. ಆ ನಿಟ್ಟಿನಲ್ಲಿ ನಮ್ಮ ಶಾಲೆಯ ವಿಜ್ಞಾನ ದಿನ ಒಂದು ಸಣ್ಣ ಯಶಸ್ವಿ ಪ್ರಯತ್ನ.

❍ ವೀಣಾ ವಾಸುದೇವ್‌ 
 ಗೃಹಿಣಿ. ತಾಯಿ. ನಂಜನಗೂಡು ಸಮೀಪದ ಹಳ್ಳಿಯೊಂದರ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿ. ತಮ್ಮ ವೃತ್ತಿ ಜೀವನದ ಸಿಹಿ-ಕಹಿ ಕ್ಷಣಗಳನ್ನು ಕರಿಹಲಗೆ ಮೂಲಕ ಹಂಚಿಕೊಳ್ಳಲಿದ್ದಾರೆ.

No comments:

Post a Comment