ಪ್ರಧಾನಿ ಫಿಟ್ನೆಸ್ ವೀಡಿಯೋಗೆ 35 ಲಕ್ಷ ರೂ. ಖರ್ಚಾಗಿಲ್ಲ


ಸಚಿವ ರಾಜ್ಯವರ್ಧನ ಸಿಂಗ್ ರಾಥೋಡ್ ಆರಂಭಿಸಿದ್ದ ಫಿಟ್ನೆಸ್ ಚಾಲೆಂಜ್ ಒಬ್ಬರಿಂದ ಒಬ್ಬರಿಗೆ ಟ್ಯಾಗ್ ಆಗಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಮೂಲಕ ಪ್ರಧಾನಿ ನರೇಂದ್ರ ಮೋದಿಯವರನ್ನು ತಲುಪಿತ್ತು. ಸವಾಲು ಸ್ವೀಕರಿಸಿ ಸದ್ಯದಲ್ಲೇ ಈ ಬಗ್ಗೆ ಫಿಟ್ನೆಸ್ ವೀಡಿಯೋ ಪ್ರಕಟಿಸುತ್ತೇನೆ ಎಂದಿದ್ದ ಪ್ರಧಾನಿ ಸುಮಾರು ಒಂದು ತಿಂಗಳ ನಂತರ ಇತ್ತೀಚೆಗೆ ಯೋಗ ಮತ್ತು ಇತರ ವ್ಯಾಯಾಮಗಳನ್ನು ಮಾಡುವ ವೀಡಿಯೋ ಪ್ರಕಟಿಸಿದ್ದರು.
ಇತ್ತೀಚೆಗೆ ಇಂಡಿಯಾ ಸ್ಕೂಪ್ಸ್ ಎಂಬ ವೆಬ್‌ಸೈಟ್‌ನಲ್ಲಿ ಪ್ರಧಾನಿ ಮೋದಿ ಫಿಟ್ನೆಸ್ ವೀಡಿಯೋಗೆ 35 ಲಕ್ಷ ರೂ. ಹಣ ವೆಚ್ಚ ಮಾಡಲಾಗಿದೆ ಎಂಬ ವರದಿ ಪ್ರಕಟಿಸಿತ್ತು. ಆ ವರದಿಯಲ್ಲಿ ಆರ್‌ಟಿಐ ಉಲ್ಲೇಖ ಇದ್ದ ಹಿನ್ನೆಲೆಯಲ್ಲಿ ಬಹುತೇಕರು ಅದು ನಿಜ ಇದ್ದಿರಬಹುದು ಎಂದು ಭಾವಿಸಿದ್ದರು. ಕಾಂಗ್ರೆಸ್ ಮತ್ತು ಎಎಪಿಯ ಹಲವು ಬೆಂಬಲಿಗರು ಈ ಸುದ್ದಿಯನ್ನು ಮರು ಟ್ವೀಟ್ ಮಾಡಿ ಪ್ರಧಾನಿಯವರ ದುಂದು ವೆಚ್ಚದ ಬಗ್ಗೆ ಪ್ರಶ್ನೆ ಎತ್ತಿದರು.
.....
.....
ಆದರೆ ಆ ಸುದ್ದಿ ಸುಳ್ಳು ಎಂದು ಪ್ರಧಾನಮಂತ್ರಿಯವರ ಸಚಿವಾಲಯ ಸ್ಪಷ್ಟನೆ ನೀಡಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯವರ್ಧನ ಸಿಂಗ್ ರಾಥೋಡ್, ಪ್ರಧಾನಿ ಕಚೇರಿಯ ವೀಡಿಯೋಗ್ರಾಫರ್ ಇದನ್ನು ಚಿತ್ರೀಕರಿಸಿದ್ದಾರೆ. ಈ ವೀಡಿಯೋಗೆ ಯಾವುದೇ ಖರ್ಚು ಮಾಡಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಸುಳ್ಳು ಸುದ್ದಿ ಪ್ರಕಟಿಸಿದ ವೆಬ್‌ಸೈಟ್‌  ಇದೀಗ ಲೇಖನದಲ್ಲಿ ಒಂದಿಷ್ಟು ಮಾರ್ಪಾಟು ಮಾಡಿದ್ದು, ಪ್ರಧಾನಿ ಕಚೇರಿಯ ಮೂಲಗಳಿಂದ ಈ ಮಾಹಿತಿ ತಿಳಿದುಬಂದಿತ್ತು ಎಂದಿದೆ. 35 ಲಕ್ಷ ರೂ. ಹಣವನ್ನು ಸರ್ಕಾರದ ಖಜಾನೆಯಿಂದ ಭರಿಸಿಲ್ಲ. ಮೂರನೇ ವ್ಯಕ್ತಿಗಳು ಪ್ರಾಯೋಜಿಸಿದ್ದರು ಎಂದೂ ಹೇಳಿಕೊಂಡಿದೆ.

ಈ ಫಿಟ್ನೆಸ್ ಸವಾಲಿನಲ್ಲಿ ಪಾಲ್ಗೊಂಡ ಎಲ್ಲರೂ ತಮ್ಮ ಮೊಬೈಲ್‌ ಫೋನ್/ ವೀಡಿಯೋ ಕ್ಯಾಮರಾದಲ್ಲಿ ಫಿಟ್ನೆಸ್ ವೀಡಿಯೋ ಚಿತ್ರೀಕರಿಸಿ ಅಪ್ಲೋಡ್ ಮಾಡಿದ್ದಾರೆ. ಪ್ರಧಾನಿ ಮೋದಿಯವರ ಫಿಟ್ನೆಸ್ ವೀಡಿಯೋ ಚಿತ್ರೀಕರಣ ಮತ್ತು ಎಡಿಟಿಂಗ್‌ ಪ್ರೊಫೆಷನಲ್ ಆಗಿದೆ ಎಂಬುದು ನಿಜ. ಅದಕ್ಕೆ ಎಷ್ಟು ವೆಚ್ಚ ಮಾಡಲಾಗಿದೆ ಎಂಬುದನ್ನು ಪ್ರಧಾನಿ ಸಚಿವಾಲಯ ಬಹಿರಂಗಪಡಿಸಿಲ್ಲ. ಆದರೆ 35 ಲಕ್ಷ ರೂ. ವೆಚ್ಚ ಮಾಡಲಾಗಿದೆ ಅನ್ನೋದು ಮಾತ್ರ ಸುಳ್ಳು ಸುದ್ದಿ.

No comments:

Post a Comment