ಮೊದಲ ಬಾರಿ ವಿಮಾನದಲ್ಲಿ ಬೆಲ್ಟು ಕಟ್ಟಿಕೊಂಡದ್ದು


'ಡೆಲ್ಲಿಗೆ ಟ್ರೈನ್ ನಲ್ಲಿ ಹೋಗೋಕೆ ಮೂರು ದಿನ ಬೇಕು. ಇರುವ ಎಂಟು ದಿನಗಳ ರಜೇಲಿ ಹೋಗಿ ಬರೋಕೇ ಆರು ದಿನ ಕಳದ್ ಹೋದ್ರೆ ಇನ್ನೇನ್ ನೋಡೋದು, ಪದೇಪದೇ ಹೋಗಲ್ವಲ್ಲ' ಅಂತ ಫ್ಲೈಟ್ ಟಿಕೆಟ್ ಬುಕ್ ಮಾಡಿದ್ವಿ. ಏರ್ ಇಂಡಿಯಾದ್ದು. 10 ಗಂಟೆಯ ಫ್ಲೈಟ್ಗೆ 8ಕ್ಕೇ ಏರ್ಪೋರ್ಟ್ಗೆ ಬಂದ್ವಿ.

ವಿಮಾನದಲ್ಲಿ ಹೋಗುವವರು ತುಂಬಾ ಶ್ರೀಮಂತರು ಹೈ-ಫೈ ಜನ ಅನ್ನುವ ಭಾವನೆ. ಚೆಕ್ ಇನ್ಗೆ ಅಂತ ಲೈನಲ್ಲಿ ನಿಂತಿದ್ರೆ ಒಳಗೆ ಢವಢವ. ಹಾಗೇ ಸುತ್ತ ಕಣ್ಣು ಹಾಯ್ಸಿದೆ. ಮಿಡಿ-ಮಿನಿ, ಜೀನ್ಸ್ ಪ್ಯಾಂಟ್, ಶಾರ್ಟ್ಸ್ ಜೊತೆಗೇ ಚೂಡಿದಾರ್ ಅಷ್ಟೇ ಅಲ್ಲ ಪಕ್ಕದ್ಮನೆ ಅಂಬುಜಮ್ಮನ ತರಹ ಸೀರೆ ಸುತ್ಕೊಂಡವ್ರೂ ಇದ್ರು. ಕ್ಲಾಸಿ ಲುಕ್ ಬೇಕು ಅಂತ ಮೈಸೂರಿನ ಗಲ್ಲಿ ಗಲ್ಲಿ ಸುತ್ತಿ 5000 ರೂಪಾಯಿ ಖರ್ಚು ಮಾಡಿ ಡ್ರೆಸ್, ಶೂಸ್ ತೆಗೊಳ್ಳೋದು ಬೇಕಾಗಿರ್ಲಿಲ್ಲ ಅನ್ನಿಸ್ತು. ಆದ್ರೂ ಗಾಲಿಗಳಿರೋ ಎಳ್ಕೊಂಡ್ ಹೋಗೋ ಬ್ಯಾಗ್ನಲ್ಲಿ ಅವುಗಳನ್ನ ತುಂಬಿದ್ದೆ. ಕಾರಿಡಾರ್ನಲ್ಲಿ ಸರಿಯಾಗಿ ಎಳೆಯೋಕೆ ಬರ್ದೆ ಮೂರ್ನಾಲ್ಕು ಪಲ್ಟಿ ಹೊಡ್ಸ್ಕೊಂಡು ಒಳಗೆ ಹೋದೆ!

ಏರ್‌ಪೋರ್ಟಲ್ಲಿ ಎಲ್ಲವೂ ಸೆನ್ಸಾರ್ ಕಂಟ್ರೋಲ್ಡ್. ಬಾಗಿಲುಗಳ ಜೊತೆಗೇ ವಾಷ್ ರೂಮಿನ ಫ್ಲಷ್ ಗಳು ಕೂಡ! ನೀರು ಬರ್ತದಾ, ತನ್ನಷ್ಟಕ್ಕೆ ನಿಲ್ತದಾ ಅಂತ ಅವುಗಳನ್ನೇ ದುರುಗುಟ್ಟಿ ನೋಡಿದ್ದೆ. ಪೂರ್ತಿ ಹವಾ ನಿಯಂತ್ರಿತ. ಟಿಕೆಟ್ ಕೌಂಟರ್ ನಲ್ಲಿ ಮತ್ತೆ ಲೈನ್. ಅವ್ರು ಏನೇನ್ ಕೇಳ್ತಾರೋ ಅಂತ ಎಗರಿ ಎಗರಿ ನೋಡಿ ಮುಂದಿನವನಿಗೆ ಡಿಕ್ಕಿ ಕೊಟ್ಟು ಪೆಚ್ಚು ನಗೆ ನಕ್ಕೆ. ನನ್ನ ಸರದಿ ಬಂದಾಗ ಯುವರ್ ಐಡಿ ಪ್ಲೀಸ್ ಅನ್ನುವ ರಿಸೆಪ್ಷನಿಸ್ಟ್ ದನಿಗೆ ಗಾಬರಿಯಿಂದ ವೋಟರ್ ಐಡಿ ಆಧಾರ್ ಕಾರ್ಡ್ ಗಳ, ಒರಿಜಿನಲ್, ಜೆರಾಕ್ಸ್ ಎಲ್ಲಾನೂ ಅವನ ಮುಂದೆ ಹಿಡಿದಿದ್ದೆ. ಆತ ನಕ್ಕು ಸಣ್ಣ ಆಧಾರ್ ಕಾರ್ಡ್ ಎತ್ತಿಕೊಂಡಿದ್ದ.

ಮೊದಲ ಬಾರಿ ವಿಮಾನ ಪ್ರಯಾಣದ ಸಂದರ್ಭ 'ಹೇಗೋ.. ಏನೋ..' ಅನ್ನುವಂಥ ಒಂದ್ರೀತಿಯ ಅಳುಕಿತ್ತು. ನಮ್ಮ ಪಕ್ಕದ ಸೀಟಿನವ ಹಲವು ಬಾರಿ ವಿಮಾನ ಪ್ರಯಾಣ ಮಾಡಿದ ಎಕ್ಸ್‌ಪೀರಿಯನ್ಸ್‌ಡ್ ಪರ್ಸನ್ ಅಂತ ಗೊತ್ತಾದಾಗ ಏನಾದ್ರೂ ತಿಳೀದಿದ್ರೆ ಅವನನ್ನ ಕೇಳಿದ್ರಾಯ್ತು ಅಂತ ತುಸು ಸಮಾಧಾನ ಆಗಿತ್ತು. ಆದರೆ ಪ್ರಯಾಣ ಮುಗಿದು ವಿಮಾನದಿಂದ ಇಳಿಯೋ ಹೊತ್ತಿಗೆ ಸೀನು ಕಂಪ್ಲೀಟ್ ಬದಲಾಗಿತ್ತು!

'ಧಡ್' ಅನ್ನುವ ಶಬ್ದಕ್ಕೆ ಹಿಂದೆ ತಿರುಗಿ ನೋಡಿದ್ರೆ ಒಬ್ಬ ಮಧ್ಯವಯಸ್ಸಿನ ಹೆಂಗಸು ಅಡ್ಡಕ್ಕೆ ಹಾಕಿದ್ದ ಕಂಬಕ್ಕೆ ಎಡವಿ ಬಿದ್ದಿದ್ದಳು. ಏನೂ ಆಗಿಲ್ಲ ಅನ್ನುತ್ತಾ ಮೆಲ್ಲನೆ ಎದ್ದು ನಿಂತಳು. "ಬೇಗ್ ಬಾರೆ ಸರ್ಯಾಗ್ ನಡ್ಯೋಕು ಬರಲ್ಲ ಥೂ", ಅಂತ - ಆಕೆಯ ಗಂಡನಿರ್ಬೇಕು, ಕೂಗಿದ್ದ. ಫ್ಲೈಟ್ ನಲ್ಲಿ ನಮ್ಮ ಪಕ್ಕದ ಸೀಟೇ ಅವ್ರದ್ದು.

ಟೇಕಾಫ್ ಆಗುವಾಗ "ಬೆಲ್ಟ್ ಹೇಗೆ ಕಟ್ಟೋದು ನೋಡೇ" ಅಂತಿದ್ದ. ಹಾಗೆ ನಾವೂ ನೋಡೋಕೆ ಶುರು ಮಾಡಿದ್ವಿ. ಆದ್ರೆ ಅವನಿಗೆ ಆಗ್ಲೇ ಇಲ್ಲ. ಗಗನಸಖಿ ಬಂದು ಕಟ್ಟಿದ್ಲು. ನಂತರ ಹೆಂಡತಿಯನ್ನು ಮರೆತು ನಮ್ಮೊಂದಿಗೆ ಮಾತಿಗಿಳಿದಿದ್ದ. ಅವನ ಹೆಸರು ಕೃಷ್ಣಪ್ಪ. ಗುಂಡ್ಲುಪೇಟೆಯವನು. ಸುಮಾರು 50 ವರ್ಷ ಇರ್ಬಹುದು. ಯಾವುದೋ ಶಾಸಕನ ಆಪ್ತನಂತೆ. ಈಗಾಗಲೇ 24 ದೇಶ ಸುತ್ತಿದ್ದಾನಂತೆ. ತಿಂಗಳಿಗೆ ಎರಡು ಮೂರು ಬಾರಿಯಾದರೂ ವಿಮಾನದಲ್ಲಿ ಓಡಾಟ. ಕಳೆದ ತಿಂಗಳು ಜಪಾನ್ ಗೆ ಹೋಗಿದ್ನಂತೆ. ಮುಂದಿನ ತಿಂಗಳು ಲಂಡನ್ ಗೆ ಹೋಗಬೇಕಂತೆ. ಮಧ್ಯದ ಈ ದಿನಗಳಲ್ಲಿ ಮನೆಯಾಕೆಗೆ ಡೆಲ್ಲಿ ತೋರ್ಸೋಕಂತ ಕರ್ಕೋಂಡ್ ಬಂದಿದ್ದಾನಂತೆ... ನಾನು ಅವಾಕ್ಕಾದೆ! ಯಾಕಂದ್ರೆ ಅವನು ಯಾವ ಆಂಗಲ್ ನಲ್ಲೂ ಅಷ್ಟು ದೇಶ ಸುತ್ತಿದವನ ಹಾಗೆ ಕಾಣಿಸ್ತಿರ್ಲಿಲ್ಲ.

ವಿಮಾನ ಎರಡೂ ಮುಕ್ಕಾಲು ಗಂಟೇಲಿ ಡೆಲ್ಲಿ ತಲುಪ್ತು. ಗಗನಸಖಿ, "ವಿಮಾನ ಲ್ಯಾಂಡ್ ಆಗ್ತಿದೆ ಎಲ್ರೂ ಹೇಳೋವರೆಗೂ ಸೀಟ್ಬೆಲ್ಟ್ ತೆಗೀಬೇಡಿ", ಅಂತ ಅನೌನ್ಸ್ ಮಾಡ್ತಿದ್ದಾಂಗೆ ಈತ ಧಡ್ ಅಂತ ಎದ್ದು ಬಾಗಿಲ ಬಳಿ ಹೋಗಿ ನಿಂತ!

"ಸರ್ ಪ್ಲೀಸ್ ಬೈಟ್ ಜಾಯಿಯೆ. ವಿ ರಿಕ್ವೆಸ್ಟ್ ಯು ಸರ್ ಪ್ಲೀಸ್ ಸಿಟ್ ಡೌನ್", ಅಂತ ಆಕೆ ಕೂಗ್ತಾನೆ ಇದ್ರೂ ಜಗ್ಲಿಲ್ಲ!

"ಇಳ್ಯೋರು ಮುಂದ್ ಹೋಗಿ" ಅಂತ ಸಿಟಿ ಬಸ್ ಕಂಡಕ್ಟರ್ ಕೂಗಿದ ಕೂಡ್ಲೇ ಹೇಗೆ ಮುಂದ್ ಹೋಗಿ ನಿಲ್ತಾರೋ ಹಾಗೆ ಓಲಾಡ್ತಾ ನಿಂತಿದ್ದ. 24 ದೇಶ ಸುತ್ತಿದವನು ಯಾಕೆ ಹಿಂಗಾಡ್ತಿದಾನಪ್ಪ ಅಂತ ಗೊಣಗಿದೆ. ಪಕ್ಕದಲ್ಲಿ ಕುಳಿತವರು, "ವಿಮಾನದಲ್ಲಿ ಯಾವತ್ತೋ ಒಮ್ಮೆ ಹೋಗಿರ್ಬೇಕು. ಈಗ ಬಾಯಿಗೆ ಬಂದ ಊರುಗಳ ಹೆಸರನ್ನೆಲ್ಲ ಹೇಳಿ ಅಲ್ಲಿಗೆಲ್ಲ ಹೋಗಿ ಬಂದಿದೇನೆ ಅಂತಿದಾನೆ" ಅಂದಾಗ ನನಗೆ ಕಿಸಕ್ಕನೆ ನಗು ಬಂತು!

❍ ವೀಣಾ ವಾಸುದೇವ

No comments:

Post a Comment