ಕನ್ನಡಕವನ್ನು ಒರೆಸುತ್ತಾ ಆ ಹಿರಿಯರು ತನ್ನ ಹೆಂಡತಿಗೆ ಹೇಳಿದರು, "ನಮ್ಮ ಕಾಲದಲ್ಲಿ ಈ ಮೊಬೈಲ್ ಇರಲಿಲ್ಲ ನೋಡು.."
ಹೆಂಡತಿ: ಆದರೆ, ಸರಿಯಾಗಿ 5 ಗಂಟೆ 55 ನಿಮಿಷಕ್ಕೆ ನಾನು ನೀರಿನ ಲೋಟ ಹಿಡಿದುಕೊಂಡು ಬಾಗಿಲಿಗೆ ಬಂದು ನಿಲ್ಲುತ್ತಿದ್ದೆ. ಅದೇ ಸಮಯಕ್ಕೆ ಕೆಲಸ ಮುಗಿಸಿಕೊಂಡು ನೀವು ಬಾಗಿಲಲ್ಲಿ ಹಾಜರಾಗ್ತಿದ್ರಿ..
ಗಂಡ: ಹಾಂ! ನನ್ನ 30 ವರ್ಷಗಳ ವೃತ್ತಿಬದುಕಲ್ಲಿ ನನಗೆ ತಿಳಿಯದ ವಿಷಯ ಅದೊಂದೇ.. ನೀನು ನೀರು ತರುತ್ತೀಯಾ ಅಂತ ನಾನು ಸಮಯಕ್ಕೆ ಸರಿಯಾಗಿ ಬರುತ್ತಿದ್ದೆನಾ? ಅಥವಾ ನಾನು ಬರುತ್ತೇನೆ ಅಂತ ನೀನು ನೀರು ಹಿಡಿದು ನಿಲ್ಲುತ್ತಿದ್ದೆಯಾ? ಅದು ಇವತ್ತಿಗೂ ನನಗೆ ಒಂದ್ರೀತಿ ಸೋಜಿಗ ಕಣೇ..
ಹೆಂಡತಿ: ನಿಮಗೆ ನೆನಪಿದೆಯಾ? ನೀವು ರಿಟೈರ್ ಆಗೋಕೆ ಮುಂಚೆ ನಿಮಗೆ ಡಯಾಬಿಟೀಸ್ ಇರಲಿಲ್ಲ. ಆಗ ನಾನು ಪಾಯಸ ಮಾಡುತ್ತಿದ್ದೆ. ನೀವು ಪಾಯಸ ಕುಡೀತಾ ಹೇಳ್ತಿದ್ರಿ -ಇವತ್ತು ಮಧ್ಯಾಹ್ನ ಅನಿಸಿತ್ತು ಕಣೆ, ಪಾಯಸ ತಿನ್ನಬೇಕೂಂತ- ಅಂತ
ಗಂಡ: ನಿಜ ಕಣೇ, ಆಫೀಸಿನಿಂದ ಹೊರಡುವಾಗ ನನ್ನ ಮನದ ಬಯಕೆ ಏನಿರುತ್ತಿತ್ತೋ ಅದೇ ಅಡುಗೆ ನೀನು ಮಾಡಿಟ್ಟಿರುತ್ತಿದ್ದೆ!
ಹೆಂಡತಿ: ನಿಮಗೆ ನೆನಪಿದೆಯಾ? ನನ್ನ ಮೊದಲ ಹೆರಿಗೆಗೆ ತವರಿಗೆ ಹೋಗಿದ್ದೆ. ನನಗೆ ನೋವು ಶುರುವಾದಾಗ ನನಗನಿಸುತ್ತಿತ್ತು. ಅವರು ಈಗ ನನ್ನ ಜೊತೆ ಇದ್ದಿದ್ದರೆ ಎಷ್ಟೋ ಸಮಾಧಾನ ಆಗ್ತಿತ್ತು ಅಂತ. ನಾನು ಅಂದುಕೊಂಡ ಒಂದು ಗಂಟೆಯಲ್ಲಿ ನೀವು ನಿಜವಾಗಿ ಬಂದು, ನನ್ನ ತಲೆ ಸವರುತ್ತಿದ್ದಿರಿ!
ಗಂಡ: ಹೌದು, ಅವತ್ತು ಯಾಕೋ ನಿನ್ನ ನೋಡಬೇಕು ಅಂತ ತುಂಬಾ ಅನಿಸಿತ್ತು ನನಗೆ..
ಹೆಂಡತಿ: ತುಂಬ ಖುಷಿಯಾದಾಗ ಒಮ್ಮೊಮ್ಮೆ ನೀವು, ನನ್ನ ಕಣ್ಣಲ್ಲಿ ಕಣ್ಣಿಟ್ಟು ಕವಿತೆ ಹೇಳುತ್ತಿದ್ದಿರಿ, ನೆನಪಿದೆಯಾ?
ಗಂಡ: ಆಗ ನಾಚಿಕೆಯಿಂದ ನಿನ್ನ ಕಣ್ಣ ರೆಪ್ಪೆ ಮುಚ್ಚಿಕೊಳ್ಳುತ್ತಿತ್ತು. ಅದು ನೀನು ಕವಿತೆಗೆ ಕೊಟ್ಟ ಮೆಚ್ಚುಗೆ ಅಂದುಕೊಳ್ಳುತ್ತಿದ್ದೆ..
ಹೆಂಡತಿ: ಕೆಲವೊಮ್ಮೆ ನೀವು ಆಫೀಸ್ ಮುಗಿದ ಮೇಲೆ ಸಂಜೆ ಮಾಮೂಲಿ ಜಾಗಕ್ಕೆ ಬಾ. ಇಬ್ಬರೂ ಸಿನೆಮಾ ನೋಡಿ, ಹೊರಗೆ ಊಟ ಮಾಡಿ ಬರೋಣ ಅಂತ ಹೇಳಿ ಹೋಗಿರುತ್ತಿದ್ರಿ..
ಗಂಡ: ಹಾಗೆ ಕರೆದಾಗೆಲ್ಲಾ, ನಾನು ನೆನೆಸಿಕೊಂಡ ಸೀರೆಯನ್ನೇ ನೀನು ಉಟ್ಟು ಬರುತ್ತಿದ್ದೆ..
ಹೆಂಡತಿ ಗಂಡನ ಬಳಿ ಬಂದು ಕೈ ಹಿಡಿದು ಹೇಳಿದಳು, "ನಿಜ, ನಮ್ಮ ಕಾಲದಲ್ಲಿ ಮೊಬೈಲ್ ಇರಲಿಲ್ಲ. ಆದರೆ ನಾವು ಪ್ರತಿಕ್ಷಣವೂ ಜೊತೆಯಲ್ಲೇ ಇದ್ವಿ, ಒಬ್ಬರನ್ನೊಬ್ಬರು ನೆನೆಸಿಕೊಳ್ತಾ.. ಪರಸ್ಪರರ ಮನಸ್ಸನ್ನ ಅರ್ಥ ಮಾಡಿಕೊಳ್ತಾ.."
ಗಂಡ ಹೆಂಡತಿಯ ಮಾತಿಗೆ ಮೆಲುನಗೆಯ ಸಮ್ಮತಿ ಸೂಚಿಸುತ್ತಾ ಮನೆಯ ಹಜಾರದ ಸೋಫಾದ ಕಡೆ ಕಣ್ಣು ಹಾಯಿಸಿದರು.
ಮಗ, ಸೊಸೆ, ಮೊಮ್ಮಕ್ಕಳು ತಮ್ಮ ತಮ್ಮ ಮೊಬೈಲ್‌ನಲ್ಲಿ ಮುಳುಗಿದ್ದರು. ಹತ್ತಿರವೇ ಇದ್ದೂ ದೂರವಾಗಿದ್ದರು!

No comments:
Post a Comment