ಹಾಡಿನಿಂದ ಮೋಡಿ ಮಾಡಿದ ರಬ್ಬರ್ ತೋಟದ ಕೂಲಿ


ಸಾಮಾಜಿಕ ಮಾಧ್ಯಮಗಳು ಕೇವಲ ಟೈಮ್ ಪಾಸಿಗೆ ಅನ್ನೋ ಭಾವನೆ ಸಾರ್ವತ್ರಿಕ. ತುಸು ಭಯ ಹುಟ್ಟಿಸುವ ಸಂಗತಿ ಅಂದ್ರೆ ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಸಮಾಜದಲ್ಲಿ ವಿಷಬೀಜ ಬಿತ್ತುವ, ಸುಳ್ಳುಸುದ್ದಿ ಹರಡುವ ರಕ್ಕಸನಾಗಿ ಬೆಳೆದುನಿಂತಿದೆ. ಅದರ ಮಧ್ಯೆಯೇ ಸೋಷಿಯಲ್ ಮೀಡಿಯಾ ಸಾಕಷ್ಟು ಹಿತಕರ ಸಂಗತಿಗಳನ್ನೂ ವೈರಲ್ ಮಾಡುತ್ತ, ಅನಾಮಧೇಯರಿಗೆ ಖ್ಯಾತಿ ತಂದುಕೊಡುತ್ತಿರುತ್ತೆ. ಅಂಥ ವೈರಲ್ ಖ್ಯಾತನಾಮರ ಸಾಲಿಗೆ ಕೇರಳದ ಕೂಲಿ ಕೆಲಸಗಾರ ರಾಕೇಶ್ ಉನ್ನಿ ನೂರನಾಡು ಇದೀಗ ಸೇರ್ಪಡೆಯಾಗಿದ್ದಾರೆ.

ಕೇರಳದ ಅಳಪ್ಪುರದ ನೂರನಾಡು ಎಂಬ ಊರಿನ ರಬ್ಬರ್ ತೋಟದಲ್ಲಿ ಕಟಾವು ಮತ್ತು ಲಾರಿಗೆ ಸರಕು ತುಂಬುವ ಕೆಲಸ ಮಾಡುವ ರಾಕೇಶ್‌ಗೆ ಅದ್ಭುತ ಕಂಠಸಿರಿಯಿದೆ. ಕೆಲಸದ ಮಧ್ಯದ ಬಿಡುವಿನಲ್ಲಿ ಅವರು ಹಾಡಿದ ವಿಶ್ವರೂಪಂ ಚಿತ್ರದ ‘ಉನ್ನೈ ಕಾಣಾದೆ’ ಅನ್ನೋ ಹಾಡನ್ನ ಸಹೋದ್ಯೋಗಿ ಮೊಬೈಲ್ನಲ್ಲಿ ಸೆರೆ ಹಿಡಿದು ಸೋಷಿಯಲ್ ಸೈಟ್‌ನಲ್ಲಿ ಅಪ್ಲೋಡ್ ಮಾಡಿದ್ದಾನೆ. ಒಬ್ಬರಿಂದ ಒಬ್ಬರಿಗೆ ಹಂಚಿಕೆಯಾಗುತ್ತ ಮುಂದೆ ಸಾಗಿದ ಅವರ ಹಾಡಿನ ಮೋಡಿ, ಗಾಯಕ ಶಂಕರ್ ಮಹಾದೇವನ್‌ರನ್ನೂ ಬೆರಗುಗೊಳಿಸಿತ್ತು. 'ವಿಶ್ವರೂಪಂ' ಚಿತ್ರದಲ್ಲಿ ಈ ಹಾಡನ್ನು ಹಾಡಿದವರು ಶಂಕರ್ ಮಹಾದೇವನ್. ಗಾಯಕನ ಪರಿಚಯ, ಸಂಪರ್ಕ ಕೋರಿ ಅವರು ಟ್ವೀಟ್ ಮಾಡಿದ್ದರು.
ಅವರ ಟ್ವೀಟ್ ನೋಡಿ ಇತ್ತೀಚೆಗೆ ನಟ ಕಮಲಹಾಸನ್ ಕೂಡ ರಾಕೇಶ್‌ರನ್ನು ಭೇಟಿಯಾಗಿದ್ದಾರೆ. ಅವರ ಮುಂದೆ ರಾಕೇಶ್ ಹಾಡು ಹಾಡಿ ಖುಷಿಪಟ್ಟಿದ್ದಾರೆ, ಕಮಲ್‌ರನ್ನು ಖುಷಿಪಡಿಸಿದ್ದಾರೆ.
ತಮಿಳು ಸಂಗೀತ ನಿರ್ದೇಶಕ ಗಿಬ್ರಾನ್, ಮಲಯಾಳಂ ಸಂಗೀತ ನಿರ್ದೇಶಕ ಗೋಪಿ ಸುಂದರ್ ರಾಕೇಶ್‌ರಿಂದ ಹಾಡು ಹಾಡಿಸಲು ಉತ್ಸುಕರಾಗಿದ್ದಾರೆ. ಶಂಕರ್ ಮಹಾದೇವನ್ ಒಟ್ಟಿಗೆ ಹಾಡೋಣ ಅಂತ ಆಫರ್ ನೀಡಿದ್ದಾರೆ. ಸಿನಿಮಾ ಜಗತ್ತಿನ ಬಗ್ಗೆ ಕನಸು ಕಾಣದೆ ತನ್ನ ಖುಷಿಗೆ ಹಾಡಿಕೊಂಡಿದ್ದ ರಾಕೇಶ್‌ ಅವರ ಜಗತ್ತು ಊಹೆಗೂ ಮೀರಿ ಬದಲಾಗುತ್ತಿದೆ.

No comments:

Post a Comment