2015ರ ಚುನಾವಣೆಯಲ್ಲಿ, 70ರಲ್ಲಿ 67 ಸ್ಥಾನಗಳ ಅಭೂತಪೂರ್ವ ದಾಖಲೆ ಜಯದೊಂದಿಗೆ ಗೆದ್ದು ಅಧಿಕಾರಕ್ಕೆ ಏರಿದ ದಿನದಿಂದ ಇಲ್ಲಿಯವರೆಗೆ ದೆಹಲಿಯ ಎಎಪಿ ಸರ್ಕಾರ ಅರವಿಂದ ಕೇಜ್ರಿವಾಲರ ಹಠಮಾರಿ ಧೋರಣೆ ಹಾಗೂ ತುಸು ವಿಚಿತ್ರ ಅನಿಸುವ ವರ್ತನೆಗಳಿಂದಾಗಿಯೇ ಹೆಚ್ಚು ಸುದ್ದಿಯಲ್ಲಿದೆ! ದೆಹಲಿ ಸರ್ಕಾರ ಈವರೆಗೆ ಏನು ಮಾಡಿದೆ, ಮಾಡಿಲ್ಲ ಅಥವಾ ಮಾಡಬೇಕಿತ್ತು ಅನ್ನೋದು ಸುದ್ದಿಯಾಗಿದ್ದಕ್ಕಿಂತ ಹೆಚ್ಚು ಕೇಜ್ರಿವಾಲರೇ ಸುದ್ದಿಯ ಮುನ್ನೆಲೆಯಲ್ಲಿದ್ದರು.
ಇದಕ್ಕೆ ಎರಡು ಕಾರಣ; ದೇಶದ ರಾಜಕೀಯ ವೇದಿಕೆಯಲ್ಲಿ ಕೇಜ್ರಿವಾಲ್ ದಿಢೀರಂತ ಬೆಳೆದು ನಿಂತ ಪರಿ ಹಾಗೂ ಕೇವಲ ವಿರೋಧ ಪಕ್ಷಗಳಷ್ಟೇ ಅಲ್ಲ ಬಹುತೇಕ ಮೀಡಿಯಾದ ಮಂದಿಗೂ ಕೇಜ್ರಿವಾಲ್ ಬಗ್ಗೆ ಇರುವ ತಿರಸ್ಕಾರ ಮಿಶ್ರಿತ ಕುತೂಹಲ!
ನಿಜದ ಜನನಾಯಕ
ಅರವಿಂದ ಕೇಜ್ರಿವಾಲ್ ಜನರ ಮಧ್ಯದಿಂದಲೇ ಬೆಳೆದು ನಿಂತ ನಾಯಕ. ಅವರ ಧರಣಿಗಳಿಂದ ಹಿಡಿದು ಪಕ್ಷ ಸ್ಥಾಪಿಸಿ ಚುನಾವಣೆಗೆ ಸ್ಪರ್ಧಿಸಿ ದಿಲ್ಲಿಯ ಅಧಿಕಾರದ ಗದ್ದುಗೆ ಹಿಡಿಯುವವರೆಗೆ ಎಲ್ಲವಕ್ಕೂ ಸಾಥ್ ನೀಡಿದವರು, ಟೀಕಿಸಿದವರು, ವಿರೋಧಿಸಿದವರು ಸಾಮಾನ್ಯ ಜನರೇ. ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿ ಗುಜರಾತಿನ ಮುಖ್ಯಮಂತ್ರಿ ಆಗುವುದಕ್ಕಿಂತ ಮುಂಚೆ ಸುಮಾರು 30 ವರ್ಷಗಳ ಕಾಲ ಆರೆಸ್ಸೆಸ್, ಬಿಜೆಪಿ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿದ್ದರು. ಮೊದಲ ಬಾರಿ ಅವರಿಗೆ ಸಿಎಂ ಪಟ್ಟ ದಯಪಾಲಿಸಿದ್ದು ಎಲ್.ಕೆ. ಆಡ್ವಾಣಿಯವರೇ ಹೊರತು ಜನರಲ್ಲ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಪಕ್ಷವೇ ಪದವಿಯನ್ನು ಬೆಳ್ಳಿಯ ತಟ್ಟೆಯಲ್ಲಿಟ್ಟು ಕೊಟ್ಟಿದೆ. ಮುಂದೊಂದು ದಿನ ಮಿತ್ರಕೂಟದ ಬಲದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರುವಂತಾದರೆ ರಾಹುಲ್ ಗಾಂಧಿಗೆ ಸಲೀಸಾಗಿ ಪ್ರಧಾನಿ ಹುದ್ದೆಯೂ ಸಿಗಬಹುದು. ರಾಹುಲ್ ಗಾಂಧಿ ಒಬ್ಬರೇ ಅಲ್ಲ, ದೇಶದ ಬಹುತೇಕ ಪಕ್ಷಗಳ ಈಗಿನ ನಾಯಕರೆಲ್ಲ ವಂಶಪಾರಂಪರ್ಯದಿಂದ ಅಧಿಕಾರ ಹಿಡಿದು ಕೂತವರೇ. ಇವರೆಲ್ಲರಿಗಿಂತ ಭಿನ್ನವಾಗಿ ಮತ್ತು ನೈಜವಾಗಿ ಜನಬೆಂಬಲ ಪಡೆದ ನಾಯಕ ಕೇಜ್ರಿವಾಲ್. ಆ ವಿಷಯದಲ್ಲಿ ಅವರದ್ದು ಅದ್ಭುತ ಸಾಧನೆ.ಈ ಜಟಾಪಟಿ ಶುರುವಾಗೋದಕ್ಕೆ ಕಾರಣ 2015ರ ಮೇ ತಿಂಗಳಲ್ಲಿ ಕೇಂದ್ರ ಸರ್ಕಾರ ಹೊರಡಿಸಿದ ಒಂದು ಅಧಿಸೂಚನೆ. ಅದಕ್ಕಿಂತ ಮುಂಚೆ ಅಧಿಕಾರಿಗಳ ನೇಮಕ, ವರ್ಗಾವಣೆ, ಸೇವೆಗಳು, ಭ್ರಷ್ಟಾಚಾರ ನಿಗ್ರಹ ದಳ ಇವೆಲ್ಲವೂ ದೆಹಲಿಯ ಚುನಾಯಿತ ಸರ್ಕಾರದ ಅಧೀನದಲ್ಲಿದ್ದವು. 2015ರ ಮೇ ತಿಂಗಳಿನಲ್ಲಿ ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ ಅಧಿಕಾರಿಗಳ ನೇಮಕ, ಸೇವೆಗಳು ಮತ್ತು ಎಸಿಬಿ ಎಲ್ಲವನ್ನೂ ಕೇಂದ್ರದ ತೆಕ್ಕೆಗೆ ತೆಗೆದುಕೊಂಡಿತು. ಈ ನಿರ್ಧಾರದ ಹಿಂದೆ ಕೆಲವರನ್ನು ಎಸಿಬಿ ವಿಚಾರಣೆಯಿಂದ ರಕ್ಷಿಸುವ ಉದ್ದೇಶವಿತ್ತು!
ವರ್ತನೆ ಬದಲಾಗಲಿಲ್ಲ!
ಪಕ್ಷ ಕಟ್ಟಿ ಚುನಾವಣೆ ಗೆದ್ದು ದೆಹಲಿ ಗದ್ದುಗೆ ಹಿಡಿದ ಕೇಜ್ರಿವಾಲ್ ಆ ಬಳಿಕವೂ ಸಾಮಾನ್ಯರಾಗಿಯೇ ಉಳಿದರಾ - ತಮ್ಮ ವರ್ತನೆಯಲ್ಲಿ- ಅನ್ನುವ ಪ್ರಶ್ನೆ ಆಗಾಗ ಬಂದದ್ದಿದೆ. ‘ಪ್ರಧಾನಿ ನರೇಂದ್ರ ಮೋದಿ ಪುಕ್ಕಲ ಹಾಗೂ ವಿಕೃತ ಮನಸ್ಸಿನವ’ ಅಂತ ಕೇಜ್ರಿವಾಲ್ ಟ್ವೀಟ್ ಮಾಡಿದಾಗ ಅನೇಕರಿಗೆ ದಿಗಿಲಾಗಿತ್ತು. ಒಂದು ರಾಜ್ಯದ ಸಿಎಂ ದೇಶದ ಪ್ರಧಾನಿಯನ್ನು ಹೀಗೆ ಕರೆದು ಅವಮಾನಿಸುವುದು ಸರಿಯಲ್ಲ ಅನ್ನುವ ಅಭಿಪ್ರಾಯ ಸಾರ್ವತ್ರಿಕವಾಗಿ ವ್ಯಕ್ತವಾಗಿತ್ತು.ರಾಜಕಾರಣಿ, ಪೊಲೀಸ್, ಸರ್ಕಾರಿ ಅಧಿಕಾರಿ.. ಇಂಥವರ ಬಗ್ಗೆ ಯಾರಾದರೂ ಸಾಮಾನ್ಯರನ್ನು ಕೇಳಿ ನೋಡಿ. ಅವರು ಬಾಯಿಗೆ ಬಂದಂತೆ ಬೈದು ತಮ್ಮ ಸಿಟ್ಟು ಶಮನ ಮಾಡಿಕೊಳ್ಳುತ್ತಾರೆ. ಶಿಷ್ಟಾಚಾರದ ಚೌಕಟ್ಟು ಅವರಿಗೆ ಅನ್ವಯ ಆಗೋದಿಲ್ಲ. ಕೇಜ್ರಿವಾಲರ ವರ್ತನೆ ಕೂಡ ಇದೇ ರೀತಿ ಇದೆ. ಇಲ್ಲಿಯವರೆಗೆ ದೂಷಿಸುತ್ತಿದ್ದ ವ್ಯವಸ್ಥೆಯ ಮುಖ್ಯಸ್ಥನಾಗಿ ತಾನಿದ್ದೇನೆ ಎಂಬುದನ್ನು ಕೇಜ್ರಿವಾಲ್ ಮರೆತಿರುವುದು ವಿಪರ್ಯಾಸ.
ಸರ್ಕಾರ ಆರಂಭದ ದಿನದಿಂದಲೂ ಕೇಂದ್ರ ಸರ್ಕಾರದ ಜೊತೆ ಒಂದಲ್ಲಾ ಒಂದು ಕಾರಣಕ್ಕೆ ಕ್ಯಾತೆ ತೆಗೆದು ಜಗಳಕ್ಕೆ ಇಳಿಯುತ್ತಿದ್ದ ಕೇಜ್ರಿವಾಲರ ಬಗ್ಗೆ ಬಹುತೇಕರಿಗೆ ತಿರಸ್ಕಾರ ಬರುವುದಕ್ಕೆ ಮಾಧ್ಯಮಗಳ ಕೊಡುಗೆ ಸಾಕಷ್ಟಿದೆ! ಏಕೆಂದರೆ ಮಾಧ್ಯಮಗಳು ವರದಿ ಮಾಡಿದ್ದು ಕೇವಲ ಒಂದು ಮುಖವನ್ನು ಮಾತ್ರ. ಕೇಜ್ರಿ ಸರ್ಕಾರ ಸುಪ್ರೀಂಕೋರ್ಟ್ನವರೆಗೆ ಹೋಗಿ ಅಧಿಕಾರ ಪಡೆಯುವ ಹಂತಕ್ಕೆ ಯಾಕೆ ಬರಬೇಕಾಯಿತು ಅಂತ ಪರಿಶೀಲಿಸಿದರೆ ಅಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಂಚು ಮತ್ತು ಕುತಂತ್ರ ಸ್ಪಷ್ಟವಾಗಿ ಕಾಣಿಸುತ್ತದೆ!
2015ರ ಮೇ ತಿಂಗಳ ಅಧಿಸೂಚನೆ...
ಕೇಂದ್ರ ಸರ್ಕಾರ ಉದ್ಯಮಿಗಳಿಗೆ ಲಾಭ ಮಾಡಿಕೊಡಲು ಅನಿಲ ಬೆಲೆ ಫಿಕ್ಸಿಂಗ್ ನಡೆಸಿದೆ. ಈ ಬೆಲೆ ಹೆಚ್ಚಳದಿಂದ ಮುಖೇಶ್ ಅಂಬಾನಿ ಸಂಸ್ಥೆಗೆ 1.2 ಲಕ್ಷ ಕೋಟಿ ಲಾಭವಾಗುತ್ತದೆ. ಈ ಮೂಲಕ ದೇಶದ ಜನರ ಹಣವನ್ನು ಲೂಟಿ ಮಾಡಲಾಗುತ್ತಿದೆ. ಸರ್ಕಾರಕ್ಕೆ ರಿಲಯನ್ಸ್ ಸಂಸ್ಥೆ ಕಾಣಿಕೆ ಸಲ್ಲಿಸಿದ ಹಿನ್ನೆಲೆಯಲ್ಲಿ ಪೆಟ್ರೋಲಿಯಂ ಸಚಿವ ವೀರಪ್ಪ ಮೊಯ್ಲಿ, ಅಂಬಾನಿಗೆ ಈ ಕೊಡುಗೆ ನೀಡಿದ್ದಾರೆ ಎಂದು ಮಾಜಿ ಸಂಪುಟ ಕಾರ್ಯದರ್ಶಿ ಟಿಎಸ್‌ಆರ್ ಸುಬ್ರಮಣಿಯನ್, ಮಾಜಿ ನೌಕಾಪಡೆ ಮುಖ್ಯಸ್ಥ ಆರ್.ಎಚ್. ತಹಿಲ್ಯಾನಿ ಮತ್ತು ಇತರರು ಆರೋಪಿಸಿ ದಾಖಲೆ ಸಲ್ಲಿಸಿದ್ದರು. ಇದನ್ನು ಆಧರಿಸಿ, ಸಿಎಂ ಕೇಜ್ರಿವಾಲ್ ದೆಹಲಿ ಎಸಿಬಿ(ಭ್ರಷ್ಟಾಚಾರ ನಿಗ್ರಹ ದಳ)ಗೆ ಈ ಬಗ್ಗೆ ತನಿಖೆ ನಡೆಸಲು 2014ರ ಫೆಬ್ರವರಿಯಲ್ಲಿ ಆದೇಶಿಸಿದ್ದರು. ಆಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಇದನ್ನು ನಿರಾಕರಿಸಿ ತನಿಖೆಗೆ ತಡೆಯಾಜ್ಞೆ ನೀಡುವಂತೆ ಕೋರಿ ಹೈಕೋರ್ಟ್ ಮೆಟ್ಟಿಲು ಏರಿತ್ತು.ಆಶ್ಚರ್ಯ ಅಂದರೆ 2014ರ ಚುನಾವಣೆ ಬಳಿಕ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೂಡ ಕಾಂಗ್ರೆಸ್ ಸರ್ಕಾರದ ಸಚಿವರ ಪರ ವಾದ ಮಂಡಿಸಿ, ಎಸಿಬಿ ತನಿಖೆಗೆ ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾಯಿತು! ಕೋರ್ಟ್‌ನಲ್ಲಿ ಪ್ರಕರಣ ಮುಂದುವರಿದಿತ್ತು. ಈ ಮಧ್ಯೆ 2015ರ ಮೇ ತಿಂಗಳಲ್ಲಿ ಕೇಂದ್ರ ಸರ್ಕಾರ ಎಸಿಬಿಯನ್ನೇ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ನಿರ್ಧರಿಸಿತು. ಆ ಮೂಲಕ ತನಗೆ ಬೇಕಾದಂತೆ ತನಿಖೆಯನ್ನು ಸ್ಥಗಿತಗೊಳಿಸುವ/ ತಿರುಚುವ ಉದ್ದೇಶ ಕೇಂದ್ರ ಸರ್ಕಾರದ್ದಾಗಿತ್ತು. 2015ಕ್ಕಿಂತ ಮುಂಚೆ ಅಧಿಕಾರಿಗಳ ನೇಮಕ, ವರ್ಗಾವಣೆ, ಸೇವೆಗಳು, ಭ್ರಷ್ಟಾಚಾರ ನಿಗ್ರಹ ದಳ ಇವೆಲ್ಲವೂ ದೆಹಲಿಯ ಚುನಾಯಿತ ಸರ್ಕಾರದ ಅಧೀನದಲ್ಲಿದ್ದವು. ಸಚಿವ ಸಂಪುಟದ ನಿರ್ಧಾರವನ್ನು ಉಪರಾಜ್ಯಪಾಲರ ಗಮನಕ್ಕೆ ತಂದು ಕೆಲಸ ನಿರ್ವಹಿಸಲಾಗುತ್ತಿತ್ತು. ಆದರೆ 2015ರ ಮೇ ತಿಂಗಳಿನಲ್ಲಿ ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ ಅಧಿಕಾರಿಗಳ ನೇಮಕ, ಸೇವೆಗಳು ಮತ್ತು ಎಸಿಬಿ ಎಲ್ಲವನ್ನೂ ವಶಕ್ಕೆ ಪಡೆದುಕೊಂಡಿತು. ಕೇಂದ್ರದ ಸೂಚನೆ ಮೇರೆಗೆ ಉಪರಾಜ್ಯಪಾಲರೇ ಇವನ್ನೆಲ್ಲ ನಿರ್ವಹಿಸಲು ಆರಂಭಿಸಿದರು. ಚುನಾಯಿತ ಸರ್ಕಾರ ಎಲ್ಲ ಅಧಿಕಾರ ಕಳೆದುಕೊಂಡು ಕೈಕಟ್ಟಿ ಕೂರುವಂತಾಯಿತು.
ಇದೀಗ ಸುಪ್ರೀಂಕೋರ್ಟ್ ನೀಡಿರುವ ತೀರ್ಪು, 2015ರ ಮೇ ತಿಂಗಳಿಗಿಂತ ಹಿಂದಿದ್ದ ಎಲ್ಲ ಅಧಿಕಾರಗಳನ್ನು ದೆಹಲಿ ಸರ್ಕಾರಕ್ಕೆ ಮರಳಿಸಿದೆ. ಭೂಮಿ, ಕಾನೂನು ಸುವ್ಯವಸ್ಥೆ ಮತ್ತು ಪೊಲೀಸ್ ಇವು ಮೂರು ಕೇಂದ್ರದ ಅಧೀನದಲ್ಲಿ ಇರಲಿವೆ. 2015ಕ್ಕಿಂತ ಮುಂಚೆ ಕೂಡ ಇವು ಕೇಂದ್ರದ ಅಧೀನದಲ್ಲೇ ಇದ್ದವು.
![]() |
| ಕೇಜ್ರಿ ವರ್ಸಸ್ ಕೇಂದ್ರ ಜಟಾಪಟಿಯ ಈವರೆಗಿನ ಹಾದಿ. ಮಾಹಿತಿ ಕೃಪೆ: ಪಿಟಿಐ |
ಪೂರ್ಣರಾಜ್ಯ: ಭಾಜಪಾ ಯೂಟರ್ನ್
ದೆಹಲಿಗೆ ಪೂರ್ಣ ರಾಜ್ಯದ ಸ್ಥಾನ ಮಾನ ನೀಡಿದರೆ ಮಾತ್ರ ಹಕ್ಕಿನ ಅನುದಾನ ಪಡೆಯಲು ಮತ್ತು ಅದನ್ನು ಸಮರ್ಪಕವಾಗಿ ಬಳಕೆ ಮಾಡಲು ಸಾಧ್ಯ. ಉಳಿದ ರಾಜ್ಯಗಳಿಗೆ ಸಿಗುವಂತೆ ದೆಹಲಿಗೆ ಕೇಂದ್ರದ ಅನುದಾನ ಸಿಗೋದಿಲ್ಲ. ದೆಹಲಿಯಿಂದ ತೆರಿಗೆ ರೂಪದಲ್ಲಿ ಸಂಗ್ರಹವಾಗಿ ಕೇಂದ್ರಕ್ಕೆ ತಲುಪುವ ಅರ್ಧದಷ್ಟು ಅನುದಾನವೂ ದೆಹಲಿಗೆ ಮರಳಿ ಸಿಗೋದಿಲ್ಲ. ಇದರ ಜೊತೆಗೆ ಕಾನೂನು ಸುವ್ಯವಸ್ಥೆ ಇತ್ಯಾದಿ ವಿಷಯಗಳಲ್ಲಿ ಹೊಣೆ ಯಾರದ್ದು ಅನ್ನುವ ಗೊಂದಲ ಸದಾ ಇರುತ್ತದೆ. ಇದನ್ನು ಪರಿಹರಿಸಲು ಪೂರ್ಣರಾಜ್ಯದ ಸ್ಥಾನಮಾನ ಒಂದೇ ಪರಿಹಾರ ಅನ್ನೋದು ಎಎಪಿ ವಾದ.ಇದನ್ನು ಒಪ್ಪದ ಭಾಜಪಾ ಮತ್ತು ಕಾಂಗ್ರೆಸ್, ದೇಶದ ರಾಜಧಾನಿಯಾಗಿರುವ ದೆಹಲಿಗೆ ಸುರಕ್ಷತೆ ದೃಷ್ಟಿಯಿಂದ ಪೊಲೀಸ್ ಹಾಗೂ ಕಾನೂನು ಸುವ್ಯವಸ್ಥೆ ಕೇಂದ್ರ ಸರ್ಕಾರದ ಅಧೀನದಲ್ಲೇ ಇರಬೇಕು ಎನ್ನುತ್ತಿದೆ. ಇದು ಅರ್ಧಸತ್ಯ. ವಿಧಾನಸೌಧಕ್ಕೆ ಸಿವಿಲ್ ಪೊಲೀಸ್, ದಂಗೆ ನಿಯಂತ್ರಣಕ್ಕೆ ಕ್ಷಿಪ್ರ ಕಾರ್ಯ ಪಡೆ, ಕ್ರಿಮಿನಲ್ ಪ್ರಕರಣಗಳಿಗೆ ಪೊಲೀಸ್, ಸಂಚಾರ ನಿಯಂತ್ರಣಕ್ಕೆ ಟ್ರಾಫಿಕ್ ಪೊಲೀಸ್ ಹೀಗೆ ಪ್ರತ್ಯೇಕ ಪೊಲೀಸ್ ಪಡೆಗಳನ್ನು ನಿರ್ವಹಿಸೋದು ಸಾಧ್ಯವಿರುವಾಗ ದೆಹಲಿಯ ನಾಗರಿಕ ವ್ಯಾಪ್ತಿಗೆ ಒಂದು ಪೊಲೀಸ್ ಪಡೆ ನಿರ್ಮಾಣ ಖಂಡಿತ ಸಾಧ್ಯವಿದೆ. ಪಾರ್ಲಿಮೆಂಟ್‌ನಂಥ ಪ್ರದೇಶಗಳ ರಕ್ಷಣೆಗೆ ಪ್ರತ್ಯೇಕ ಮೀಸಲು ಪೊಲೀಸ್ ಪಡೆ ನಿರ್ಮಿಸಲೂ ಸಾಧ್ಯವಿದೆ. ಹಾಗಾದಾಗ ಪಿಕ್‌ಪಾಕೆಟ್‌ನಂಥ ಒಂದು ಪ್ರಕರಣಕ್ಕೂ, ಸಂಸತ್ ಭದ್ರತೆ ಒದಗಿಸುವುದಕ್ಕೂ ಒಂದೇ ಪೊಲೀಸ್ ಪಡೆಯ ನಿಯೋಜನೆ ಮಾಡಬೇಕಾಗುವುದಿಲ್ಲ.
ಅಂದಹಾಗೆ, ದೆಹಲಿಗೆ ಪೂರ್ಣರಾಜ್ಯದ ಸ್ಥಾನಮಾನದ ಬೇಡಿಕೆ ಮೊದಲು ಇಟ್ಟಿದ್ದೇ ಬಿಜೆಪಿ. 2013ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಪೂರ್ಣರಾಜ್ಯ ಆಶ್ವಾಸನೆ ಭಾಜಪಾ ಪ್ರಣಾಳಿಕೆಯಲ್ಲಿತ್ತು. 2014ರ ಲೋಕಸಭಾ ಚುನಾವಣೆಯಲ್ಲೂ ಹೊಸ ಪ್ರಧಾನಿ ನೇಮಕವಾದ ನಂತರ ದೆಹಲಿ ಪೂರ್ಣರಾಜ್ಯವಾಗಲಿದೆ ಎಂಬ ಭರವಸೆ ನೀಡಲಾಗಿತ್ತು. ಆದರೆ ಅಧಿಕಾರಕ್ಕೆ ಬಂದ ತಕ್ಷಣ ಎಲ್ಲವನ್ನೂ ಮರೆತು ಯೂಟರ್ನ್ ಹೊಡೆದಿರುವ ಭಾಜಪಾ ಮಂದಿ ಈಗ ಭಗವದ್ಗೀತೆಯ ಪಾಠ ಮಾಡುತ್ತಿದ್ದಾರೆ. ಎಲುಬಿಲ್ಲದ ನಾಲಗೆಯ ನಿರ್ಲಜ್ಜರು!


No comments:
Post a Comment