ಮೊಬೈಲ್ ಇಂಟರ್ನೆಟ್‌ಗೆ ಪ್ರಾಧಾನ್ಯತೆ ಕೊಟ್ಟು ಕರೆಯನ್ನು ಪೂರ್ತಿ ಉಚಿತ ಆಫರ್ ಮಾಡಿದ ಜಿಯೋ ಮೊಬೈಲ್ ಫೋನ್ ಜಗತ್ತಿನಲ್ಲಿ ಹೊಸ ಅಲೆ ಸೃಷ್ಟಿಸಿ ಅದರಲ್ಲಿ ಸಾಕಷ್ಟು ಯಶಸ್ಸನ್ನೂ ಕಂಡಿದೆ. 4ಜಿ ಇಂಟರ್ನೆಟ್ ಸೇವೆಯಲ್ಲಿ ಉಳಿದೆಲ್ಲ ಸಂಸ್ಥೆಗಳಿಗಿಂತ ಜಿಯೋ ಉತ್ತಮ ವೇಗ ಮತ್ತು ಅಡಚಣೆರಹಿತ ಇಂಟರ್ನೆಟ್ ಒದಗಿಸ್ತಿದೆ ಅನ್ನೋದೂ ಕೂಡ ಅಷ್ಟೇ ಸತ್ಯ.
ಆದರೂ ಜಿಯೋ ಸಿಮ್ ಬಳಸುವವರಿಗೆ ಸ್ವಲ್ಪ ಕಿರಿಕಿರಿ ಅನ್ನಿಸುವ ವಿಷಯ ಒಂದಿದೆ; ಜಿಯೋದಲ್ಲಿ ಉಳಿದ ಸಂಸ್ಥೆಗಳ ಹಾಗೆ ಲೈಫ್ ಟೈಮ್ ವ್ಯಾಲಿಡಿಟಿ ಅನ್ನೋ ಸ್ಕೀಮ್ ಇಲ್ಲ. ಏರ್ಟೆಲ್, ಐಡಿಯಾ ಇತ್ಯಾದಿ ಮೊಬೈಲ್ ಸೇವಾ ಸಂಸ್ಥೆಗಳು ಸಿಮ್‌ಗೆ ಲೈಫ್ ಟೈಮ್ ವ್ಯಾಲಿಡಿಟಿ ನೀಡ್ತಿವೆ. ಅಂದ್ರೆ ಪ್ರತೀ ತಿಂಗಳೂ ಗ್ರಾಹಕರು ರೀಚಾರ್ಜ್ ಮಾಡಿಸಲೇಬೇಕಾಗಿಲ್ಲ. ಅಗತ್ಯ ಇದ್ದಾಗ ಅಗತ್ಯ ಇದ್ದಷ್ಟು ರೀಚಾರ್ಜ್ ಮಾಡಿಸಿಕೊಳ್ಳುವ ಸ್ವಾತಂತ್ರ್ಯ ಗ್ರಾಹಕರಿಗಿದೆ.
ಉದಾಹರಣೆಗೆ ಏರ್ಟೆಲ್ ಸಿಮ್‌ಗೆ 2 ತಿಂಗಳು ರೀಚಾರ್ಜ್ ಮಾಡಿಸಿಲ್ಲ ಅಂತಿಟ್ಟುಕೊಳ್ಳಿ. ಬ್ಯಾಲೆನ್ಸ್ ಇಲ್ಲದಿದ್ದರೆ ಇಂಟರ್ನೆಟ್ ಬಳಕೆ ಅಥವಾ ಕರೆ ಮಾಡೋದಕ್ಕೆ ಸಾಧ್ಯವಾಗಲ್ಲ. ಆದರೆ ಒಳಬರುವ ಕರೆಗಳಿಗೆ ಅಡೆತಡೆ ಇರೋದಿಲ್ಲ. ಹಾಗಾಗಿ ಬ್ಯಾಲೆನ್ಸ್ ಇಲ್ಲದ ನಿಮ್ಮ ಸಿಮ್ ಕಾರ್ಡಿಗೂ ಬೇರೆಯವರು ಕರೆ ಮಾಡಿ ಮಾತಾಡಬಹುದು. ಅಂದರೆ ಒಳಬರುವ ಕರೆಗಳಿಗೆ ಯಾವುದೇ ನಿರ್ಬಂಧ ಇರೋದಿಲ್ಲ.
ಆದರೆ ಜಿಯೋ ಸಿಮ್ ಕಾರ್ಡಿನಲ್ಲಿ ಲೈಫ್ಟೈಮ್ ವ್ಯಾಲಿಡಿಟಿ ಇಲ್ಲ. ರೀಚಾರ್ಜ್ ಅವಧಿ ಮುಗಿದ ಕೆಲ ದಿನಗಳಲ್ಲಿ ಒಳಬರುವ ಕರೆ ಸೇರಿದಂತೆ ಕರೆ, ಇಂಟರ್ನೆಟ್ ಸೌಲಭ್ಯಗಳೆಲ್ಲ ಬಂದ್ ಆಗುತ್ತವೆ. ಆ ಸಿಮ್ ಬಳಸಬೇಕೆಂದಿದ್ದರೆ ನೀವು ರೀಚಾರ್ಜ್ ಮಾಡಿಸಲೇಬೇಕು. ಇಲ್ಲವಾದಲ್ಲಿ ಅದು ಮೊಬೈಲ್ನಲ್ಲಿ ಇದ್ದೂ ಇಲ್ಲದ ಡೆಡ್ ಸಿಮ್ ಆಗಿರುತ್ತದೆ.
ಜಿಯೋ ಗ್ರಾಹಕರಿಗೆ ಸ್ವಲ್ಪ ಕಿರಿಕಿರಿ ಅನ್ನಿಸುವ ವಿಷಯ ಅಂದರೆ ಅದರ 28 ದಿನಗಳಿಗೆ ಒಂದು ತಿಂಗಳ ಲೆಕ್ಕದ ವ್ಯಾಲಿಡಿಟಿ. ಇದರಿಂದ ವರ್ಷಕ್ಕೆ 12ರ ಬದಲು 13 ಬಾರಿ, ಅಂದರೆ ಒಂದು ತಿಂಗಳು ಹೆಚ್ಚು ರೀಜಾರ್ಜ್ ಮಾಡಿಸಬೇಕಾಗುತ್ತದೆ. ಇದನ್ನು ತಪ್ಪಿಸಿ ವ್ಯಾಲಿಡಿಟಿ ಬಳಿಕವೂ ಕರೆ, ಇಂಟರ್ನೆಟ್ ಸೇವೆಗಳನ್ನು ಬಳಸಿಕೊಳ್ಳುವ ಅವಕಾಶ ಜಿಯೋದಲ್ಲೇ ಇದೆ!
ಜಿಯೋ ಸಂಸ್ಥೆ ಜಾರಿಗೆ ತಂದ ಮತ್ತೊಂದು ಗ್ರಾಹಕ ವಿರೋಧಿ ನಿಲುವು ಅಂದರೆ 28 ದಿನಗಳ ವಾಯಿದೆ ಅವಧಿ. ಈ ಹಿಂದೆ ಮೊಬೈಲ್ ಸಂಸ್ಥೆಗಳು 30 ದಿನಗಳ ವ್ಯಾಲಿಡಿಟಿಯ ರೀಚಾರ್ಜ್ ಸೌಲಭ್ಯ ನೀಡುತ್ತಿದ್ದವು. ಆದರೆ ಜಿಯೋ ತಿಂಗಳಲ್ಲಿ 2 ದಿನ ಕಟ್ ಮಾಡಿ 28 ದಿನಗಳ ವ್ಯಾಲಿಡಿಟಿ ಜಾರಿಗೆ ತಂದಿತು. ಇದರಿಂದ ತಿಂಗಳಲ್ಲಿ 2 ಕೆಲವು ತಿಂಗಳಲ್ಲಿ 3 ದಿನ ಹೆಚ್ಚುವರಿಯಾಗಿ ವರ್ಷಕ್ಕೆ 28 ದಿನಗಳ ಮತ್ತೊಂದು ತಿಂಗಳು ಸೃಷ್ಟಿಯಾಗುತ್ತೆ. ಅಂದರೆ ಜಿಯೋ ಗ್ರಾಹಕರು 12 ತಿಂಗಳ ಬದಲು 13 ತಿಂಗಳ ರೀಜಾರ್ಜ್ ಮಾಡಿಸಿಕೊಳ್ಳಬೇಕಾಗುತ್ತದೆ.
ಜಿಯೋ ಪ್ರಿಪೇಯ್ಡ್ ಪ್ಲಾನ್‌ಗಳಲ್ಲಿ ಕಡಿಮೆ ವೆಚ್ಚದ ಪ್ಲ್ಯಾನ್ 349 ರೂ.ನದ್ದು. 349 ರೂ. ರೀಚಾರ್ಜ್ ಮಾಡಿಸಿದಾಗ ದಿನಕ್ಕೆ 1.5 ಜಿಬಿ ಡೇಟಾ ಹಾಗೂ ಅನಿಯಮಿತ ಕರೆ ಸೌಲಭ್ಯ ಸಿಗುತ್ತದೆ. ಇದಕ್ಕೆ 70 ದಿನಗಳ ವ್ಯಾಲಿಡಿಟಿ ಇದೆ. ಅಂದರೆ ಸುಮಾರು ಎರಡೂವರೆ ತಿಂಗಳ ಅವಧಿ. ದಿನಕ್ಕೆ 5 ರೂ. ನೀಡಿದ ಹಾಗಾಗುತ್ತದೆ. ಇದನ್ನು 70ರ ಬದಲು 100 ದಿನ ಬಳಸುವ ಹಾಗಾದರೆ ದಿನಕ್ಕೆ 3.50 ರೂ.ನಷ್ಟು ವೆಚ್ಚ ಬರುತ್ತದೆ. ಅಂದರೆ ಗ್ರಾಹಕರಿಗೆ ದಿನಕ್ಕೆ 1.50 ರೂ. ಉಳಿತಾಯವಾಗುತ್ತದೆ. ಈ ರೀತಿ ವ್ಯಾಲಿಟಿಡಿ ವಿಸ್ತರಣೆ ಮಾಡಿಕೊಳ್ಳೋದಕ್ಕೆ ಜಿಯೋದಲ್ಲೇ ಒಂದು ಅವಕಾಶವಿದೆ!
ಹೌದು, ಇದಕ್ಕಾಗಿ ನೀವು ಯಾವುದೇ ಟ್ವೀಕಿಂಗ್ ಮಾಡಬೇಕಿಲ್ಲ. ಇದು ಯಾವ ರೀತಿಯಲ್ಲೂ ಕಾನೂನುಬಾಹಿರವೂ ಅಲ್ಲ. ನೀವು ಮಾಡಬೇಕಾದ್ದು ಇಷ್ಟೇ. ವ್ಯಾಲಿಡಿಟಿ ಮುಗಿದ ಮೇಲೆ ಮತ್ತೆ 30 ದಿನಗಳ ಕಾಲ ರೀಚಾರ್ಜ್ ಮಾಡಿಸಬೇಡಿ!
ಜಿಯೋ ಸಿಮ್ ರೀಚಾರ್ಜ್ ಅವಧಿ ಮುಗಿದ ನಂತರ 30 ದಿನಗಳ ಕಾಲ ಗ್ರೇಸ್ ಪೀರಿಯಡ್ ಅಂದರೆ ವಿಸ್ತರಿಸಿದ ಅವಧಿ ಇರುತ್ತದೆ. ಈ 30 ದಿನಗಳ ಕಾಲ ತಗ್ಗಿಸಿದ ವೇಗ, ಅಂದರೆ 128 ಕೆಬಿಪಿಎಸ್ ವೇಗದಲ್ಲಿ ಅನಿಯಮಿತ ಇಂಟರ್ನೆಟ್ ಸಂಪರ್ಕ ಇರುತ್ತದೆ. ಜೊತೆಗೆ ಜಿಯೋದಿಂದ ಬೇರೆ ಯಾವುದೇ ಜಿಯೋ ಸಂಖ್ಯೆಗೆ ಅನಿಯಮಿತ ಕರೆ ಸೌಲಭ್ಯವೂ ಇರುತ್ತದೆ. ವಾಟ್ಸಪ್, ಫೇಸ್ಬುಕ್ನಂಥ ಆ್ಯಪ್‌ಗಳನ್ನು 128 ಕೆಬಿಪಿಎಸ್ ವೇಗದ ಇಂಟರ್ನೆಟ್ನಲ್ಲಿ ಸಲೀಸಾಗಿ ಬಳಸಬಹುದು.
ಜಿಯೋದಿಂದ ಜಿಯೋ ಸಂಖ್ಗೆಗೆ ಮಾತ್ರ ಕರೆ ಹೋಗುತ್ತದೆ. ಅಕಸ್ಮಾತ್ ಸ್ನೇಹಿತರು/ ಸಂಬಂಧಿಗಳು ಬೇರೆ ಕಂಪನಿಯ ಸಿಮ್ ಹೊಂದಿದ್ದರೆ ಕರೆ ಮಾಡೋದಕ್ಕೆ ಆಗೋದಿಲ್ಲವಲ್ಲ ಅನ್ನುವ ಪ್ರಶ್ನೆ ಬರಬಹುದು. ಅದಕ್ಕೂ ಸರಳ ಪರಿಹಾರ ಇದೆ. ಇವತ್ತು ಕನಿಷ್ಟ ಮನೆಗೊಂದು ಸ್ಮಾರ್ಟ್‌ಫೋನ್ ಇದ್ದೇ ಇರುತ್ತದೆ. ಮತ್ತು ಆ ಮೊಬೈಲ್ಗಳಲ್ಲಿ ವಾಟ್ಸಪ್ ಕೂಡ ಇರುತ್ತದೆ. ಜಿಯೋದ ಕಡಿಮೆ ವೇಗದ ಇಂಟರ್ನೆಟ್ ಬಳಸಿಕೊಂಡು ನೀವು ವಾಟ್ಸಪ್ನಲ್ಲಿ ನಿಮ್ಮ ಸಂಬಂಧಿಕರಿಗೆ ಅಥವಾ ಸ್ನೇಹಿತರಿಗೆ ಆಡಿಯೋ ಕಾಲ್ ಮಾಡಬಹುದು. ಆಡಿಯೋ ಕರೆಗೆ ವೇಗದ ಇಂಟರ್ನೆಟ್ ಅಗತ್ಯ ಇಲ್ಲದಿರೋದ್ರಿಂದ ಅಡಚಣೆಯಿಲ್ಲದೆ ಮಾತುಕತೆ ನಡೆಸಬಹುದು. ವಾಟ್ಸಪ್ ಬದಲು ಇತರ ಇಂಟರ್ನೆಟ್ ಆಧರಿತ ಕರೆ ಆ್ಯಪ್‌ಗಳನ್ನೂ ನೀವು ಬಳಸಬಹುದು.

No comments:
Post a Comment