ಏಳೆಂಟು ವರ್ಷಗಳ ಹಿಂದಿನ ಮಾತು; ಮೊಬೈಲ್‌ನಲ್ಲಿ 2 ಮೆಗಾಪಿಕ್ಸೆಲ್ ಕ್ಯಾಮರಾ ಇದ್ರೆ ದೊಡ್ಡ ಸವಲತ್ತು ಎಂಬ ಫೀಲಿಂಗಿತ್ತು. ಕೀಪ್ಯಾಡ್ ಇರ್ತಿದ್ದ ಆ ಮೊಬೈಲ್ಗಳಲ್ಲಿ ಕರೆ, ಎಸ್ಸೆಮ್ಮೆಸ್ಸುಗಳನ್ನ ಬಿಟ್ರೆ ಇರ್ತಿದ್ದ ದೊಡ್ಡ ಸೌಲಭ್ಯ ಈ ಕ್ಯಾಮರಾ. ಬೆಳಕಿದ್ದರೆ ಮಾತ್ರ ಅದರಲ್ಲಿ ಸ್ಪಷ್ಟ ಚಿತ್ರ. ಇಲ್ಲದಿದ್ದರೆ ಫೋಟೋ ಮಸುಕು ಮಸುಕು!
ಎಂಟು ವರ್ಷಗಳಲ್ಲಿ ಮೊಬೈಲು ಟೆಕ್ನಾಲಜಿ ರಾಕೆಟ್ ವೇಗದಲ್ಲಿ ಮುನ್ನುಗ್ಗಿದೆ. ಈಗ 20ರಿಂದ 23 ಮೆಗಾಪಿಕ್ಸೆಲ್‌ಗಳವರೆಗಿನ ಕ್ಯಾಮರಾಗಳಿರುವ ಮೊಬೈಲ್ ಫೋನ್‌ಗಳು ಬಂದಿವೆ. ಇದರ ಜೊತೆ ಮೊಬೈಲ್ ಫೋಟೋಗ್ರಫಿಯ ಗುಣಮಟ್ಟ ಕೂಡ ಸಾಕಷ್ಟು ಸುಧಾರಣೆ ಕಂಡಿದೆ. Apple ಸಂಸ್ಥೆಯ ಐಫೋನ್ನಲ್ಲಿ ಎರಡು ಲೆನ್ಸ್‌ಗಳ ಕ್ಯಾಮರಾ ಬಂದು ಬಹಳ ಸಮಯ ಆಯ್ತು. ಐಫೋನ್‌ನ ಫೋಟೋಗಳು ಹೆಚ್ಚು ಸ್ಪಷ್ಟ, ನಿಖರ ಬಣ್ಣ ಮತ್ತು ಗುಣಮಟ್ಟ ಹೊಂದಿರೋದಕ್ಕೆ ಈ ಲೆನ್ಸ್‌ಗಳು ಕಾರಣ. ಎರಡು ಲೆನ್ಸ್‌ಗಳಿಗೆ ಪ್ರತ್ಯೇಕ ಸೆನ್ಸರ್‌ಗಳಿರೋದರಿಂದ ಒಂದೇ ದೃಶ್ಯವನ್ನು ಈ ಲೆನ್ಸ್‌ಗಳು ತುಸು ಭಿನ್ನವಾಗಿ ಗ್ರಹಿಸುತ್ತವೆ. ಅವುಗಳ ಫಲಿತಾಂಶ ಜೊತೆಗೂಡಿದಾಗ ಬಣ್ಣಗಳ ನೆರಳ ಗರಿಷ್ಠ ವ್ಯತ್ಯಾಸ (Contrast) ಮತ್ತು ಬಣ್ಣ ಶುದ್ಧತೆ (Saturation) ಇರುವ ಉತ್ತಮ ಫೋಟೋ ಕ್ಯಾಮರಾದಲ್ಲಿ ಸೆರೆಯಾಗುತ್ತದೆ.
ಇದೀಗ ಅಮೆರಿಕದ ಕ್ಯಾಮರಾ ನಿರ್ಮಾಣ ಸಂಸ್ಥೆ ಲೈಟ್ ಸ್ಮಾರ್ಟ್ ಫೋನ್‌ನಲ್ಲಿ 9 ಲೆನ್ಸ್‌ಗಳನ್ನು ಅಳವಡಿಸುವ ನಿಟ್ಟಿನಲ್ಲಿ ಕಾರ್ಯನಿರತವಾಗಿದೆ. ಈ ವರ್ಷದ ಕೊನೆಗೆ 9 ಲೆನ್ಸ್‌ಗಳ ಕ್ಯಾಮರಾ ಇರುವ ಮೊಬೈಲ್ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಸಂಸ್ಥೆ ಹೇಳಿಕೊಂಡಿದೆ. ಅತ್ಯಂತ ಕಡಿಮೆ ಬೆಳಕಿನಲ್ಲೂ ಸ್ಪಷ್ಟ ಚಿತ್ರ, ವಸ್ತುವಿನ ಸಾಮೀಪ್ಯ ಅಥವಾ ದೂರದ ಪರಿಣಾಮಕಾರಿ ಚಿತ್ರಣ (Depth effects) ಹಾಗೂ 64 ಮೆಗಾಪಿಕ್ಸೆಲ್‌ಗಳವರೆಗಿನ ಫೋಟೋ ಗುಣಮಟ್ಟವನ್ನು ಈ 9 ಲೆನ್ಸ್ ಒದಗಿಸುತ್ತೆ ಅಂತ ಲೈಟ್ ಕಂಪನಿ ಭರವಸೆ ಕೊಟ್ಟಿದೆ.
ಸವಾಲುಗಳೂ ಇವೆ
ಇವತ್ತಿನ ಯುವಸಮೂಹ ಬೆಳಗ್ಗೆ ಎದ್ದಿದ್ದರಿಂದ ರಾತ್ರಿ ಮಲಗುವ ತನಕ ಎಲ್ಲ ಸಂದರ್ಭಕ್ಕೂ ಒಂದೊಂದು ಸೆಲ್ಫೀ ತೆಗೆಯುವ ಗೀಳು ಹೊಂದಿದೆ! ಅಂಥ ಫೋಟೋಗಳು 64 ಮೆಗಾಪಿಕ್ಸೆಲ್ ಕ್ವಾಲಿಟಿಯದ್ದಾದರೆ ಅವುಗಳನ್ನು ಸಂಗ್ರಹಿಸಿ ಇಡೋದಕ್ಕೆ ಭಾರೀ ಪ್ರಮಾಣದ ಮೆಮೊರಿ ಕಾರ್ಡ್ ಸಾಮರ್ಥ್ಯ ಬೇಕು. ಕ್ಲೌಡ್‌ನಂಥ ಪರ್ಯಾಯ ಸ್ಥಳಗಳಲ್ಲಿ ಫೋಟೋಗಳನ್ನು ಸಂಗ್ರಹಿಸಿ ಇಡಬಹುದು. ಆದರೆ ಅವುಗಳನ್ನು ಅಪ್ಲೋಡ್ ಮಾಡೋದಕ್ಕೆ ಬೇಕಾಗುವ ಡೇಟಾ ಮತ್ತು ಅದಕ್ಕೆ ತಗುಲುವ ವೆಚ್ಚ ಪರಿಗಣಿಸಿದರೆ ಆ ಐಡಿಯಾ ಅತ್ಯಂತ ದುಬಾರಿಯಾಗಬಹುದು.9 ಲೆನ್ಸ್‌ಗಳ ಕ್ಯಾಮರಾ ಮೊಬೈಲ್‌ನ ಕಾಲ್ಪನಿಕ ಮಾದರಿಯನ್ನು ಸಂಸ್ಥೆ ಬಿಡುಗಡೆ ಮಾಡಿದೆ. ಆದರೆ ಇದನ್ನು ವಾಸ್ತವ ರೂಪಕ್ಕೆ ತರುವಾಗ ಗಾತ್ರ ಮೊದಲ ಸವಾಲಾಗಬಹುದು. ಇದರ ಜೊತೆಗೆ ಇನ್ನೊಂದು ದೊಡ್ಡ ಸವಾಲು ಅಂದರೆ ಬೆಲೆಯದ್ದು. 9 ಲೆನ್ಸ್ ಅಳವಡಿಸಿ ಅತಿ ಸಂಕೀರ್ಣ ತಂತ್ರಜ್ಞಾನದೊಂದಿಗಿನ ಕ್ಯಾಮರಾವನ್ನು ಕೊಳ್ಳುಗ ಸ್ನೇಹಿ ಬೆಲೆಯಲ್ಲಿ ನೀಡೋದಕ್ಕೆ ಸಾಧ್ಯವಾ ಅನ್ನೋ ಪ್ರಶ್ನೆಯೂ ಇದೆ.
ಈ ಮೊಬೈಲ್ ಫೋನ್‌ಗೆ ಕನಿಷ್ಟ 1.5 ಲಕ್ಷ ರೂ.ವರೆಗೆ ಬೆಲೆ ಇರಬಹುದು ಅನ್ನೋ ಅಂದಾಜಿದೆ. ಇತ್ತೀಚಿನ ಆವೃತ್ತಿಯ ಐಫೋನ್‌ಗೆ ಹತ್ತಿರ ಹತ್ತಿರ 1 ಲಕ್ಷ ರೂ. ಬೆಲೆ ಇದೆ. ಅದನ್ನು ಕೊಳ್ಳುವ ಸಿರಿವಂತರಿಗೆ ಇದು ದುಬಾರಿ ಅನ್ನಿಸಲಿಕ್ಕಿಲ್ಲ. ಉಳಿದವರು ಕೇವಲ ಮೊಬೈಲ್ ಫೋನ್‌ನ ಚಿತ್ರವನ್ನಷ್ಟೇ ನೋಡುತ್ತಾ ಇರಬಹುದು!

No comments:
Post a Comment