ಅಂಬಾನಿಯ ಗಿಗಾ ಟಿವಿಯಿಂದ ಕೇಬಲ್ ಉದ್ಯಮ ಮುಳುಗುತ್ತಾ?


ಭಾರತದ ಮಟ್ಟಿಗೆ ಭವಿಷ್ಯದ ಟೆಕ್ನಿಕ್ ಆಗಬಹುದಾದ ಕ್ಷೇತ್ರಗಳಲ್ಲಿ ಭಾರೀ ಪ್ರಮಾಣದ ಬಂಡವಾಳ ಹೂಡಿ ಹೊಸ ಉದ್ಯಮಗಳಲ್ಲಿ ದಾಪುಗಾಲು ಇಡುತ್ತಿರುವ ಮುಕೇಶ್ ಅಂಬಾನಿ ಗಿಗಾ ಟಿವಿ ಎಂಬ ಇಂಟರ್ನೆಟ್ ಆಧರಿತ ಟಿವಿ ಜಗತ್ತಿನ ಕಾನ್ಸೆಪ್ಟ್‌ಗೆ  ಮುನ್ನುಡಿ ಹಾಕಿದ್ದಾರೆ. ಬ್ರಾಡ್‌ಬ್ಯಾಂಡ್‌ನಲ್ಲಿ ಅತಿ ವೇಗದ ಇಂಟರ್ನೆಟ್ ಮೂಲಕ ಟಿವಿ ಚಾನೆಲ್ಗಳು ಪ್ರಸರಣಗೊಳ್ಳುವ ಈ ಗಿಗಾ ಟಿವಿ, ಪ್ರಸ್ತುತ ಇರುವ ಡಿಟಿಎಚ್ ಹಾಗೂ ಕೇಬಲ್ ಉದ್ಯಮಕ್ಕೆ ದೊಡ್ಡ ಹೊಡೆತ ನೀಡಲಿದೆ ಎಂಬ ವಿಶ್ಲೇಷಣೆ ಟೆಕ್ ಜಗತ್ತಿನ ಪ್ರಮುಖ ಮಾಧ್ಯಮಗಳಿಂದ ಕೇಳಿಬರುತ್ತಿದೆ.

ಆದರೆ ಈಗಾಗಲೇ ಆಲದ ಮರದಂತೆ ಹರಡಿಕೊಂಡಿರುವ ಕೇಬಲ್ ಉದ್ಯಮ ಹಾಗೂ ಇದರ ಮಧ್ಯೆ ತನ್ನದೂ ಒಂದು ಛತ್ರಿ ಬಿಚ್ಚಿ ನಿಂತಿರುವ ಡಿಟಿಎಚ್ ಜಗತ್ತನ್ನು ಸಂಪೂರ್ಣ ಬುಡಮೇಲು ಮಾಡುವುದು ಅಷ್ಟು ಸಲೀಸಿನ ಕೆಲಸವಲ್ಲ. ಗಿಗಾ ಟಿವಿಯ ಮುಂದೆ ಸವಾಲುಗಳೂ ಬಹಳಷ್ಟಿವೆ.

ಡಿಟಿಎಚ್ ಅಥವಾ ಕೇಬಲ್ ಟಿವಿಗೆ ಇರುವಂತೆ ಗಿಗಾ ಟಿವಿಗೂ ಒಂದು ಸೆಟ್‌ಟಾಪ್‌ ಬಾಕ್ಸ್ ಇರುತ್ತೆ. ಆ ಸೆಟ್‌ಟಾಪ್‌ ಬಾಕ್ಸಿಗೆ ಒಂದು ಕೇಬಲ್ ಕೂಡ ಕನೆಕ್ಟ್ ಆಗಿರುತ್ತೆ. ಆದರೆ ಅದು ಯಾವುದೇ ಡಿಟಿಎಚ್ ಡಿಶ್ ಅಥವಾ ಕೇಬಲ್ ಕಂಟ್ರೋಲ್ ರೂಂಗೆ ಸಂಪರ್ಕ ಹೊಂದಿರೋದಿಲ್ಲ.  ಬ್ರಾಡ್‌ಬ್ಯಾಂಡ್‌ನ ಹೈಸ್ಪೀಡ್ ಇಂಟರ್ನೆಟ್ ಪೂರೈಸುವ ವ್ಯವಸ್ಥೆಗೆ ಸಂಪರ್ಕ ಹೊಂದಿರುತ್ತೆ. ಆಪ್ಟಿಕಲ್ ಫೈಬರ್ ಕೇಬಲ್ (ಒಎಫ್‌ಸಿ) ಮೂಲಕ ಈ ಹೈಸ್ಪೀಡ್ ಇಂಟರ್ನೆಟ್ ಪೂರೈಕೆಯಾಗುತ್ತೆ.

ಒಂದು ಕಿಮೀ ಒಎಫ್‌ಸಿಗೆ 1 ಲಕ್ಷ ರೂ.! 

ಆಪ್ಟಿಕಲ್ ಫೈಬರ್ನಲ್ಲಿ 8, 12, 24.. ಹೀಗೆ ವಿವಿಧ ಸಂಖ್ಯೆಯ ಎಳೆ (ಕೋರ್)ಗಳಿರುತ್ತವೆ. ಸಿಂಗಲ್ ಅಥವಾ ಮಲ್ಟಿ ಮಾದರಿಗಳೂ ಇರ್ತವೆ. ಇವುಗಳಿಗೆ ಅನುಸಾರ ಆಪ್ಟಿಕಲ್ ಫೈಬರ್ ಕೇಬಲ್‌ನ ಬೆಲೆಯೂ ವ್ಯತ್ಯಾಸವಾಗುತ್ತದೆ. ಒಂದು ಸಾಮಾನ್ಯ 12 ಕೋರ್ ಮಲ್ಟಿ ಮೋಡ್ ಆಪ್ಟಿಕಲ್ ಫೈಬರ್ ಕೇಬಲ್‌ಗೆ ಮೀಟರ್ಗೆ 70 ರೂ. ಬೆಲೆಯಿದೆ. ಅಂದರೆ ಒಂದು ಕಿ.ಮೀ. ಕೇಬಲ್ಗೆ 70,000 ರೂ. ಆಗುತ್ತದೆ. ಎಲೆಕ್ಟ್ರಿಕ್ ಕಂಬ, ಟೆಲಿಫೋನ್ ಪೋಲ್, ಮರ ಹೀಗೆ ಸಿಕ್ಕಿದ್ದಕ್ಕೆಲ್ಲ ಸುತ್ತಿ ಎಳೆದುಕೊಂಡು ಬರುವ ಕೇಬಲ್ನ ಹಾಗೆ ಒಎಫ್ಸಿ ಎಳೆಯೋದಕ್ಕೆ ಸಾಧ್ಯ ಇಲ್ಲ. ಇದನ್ನು ನೆಲದಡಿ ಎಳೆಯಬೇಕು. ಒಂದು ಸ್ಪೆಷಲ್ ಕೇಸಿಂಗ್ ಮಾಡಿ ಆ ಬಳಿಕ ಅದರೊಳಗೆ ಒಎಫ್‌ಸಿ ಹಾಯಿಸಬೇಕಾಗುತ್ತದೆ. ಕೇಸಿಂಗ್, ಕೆಲಸ ಮಾಡಿದವರಿಗೆ ವೇತನ ಇತ್ಯಾದಿಗಳನ್ನೆಲ್ಲ ಪರಿಗಣಿಸಿದರೆ ಒಂದು ಕಿ.ಮೀ. ಒಎಫ್‌ಸಿಗೆ ಕನಿಷ್ಟ 1 ಲಕ್ಷ ರೂ. ಬೇಕಾಗುತ್ತದೆ. ಸಮಸ್ಯೆ ಇರೋದೇ ಇಲ್ಲಿ!

ಸಣ್ಣ ನಗರಗಳು ಹಾಗೂ ಹಳ್ಳಿಗಳಲ್ಲಿ ದೂರದೂರಕ್ಕೆ ಮನೆಗಳಿರ್ತವೆ. ಕೆಲವು ಕಡೆ ಒಂದು ಕಿಮೀ ಅಂತರದಲ್ಲಿ ಎರಡು ಮೂರು ಮನೆಗಳಷ್ಟೇ ಇರುತ್ತವೆ. ಈ ಮನೆಗಳಿಗೆ ಅಂಬಾನಿಯ ಗಿಗಾ ಟಿವಿ ಸಂಪರ್ಕ ಕಲ್ಪಿಸುವುದು ಅಂದ್ರೆ ಕೈಸುಟ್ಟುಕೊಳ್ಳುವ ಕೆಲಸ. ಇದೇ ಕಾರಣಕ್ಕೆ ನಗರಗಳಲ್ಲೂ ಅಕ್ಕಪಕ್ಕದ ಮನೆಗಳವರಿಗೆ ನೋಂದಣಿ ಮಾಡಿಸಲು ಹೇಳಿ, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರಿದ್ದಲ್ಲಿ ಮೊದಲು ಸಂಪರ್ಕ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ.

ಅರ್ಧಗಂಟೆಯ ಸೀರಿಯಲ್‌ ವೀಕ್ಷಣೆಗೆ 400 ಎಂಬಿ ಡೇಟಾ ಖಾಲಿ! 

ಜಿಯೋ 4ಜಿ ಇಂಟರ್ನೆಟ್ನಲ್ಲಿ ತನ್ನದೇ ಟಿವಿ ಚಾನೆಲ್ಗಳ ಗುಚ್ಛ ಹೊಂದಿರುವ ಜಿಯೋ ಟಿವಿ ಸುಮಾರು 400 ಚಾನೆಲ್ಗಳನ್ನು ಈಗಾಗಲೇ ಒದಗಿಸುತ್ತಿದೆ. ಜಿಯೋ ಟಿವಿಯಲ್ಲಿ ಎಚ್‌ಡಿ ಗುಣಮಟ್ಟದ ದೃಶ್ಯಗಳನ್ನು ಮೊಬೈಲ್ನಲ್ಲಿ ನೋಡಬಹುದು. ನೀವು 398 ರೂ. ರೀಚಾರ್ಜ್ ಮಾಡಿಸಿಕೊಂಡಿದ್ದರೆ 70 ದಿನಗಳಿಗೆ ಪ್ರತಿದಿನ 2 ಜಿಬಿಯಂತೆ 4ಜಿ ಡೇಟಾ ಸಿಗುತ್ತದೆ. ಅಂದರೆ 30 ದಿನಗಳಿಗೆ ನೀವು ಪಾವತಿಸುವ ಹಣ 170 ರೂ.

ಇದೇ ಮಿತಿಯೊಳಗೆ ಇಂಟರ್ನೆಟ್ ಟಿವಿ ಸಿಗುವ ಹಾಗಾದರೆ ಈಗ ಇರುವ ಕೇಬಲ್, ಡಿಟಿಎಚ್‌ಗಳಿಗಿಂತ ಕಡಿಮೆ ದರದಲ್ಲಿ ಸಿಕ್ಕಂತಾಗುತ್ತದಲ್ಲವೇ ಅನ್ನುವ ವಾದವಿದೆ. ಆದರೆ ಇಲ್ಲೂ ಒಂದು ಮಿತಿಯಿದೆ. 2 ಜಿಬಿ ಡೇಟಾದಲ್ಲಿ ನಿಮ್ಮ ಸೋಷಿಯಲ್ ಸೈಟ್ಗಳು, ಅಂತರ್ಜಾಲ ಜಾಲಾಡುವಿಕೆ, ಇ-ಮೇಲ್ ಕಮ್ಯುನಿಕೇಷನ್ ಇತ್ಯಾದಿಗಳಿಗೆ ದಿನಕ್ಕೆ 750 ಎಂಬಿಯಷ್ಟು ಖರ್ಚಾಗುತ್ತದೆ ಅಂತಿಟ್ಟುಕೊಳ್ಳಿ. ಒಂದೂಕಾಲು ಜಿಬಿ ಡೇಟಾ ನಿಮ್ಮ ಟಿವಿ ವೀಕ್ಷಣೆಗೆ ಉಳಿಯುತ್ತದೆ. ಆದರೆ ಅರ್ಧಗಂಟೆಯ ಮೂರು ಸೀರಿಯಲ್ ನೋಡುಷ್ಟರಲ್ಲಿ ‘ನಿಮ್ಮ ಜಿಯೋ ಡೇಟಾ 90% ಬಳಸಿದ್ದೀರಿ’ ಅನ್ನೋ ಮೆಸೇಜು ಬಂದಿರುತ್ತೆ! ಹೈಕ್ವಾಲಿಟಿಯ ಟಿವಿ ಸ್ಟ್ರೀಮಿಂಗ್ ಬಕಾಸುರನಂತೆ ಡೇಟಾವನ್ನೂ ಕಬಳಿಸುತ್ತದೆ.

ಒಂದು ಟ್ವೆಂಟಿ-20 ಪಂದ್ಯ ಸರಾಸರಿ ಮೂರು ತಾಸು ಇರುತ್ತದೆ. ಇದನ್ನು ನೇರಪ್ರಸಾರದಲ್ಲಿ ಪೂರ್ತಿ ನೋಡೋದಕ್ಕೆ ಕನಿಷ್ಟ 2 ಜಿಬಿ ಡೇಟಾ ಬೇಕು. ಮ್ಯಾಚು ಮುಗಿದ ತಕ್ಷಣ ನಾವು ಟಿವಿ ಬಿಟ್ಟೇಳುವುದಿಲ್ಲ. ಸ್ವಲ್ಪ ನ್ಯೂಸು, ಮತ್ತೊಂದಿಷ್ಟು ಕಾಮಿಡಿ ಹೀಗೆ ಮತ್ತೆ ಅರ್ಧ ತಾಸು ಚಾನೆಲ್ಲುಗಳನ್ನು ಬದಲಿಸುತ್ತಿರುತ್ತೇವೆ. ಆದರೆ ಅದಕ್ಕೆ ನಿಮ್ಮ 2 ಜಿಬಿ ಡೇಟಾ ಸಾಕಾಗುವುದಿಲ್ಲ. ಅರೆಬರೆ ಟಿವಿ ನೋಡುವ ಸಮುದಾಯಕ್ಕೇ ಡೇಟಾ ಬರ ಬರುತ್ತೆ ಅಂತಾದರೆ, ಮಧ್ಯಾಹ್ನ ಊಟವಾದ ನಂತರದಿಂದ ಶುರುಮಾಡಿ ರಾತ್ರಿ ಹಾಸಿಗೆ ಹಾಸಿ ಮಲಗುವ ತನಕ ಒಂದಲ್ಲಾ ಒಂದು ಸೀರಿಯಲ್ಲು ನೋಡಿಕೊಂಡೇ ಅದರ ಮಧ್ಯೆ ಮನೆಗೆಲಸ ಮಾಡುವ ಅಮ್ಮಂದಿರು, ಅಕ್ಕಂದಿರಿಗೆ ಈ ಗಿಗಾ ಟೀವಿ ಎಂಥ ಬರಗಾಲ ಸೃಷ್ಟಿಸಬಹುದು ಅಂತ ಊಹಿಸಿ!

ಆರಂಭದಲ್ಲಿ ಆಫರು ಅಂತ ಒಂದಿಷ್ಟು ತಿಂಗಳು ಫ್ರೀ ಕೊಟ್ಟರೂ ಕೊಡಬಹುದು. ಆದರೆ ತೀರಾ ಕಡಿಮೆ ದರದಲ್ಲಿ ಗಿಗಾಫೈಬರ್ ಇಂಟರ್ನೆಟ್ ಬಹಳ ದಿನಗಳ ಕಾಲ ನೀಡೋದಕ್ಕೆ ಸಾಧ್ಯ ಇಲ್ಲ. ಇತ್ತ ಸಿರಿವಂತರನ್ನು ಹೊರತುಪಡಿಸಿ ಉಳಿದ ಗ್ರಾಹಕರು ತಿಂಗಳಿಗೆ 250 ರೂ.ಗಿಂತ ಹೆಚ್ಚು ಕೊಟ್ಟು ಟಿವಿ ನೋಡುವ ಉದಾರಿಗಳಲ್ಲ.

ಮಲಗಿರುವ ಸಂಸ್ಥೆಗಳನ್ನು ಎಬ್ಬಿಸಲಿದೆ! 

ಅದೇನೇ ಇರಲಿ, ಬಹುತೇಕ ತನ್ನಿಚ್ಛೆಗೆ ತಕ್ಕಂತೆ ದರ ಹೇರುತ್ತಿದ್ದ ಹಾಗೂ ಮಲಗಿದಂತಿದ್ದ ಮೊಬೈಲ್ ಇಂಟರ್ನೆಟ್ ಜಗತ್ತು ಬೆಚ್ಚಿಬಿದ್ದು ಓಡುವಂತೆ ಮಾಡಿದ್ದು ಜಿಯೋ 4ಜಿ! ಏಕಾಏಕಿ ದರ ಇಳಿಕೆ ಮತ್ತು ಗುಣಮಟ್ಟ ಸುಧಾರಣೆಯಿಂದ ಗ್ರಾಹಕರಿಗೆ ಅನುಕೂಲವಾಗಿದೆ. ಅದೇ ರೀತಿಯ ಸಂಚಲನವನ್ನು ಟಿವಿ ಜಗತ್ತಿನಲ್ಲೂ ಗಿಗಾಫೈಬರ್ ಮೂಡಿಸಲಿದೆ ಅನ್ನೋದು ನಿಸ್ಸಂಶಯ. ಆ ಕಾರಣಕ್ಕೆ ಮುಖೇಶ್ ಅಂಬಾನಿ ಅಭಿನಂದನೆಗೆ ಅರ್ಹರು.

No comments:

Post a Comment