ಸೀಟ್‌ ನಂಬರ್ ಎಲ್-26


ರಾಮಚಂದ್ರರಾವ್, ಹಾಗೆಲ್ಲ ಯಾವಾಗ್ಲೂ ಸಿನಿಮಾಗೆ ಹೋಗುವವರಲ್ಲ. ಯಾವಾಗಲಾದ್ರೂ ಅವರ ಸಹೋದ್ಯೋಗಿಗಳು ಬಲವಂತ ಮಾಡಿದಾಗ, ಅಥವಾ `ಈ ಸಿನಿಮಾ ಚೆನ್ನಾಗಿದೆ’ ಅಂತ ಪತ್ರಿಕೆಗಳಲ್ಲಿ ರಿವ್ಯೂ ಬಂದಾಗ ಅವ್ರು ತಪ್ಪದೇ ಹೋಗಿ ಸಿನಿಮಾ ನೋಡಿ ಬರ್ತಾರೆ. ಸಹೋದ್ಯೋಗಿ ಸ್ನೇಹಿತರು ಜೊತೆಗಿಲ್ಲ ಅಂದ್ರೆ ರಾಯರು ಒಬ್ಬರೇ ಸಿನಿಮಾಗೆ ಹೋಗೋದು. ಯಾಕಂದ್ರೆ ಅವರಿಗೆ ಹೆಂಡತಿ ಮಕ್ಕಳು ಇಲ್ಲ. ಹಾಗಂತ ರಾಮಚಂದ್ರರಾವ್ ತೀರಾ ಸಣ್ಣ ಪ್ರಾಯದವರೇನಲ್ಲ. ಈಗಾಗಲೇ ನಲವತ್ತು ದಾಟಿರುವ ಸೂಚಕವಾಗಿ ಅವರ ಮೂಗಿನ ಮೇಲೆ ಕನ್ನಡಕ ಬಂದು ಕೂತಿದೆ. ಅದ್ಯಾವ ಕಾರಣದಿಂದ ವೈರಾಗ್ಯ ಬಂತೋ ಗೊತ್ತಿಲ್ಲ, ರಾಮಚಂದ್ರರಾವ್ ಸಂಸಾರವೆಂಬ ಕೊಳಕ್ಕೆ ಇಳಿಯಲೇ ಇಲ್ಲ!

ವಯಸ್ಸಾದ ಅಪ್ಪ-ಅಮ್ಮ ಊರಲ್ಲಿ ಇದ್ದಾರೆ ಅಂತ ಆಗಾಗ ಮಾತಿನ ಸಂದರ್ಭ ಅವರು ಹೇಳಿದ್ದುಂಟು. ಅದರ ಹೊರತಾಗಿ ಅವರ ಬಗ್ಗೆ ಹೆಚ್ಚು ಡಿಟೇಲ್ಸು ಸಹೋದ್ಯೋಗಿಗಳಿಗೂ ಗೊತ್ತಿಲ್ಲ. ರಾಜಧಾನಿಯಲ್ಲಿ ಬಾಡಿಗೆ ಮನೆ ಎಂಬ ಗೂಡೊಳಗೆ ಒಂಟಿ ಜೀವನ ನಡೆಸುತ್ತಿರುವ ರಾಮಚಂದ್ರರಾಯರಿಗೆ –ಒಮ್ಮೊಮ್ಮೆ ನಶ್ಯ ಮೂಗಿಗೇರಿಸುತ್ತಾರೆ ಎಂಬುದನ್ನು ಬಿಟ್ಟರೆ- ಯಾವ ದುಃಶ್ಚಟಗಳೂ ಇಲ್ಲ. ಇಲೆಕ್ಟ್ರಾನಿಕ್ಸು ಸಾಮಗ್ರಿಗಳನ್ನು ಮಾರುವ ತುಂಬ ದೊಡ್ಡದೂ ಅಲ್ಲದ ತೀರಾ ಸಣ್ಣದೂ ಅಲ್ಲದ ಶೋರೂಂ ಒಂದರಲ್ಲಿ ಮ್ಯಾನೇಜರ್ ನೌಕರಿ ಮಾಡುತ್ತಿರುವ ರಾಮಚಂದ್ರರಾಯರಿಗೆ ಜೇಬು ತುಂಬುವಷ್ಟು ಸಂಬಳ ಬರುತ್ತದೆ. ಶೋರೂಂನ ಮಾಲೀಕ ಮುಸ್ಲಿಂನಾದ ಕಾರಣ ಶುಕ್ರವಾರ ವಾರದ ರಜೆಯೂ ಸಿಗುತ್ತದೆ. ಒಂದು ರೀತಿಯಲ್ಲಿ ರಾಮಚಂದ್ರರಾಯರದ್ದು ಸಂತೃಪ್ತ ಜೀವನ.

ಶುಕ್ರವಾರ ಸಿಗುವ ಬಿಡುವಿನಲ್ಲಿ ರಾಮಚಂದ್ರರಾಯರು ಗವರ್ನಮೆಂಟು ಲೈಬ್ರರಿಗೆ ಹೋಗಿ ಕನ್ನಡ ಪತ್ರಿಕೆಗಳ ಸಿನಿಮಾ ಪುರವಣಿಗಳನ್ನೆಲ್ಲ ಓದುತ್ತಾರೆ. ಈ ವಾರ ಯಾವ ಸಿನಿಮಾ, ಯಾವ ಥಿಯೇಟರಿನಲ್ಲಿ ರಿಲೀಸ್ ಆಗಿದೆ ಅನ್ನೋದನ್ನ ನೋಟ್ ಮಾಡಿಕೊಳ್ತಾರೆ. ಯಾವ ಸಿನಿಮಾವೂ ಕುತೂಹಲ ಹುಟ್ಟಿಸೋ ಹಾಗಿಲ್ಲದಿದ್ರೆ ಹಿಂದಿನ ಶನಿವಾರದ ಪೇಪರುಗಳನ್ನು ತಡಕಾಡ್ತಾರೆ. ಅದರಲ್ಲಿ ಬಂದಿರೋ ರಿವ್ಯೂಗಳನ್ನು ಓದಿ ಒಂದು ಸಿನಿಮಾ ಸೆಲೆಕ್ಟು ಮಾಡಿಕೊಳ್ತಾರೆ. ಹಾಗೆ ಓದುತ್ತಿರೋವಾಗ ಒಂದು ಸಿನಿಮಾದ ರಿವ್ಯೂ ರಾಮಚಂದ್ರರಾಯರ ಗಮನ ಸೆಳೀತು. ‘ನಾಲ್ಕೈದು ವರ್ಷಗಳಲ್ಲೇ ಇಂಥ ಒಳ್ಳೇ ಸಿನಿಮಾ ಬಂದಿಲ್ಲ. ಹೀರೋ ಕೈಯಲ್ಲಿ ಮಚ್ಚು ಇದೆಯಾದರೂ, ಸಿನಿಮಾದಲ್ಲಿ ಸೆಂಟಿಮೆಂಟು ಬಹಳ ಇದೆ. ಒಟ್ಟಿನಲ್ಲಿ ಮನೆಮಂದಿಯೆಲ್ಲ ಒಟ್ಟಿಗೇ ಕೂತು ನೋಡಬಹುದಾದ ಸಿನಿಮಾ’ ಅಂತಿತ್ತು ಅದರ ಒಕ್ಕಣೆ. ರಿವ್ಯೂ ಓದಿದ ಮೇಲೆ ರಾಮಚಂದ್ರರಾಯರಿಗೆ ಸಿನಿಮಾ ನೋಡಬೇಕು ಎಂಬ ಚಡಪಡಿಕೆ ಶುರುವಾಯ್ತು.

ಪತ್ರಿಕೆ ಓದುವುದನ್ನು ಅಲ್ಲಿಗೇ ನಿಲ್ಲಿಸಿ, ಲೈಬ್ರರಿಯಿಂದ ಹೊರಬಿದ್ದು ಸೀದಾ ಥಿಯೇಟರಿನ ಕಡೆ ಧಾವಿಸಿದರು. ಈಗೀಗ ರಾಜಧಾನಿಯಲ್ಲಿ ಮಲ್ಟಿಪ್ಲೆಕ್ಸುಗಳ ಅಬ್ಬರ ಇದೆಯಾದರೂ ರಾಮಚಂದ್ರರಾಯರು ಅಲ್ಲಿಗೆ ಹೋಗುವುದಿಲ್ಲ. ಅದಕ್ಕೆ ಕಾರಣ ಟಿಕೇಟು ದುಡ್ಡು ಜಾಸ್ತಿ ಅಂತಲ್ಲ, ಅದ್ಯಾಕೋ ಅವರಿಗೆ ಆ ಮಾಲ್‌ಗಳ ಝಗಮಗ ಸರಿಹೋಗುವುದಿಲ್ಲ.

ರಾಮಚಂದ್ರರಾಯರು ಕುರ್ಚಿಯಲ್ಲಿ ಕೂರಬೇಕು ಅಂದುಕೊಳ್ಳುತ್ತಿರುವಾಗ ಪಕ್ಕದ ಇಪ್ಪತ್ತೇಳನೇ ನಂಬರ್ ಸೀಟಿನ ಆಸಾಮಿ “ರೀ ಸ್ವಾಮೀ, ಕಾಸು ನಿಮ್‌ದಾದ್ರೂ ಒಂದೇ. ನಮ್‌ದಾದ್ರೂ ಒಂದೇ. ಎಪ್ಪತ್ ರೂಪಾಯ್ ಕೊಟ್ಟು ಇಂಥ ತಗಡು ಸೀಟಲ್ಲಿ ಕೂತು ಸಿನಿಮಾ ನೋಡ್ಬೇಕು ಅಂದ್ರೆ ಹೊಟ್ಟೆ ಉರಿಯಲ್ವೇನ್ರೀ ನಿಮ್ಗೆ? ಟಿಕೆಟ್ ಅವನ್ ಮೊಕದ್ ಮೇಲ್ ಬಿಸಾಕಿ ನಿಮ್ ದುಡ್ ವಾಪಸ್ ಇಸ್ಕಳ್ರೀ..” ಅಂತ ಕ್ರಾಂತಿಗಿದೇ ಸಮಯ ಅನ್ನುವ ಹಾಗೆ ರಾಯರನ್ನು ಹುರಿದುಂಬಿಸಿದ.

ರಾಮಚಂದ್ರರಾಯರು ಥಿಯೇಟರಿನ ಗೇಟು ದಾಟುವಾಗಲೇ ಅಲ್ಲಿ ಅಪಾರ ಜನಜಂಗುಳಿ. ಸಿನಿಮಾ ಶುರುವಾಗೋದಕ್ಕೆ ಇನ್ನೇನು ಒಂದರ್ಧ ಗಂಟೆಯಿದೆ. ಟಿಕೇಟು ಸಿಗುತ್ತೋ ಇಲ್ವೋ ಅನ್ನುವ ಅನುಮಾನದೊಂದಿಗೆ ರಾಯರು, ಟಿಕೇಟ್ ಕೌಂಟರಿನ ಕ್ಯೂನಲ್ಲಿ ಸೇರಿಕೊಂಡರು. ಹಾಗೆ ನಿಂತಿರುವಾಗ ‘ಬಾಲ್ಕನಿ ಇನ್ನೂರೈವತ್.. ಬಾಲ್ಕನಿ ಇನ್ನೂರೈವತ್ತ್..’ ಅಂತೊಬ್ಬ ಕೈಲೊಂದಿಷ್ಟು ಟಿಕೇಟು ಹಿಡಿದುಕೊಂಡು ಸಣ್ಣ ದನಿಯಲ್ಲಿ ಕಳ್ಳನಂಗೆ ಅತ್ತಿತ್ತ ನೋಡುತ್ತಾ ಬಂದನಾದರೂ ರಾಯರು ಬ್ಲ್ಯಾಕ್‌ನಲ್ಲಿ ಬಾಲ್ಕನಿ ಟಿಕೇಟು ಖರೀದಿಸಲು ಮನಸ್ಸು ಮಾಡಲಿಲ್ಲ. ಸಾಲಿನಲ್ಲಿ ರಾಮಚಂದ್ರರಾಯರ ಮುಂದೆ ನಿಂತಿದ್ದ ಎಂಟ್ಹತ್ತು ತಲೆಗಳು ಮುಂದೆ ಸಾಗಿ ರಾಯರ ಸರದಿ ಬಂತು. ‘ಒಂದು ಫಸ್ಟ್ ಕ್ಲಾಸ್ ಕೊಡಿ’ ಅಂತ ಟಿಕೆಟ್ ಕೌಂಟರಿನ ಚಿಕ್ಕ ಕಿಂಡಿಯೊಳಗೆ ತಲೆಬಗ್ಗಿಸಿ ಹೇಳಿದ ರಾಯರು ನೂರು ರೂಪಾಯಿ ನೋಟು ತಳ್ಳಿದರು. ಕೌಂಟರಿನೊಳಗೆ ಕೂತ ನಿರ್ಭಾವುಕ ವ್ಯಕ್ತಿ ಪರ್ರ್.. ಅಂತ ಟಿಕೇಟು ಹರಿದು ಟಿಕೇಟಿನ ಜೊತೆ ಮೂವತ್ತು ರೂಪಾಯಿಯನ್ನು ಕಿಂಡಿಯೊಳಗೆ ತೂರಿಸಿದ್ದ ರಾಯರ ಕೈಗಿಟ್ಟ.

‘ಅಬ್ಬಾ! ಅಂತೂ ಟಿಕೇಟು ಸಿಕ್ತು’ ಅಂತ ಖುಷಿಪಟ್ಟುಕೊಂಡ ರಾಯರು, ನೇರವಾಗಿ ಫಸ್ಟ್ ಕ್ಲಾಸ್ ಅಂತ ಬರೆದಿದ್ದ ಬಾಗಿಲಿನತ್ತ ಧಾವಿಸಿದರು. ಬಾಗಿಲ ಬಳಿ ನಿಂತಿದ್ದ ಕಾವಲುಗಾರನಿಗೆ ಟಿಕೇಟ್ ತೋರಿಸಿ ಒಳಗೋಗುವಾಗ, ಟಿಕೇಟಿನ ಮೇಲೆ ಬರೆದಿದ್ದ ತಮ್ಮ ಟಿಕೇಟ್ ನಂಬರನ್ನು ನೋಡಿದರು. ‘L-26’ ಅಂತಿತ್ತು ಸೀಟ್ ನಂಬರ್. ‘ಛೇ, ತುಂಬ ಮುಂದಿನ ಸೀಟು..’ ಅಂತ ಒಂದು ಕ್ಷಣ ವ್ಯಥೆ ಪಟ್ಟುಕೊಂಡ ರಾಯರು ಮರುಕ್ಷಣ, ‘ಇಷ್ಟೊಳ್ಳೇ ಸಿನಿಮಾಗೆ ಟಿಕೇಟು ಸಿಕ್ಕಿದ್ದೇ ಪುಣ್ಯ’ ಅಂತ ಸಮಾಧಾನ ಪಟ್ಟುಕೊಂಡರು.

ಅದು ಹಳೇ ಥಿಯೇಟರು. ಫ್ಯಾನುಗಳೆಲ್ಲ ಹೊರಹೊಮ್ಮಿಸುವ ಗಾಳಿಗಿಂತ ಹೆಚ್ಚಾಗಿ ‘ಗರ್ರ್..’ ಎಂಬ ಶಬ್ದವನ್ನು ಮಾಡುತ್ತಿದ್ದವು. ಸೀಟುಗಳಿಗೆ ಮೃದುವಾದ ಮೆತ್ತೆಗಳಿದ್ದವು. ಆದರೆ ಅವು ತಮ್ಮ ಮೃದುತ್ವ ಕಳಕೊಂಡು ಯಾವ ಕಾಲವಾಯ್ತೋ ಎಂಬಂತೆ ಮರದ ಬೆಂಚುಗಳಷ್ಟೇ ಗಡುಸಾಗಿದ್ದವು. ಸೀಟುಗಳ ಹಿಂಭಾಗದಲ್ಲಿ ಬಿಳಿ ಪೇಂಟಿನಲ್ಲಿ ಬರೆಯಲಾಗಿದ್ದ ನಂಬರುಗಳೆಲ್ಲ ಮಾಸಿಹೋಗಿದ್ದರಿಂದ ಪ್ರೇಕ್ಷಕರು ತಮ್ಮ ಸೀಟುಗಳನ್ನು ಹುಡುಕಿ ಕೂರುವುದು ತುಸು ಪ್ರಯಾಸಕರವೇ ಆಗಿತ್ತು. ಎ.. ಬಿ.. ಸಿ.. ಡಿ.. ಅಂತ ಹಿಂತುದಿಯಿಂದ ಲೆಕ್ಕ ಹಾಕಿಕೊಂಡು ಬಂದ ರಾಯರಿಗೆ ಮಧ್ಯದಲ್ಲೆಲ್ಲೋ ಕನ್‌ಫ್ಯೂಸ್ ಆಯಿತು. ಸುಮ್ಮನೇ ಕಣ್ಣಂದಾಜಿನಲ್ಲೇ ಎಣಿಕೆ ಮಾಡಿ ಇದೇ L ಸಾಲು ಅಂತ ತೀರ್ಮಾನಕ್ಕೆ ಬಂದ ರಾಯರು, 26ನೇ ನಂಬರ್‌ನ ಸೀಟಿನಲ್ಲಿ ಹೋಗಿ ಕೂತರು.

ಆರಾಮಾಗಿ ಕೂತುಕೊಳ್ಳೋಣ ಅಂತ ಸೀಟಿನ ಪುಷ್‌ಬ್ಯಾಕಿಗೆ ಒರಗಿದ್ದೇ ತಡ, ಸೀಟಿನ ಹಿಂಭಾಗ ಧಬಾರ್ ಅಂತ ಬಿದ್ದೋಯ್ತು! ಈ ಅನಿರೀಕ್ಷಿತ ಘಟನೆಗೆ ಕೊಂಚ ತಬ್ಬಿಬ್ಬಾದ ರಾಯರು, ಎದ್ದು ನಿಂತು ಹಿಂದೆ ಮಕಾಡೆ ಬಿದ್ದಿದ್ದ ಸೀಟಿನ ಹಿಂಭಾಗವನ್ನು ಎತ್ತಿ ಅದನ್ನು ಸ್ವಸ್ಥಾನಕ್ಕೆ ಜೋಡಿಸಿ ಕೂರಿಸಿದರು. ಮತ್ತೆ ಒರಗಿ ಕೂತರೆ ಸೀಟೆಲ್ಲಿ ಬಿದ್ದು ಹೋಗುತ್ತೋ ಎಂಬ ಆತಂಕದಲ್ಲಿ ಸೀಟಿನ ಹಿಂಬದಿಗೆ ತಾಕದಂತೆ ಎಚ್ಚರ ವಹಿಸಿ ತುಸು ಮುಂದಕ್ಕೆ ಬಾಗಿ ಕೂತರು.

‘ಥತ್! ಎಂಥ ಕರ್ಮ ಇದು. ಸರಿಯಾಗಿ ಕೂತು ಸಿನಿಮಾ ನೋಡೋ ಹಾಗೂ ಇಲ್ಲ’ ಅಂತ ಮನಸ್ಸಿನಲ್ಲೇ ಮಣಮಣಿಸುತ್ತಿರಬೇಕಾದರೆ, “ನಿಮ್ಮ ನಂಬರೆಷ್ಟು?” ಅಂತ ವ್ಯಕ್ತಿಯೊಬ್ಬ ಬಂದು ಕೇಳಿದ. "ಎಲ್-26" ಅಂತ ರಾಯರು ಜೇಬಿನಿಂದ ಟಿಕೇಟು ತೆಗೆಯುತ್ತಾ ಹೇಳಿದರು. “ಇದು ಜೆ-26. ಎಲ್ ಮುಂದಿನದಕ್ಕಿಂತ ಮುಂದಿನ ಸಾಲು. ಇದು ನನ್ ಸೀಟು” ಅಂತ ತನ್ನ ಕೈಲಿದ್ದ J-26 ನಂಬರಿನ ಟಿಕೇಟನ್ನು ಆ ವ್ಯಕ್ತಿ ತೋರಿಸಿದ. ಪುಷ್‌ಬ್ಯಾಕು ಸರಿಯಿಲ್ಲದ ಈ ಸೀಟಿನ ಸಾವಾಸ ತಪ್ತು ಅಂತ ರಾಮಚಂದ್ರರಾಯರಿಗೆ ಒಂದು ರೀತಿಯಲ್ಲಿ ಖುಷಿಯೇ ಆಯಿತು!

ಅಲ್ಲಿಂದೆದ್ದು ಎರಡು ಸಾಲು ಮುಂದಕ್ಕೆ ಹೋದರು. ಅಲ್ಲಿ ಇಪ್ಪತ್ತೈದನೇ ನಂಬರಿನ ಸೀಟ್ ಇದೆ. ನಂತರ ಇಪ್ಪತ್ತೇಳನೇ ನಂಬರಿನ ಸೀಟು! ಇಪ್ಪತ್ತಾರನೇ ನಂಬರಿನ ಸೀಟು ಇರಬೇಕಾದ ಜಾಗದಲ್ಲಿ ಸೀಟೇ ಇಲ್ಲ! ಈಗ ರಾಮಚಂದ್ರರಾಯರಿಗೆ ಕಸಿವಿಸಿಗಿಟ್ಟುಕೊಂಡಿತು. ಇಪ್ಪತ್ತೇಳನೇ ನಂಬರಿನ ಸೀಟಲ್ಲಿ ಕೂತಿದ್ದ ವ್ಯಕ್ತಿಯನ್ನು “ಇದು ಇಪ್ಪತ್ತಾರನೇ ನಂಬರಿನ ಸೀಟಿರಬೇಕು ನೋಡಿ..” ಅಂದರು. ಕೂತಿದ್ದ ವ್ಯಕ್ತಿ ಅರ್ಧಂಬರ್ಧ ಕಾಣುತ್ತಿದ್ದ 27 ನಂಬರನ್ನು ತೋರಿಸಿ, ಕಿಸೆಯಿಂದ ಟಿಕೇಟನ್ನೂ ತೆಗೆದು ತೋರಿಸಿದ. ರಾಯರ ಟಿಕೇಟನ್ನು ನೋಡಿ, “ನಿಮ್ಮ ನಂಬರಿನ ಸೀಟೇ ಇಲ್ಲ. ಅಲ್ಲಿ ಟಾರ್ಚ್‌ ಹಿಡ್ಕಂಡು ನಿತ್ಕಂಡಿದಾನಲ್ಲ. ಆ ವಯ್ಯನ್ನ ಹೋಗಿ ಕೇಳಿ” ಅಂದ. ರಾಮಚಂದ್ರರಾಯರು, ಮಂದ ಬೆಳಕಿನ ಟಾರ್ಚ್ ಹಿಡಿದುಕೊಂಡು, ಜನರಿಗೆ ಸೀಟು ತೋರಿಸುತ್ತಿದ್ದ ದಢೂತಿ ಆಸಾಮಿಯ ಬಳಿ ಹೋಗಿ “ಈ ನಂಬರ್‌ನ ಸೀಟು ಎಲ್ಲಿದೆ?" ಅಂತ ಕೇಳಿದರು.

“ಬನ್ನಿ ಸಾರ್ ಇಲ್ಲಿ” ಅಂತ ಅವರನ್ನು L ಸಾಲಿನತ್ತ ಕರೆತಂದ ಥಿಯೇಟರಿನ ದಢೂತಿ ಆಸಾಮಿಯೂ ಒಂದು ಕ್ಷಣ ತಬ್ಬಿಬ್ಬಾದ. ಮರುಕ್ಷಣವೇ ಸಾವರಿಸಿಕೊಂಡವ “ಸಾರ್.. ಆ ಸೀಟು ರಿಪೇರಿಗೆ ಹೋಗಿದೆ. ನಿಮ್ಗೆ ಕುರ್ಚಿ ಕೊಡ್ತೀನಿ ಇರಿ” ಅಂತಂದು ಮೂಲೆಯಲ್ಲಿ ಮಡಚಿಟ್ಟಿದ್ದ ತುಕ್ಕು ಹಿಡಿದ ತಗಡು ಕುರ್ಚಿಯೊಂದನ್ನು ತಂದು ಬಿಡಿಸಿಟ್ಟು “ಕೂತ್ಕಳಿ ಸಾರ್..” ಅಂತಂದು ಹೋದ.

 ರಾಮಚಂದ್ರರಾಯರು ಕುರ್ಚಿಯಲ್ಲಿ ಕೂರಬೇಕು ಅಂದುಕೊಳ್ಳುತ್ತಿರುವಾಗ ಪಕ್ಕದ ಇಪ್ಪತ್ತೇಳನೇ ನಂಬರ್ ಸೀಟಿನ ಆಸಾಮಿ “ರೀ ಸ್ವಾಮೀ, ಎಪ್ಪತ್ತ್ ರೂಪಾಯ್ ಕೊಟ್ಟಿಲ್ವೇನ್ರೀ. ಹೋಗ್ ಕೇಳ್ರೀ ಅವನ್ನ. ಈ ಸೀಟಲ್ಲಿ ಕೂರಲ್ಲ ಅಂತ ಹೇಳ್ರೀ..” ಅಂದ. ರಾಯರು “ಹ್ಹೆ.. ಹ್ಹೆ.. ಪರವಾಗಿಲ್ಲ ಹೋಗ್ಲಿ ಬಿಡಿ..” ಅಂತ ಪೆದ್ದುಪೆದ್ದಾಗಿ ಹೇಳ್ತಾ ಕುರ್ಚಿಯಲ್ಲಿ ಕೂತರು. ಪಕ್ಕದವ ಮುಂದುವರಿಸಿದ “ಅಲ್ರೀ ಸ್ವಾಮೀ, ಕಾಸು ನಿಮ್‌ದಾದ್ರೂ ಒಂದೇ. ನಮ್‌ದಾದ್ರೂ ಒಂದೇ. ಈ ನನ್‌ಮಕ್ಳು ನಮ್ಮನ್ನ ಹೆಂಗಂದ್ರೆ ಹಂಗೆ ಆಡಿಸ್ತಾರೆ. ಎಪ್ಪತ್ ರೂಪಾಯ್ ಕೊಟ್ಟು ಇಂಥ ತಗಡು ಸೀಟಲ್ಲಿ ಕೂತು ಸಿನಿಮಾ ನೋಡ್ಬೇಕು ಅಂದ್ರೆ ಹೊಟ್ಟೆ ಉರಿಯಲ್ವೇನ್ರೀ ನಿಮ್ಗೆ? ಟಿಕೆಟ್ ಅವನ್ ಮೊಕದ್ ಮೇಲ್ ಬಿಸಾಕಿ ನಿಮ್ ದುಡ್ ವಾಪಸ್ ಇಸ್ಕಳ್ರೀ..” ಅಂತ ಕ್ರಾಂತಿಗಿದೇ ಸಮಯ ಅನ್ನುವ ಹಾಗೆ ರಾಯರನ್ನು ಹುರಿದುಂಬಿಸಿದ.

ಅವನ ಮಾತಿನಿಂದ ರಾಯರಿಗೆ ಇದ್ದಕ್ಕಿದ್ದಂಗೆ ಆವೇಶ ಬಂದು, ಸೀದಾ ಹೊರಗೆ ಕೌಂಟರಿನತ್ತ ಧಾವಿಸಿದರು. ಕೌಂಟರಿನಲ್ಲಿದ್ದ ವ್ಯಕ್ತಿಗೆ “ಈ ನಂಬರ್‌ನ ಸೀಟೇ ಇಲ್ಲ. ನಮ್ ದುಡ್ಡು ವಾಪಸ್ ಕೊಡ್ರೀ” ಅಂತ ಅರ್ಧ ಸಿಟ್ಟು, ಅರ್ಧ ಭಯ ತುಂಬಿದ್ದ ದನಿಯಲ್ಲಿ ಕೇಳಿದರು. ರಾಯರಿಂದ ಎಲ್ಲ ವಿವರ ಕೇಳಿ ತಿಳಿದುಕೊಂಡ ಟಿಕೇಟು ಕೌಂಟರಿನ ವ್ಯಕ್ತಿ “ನೋಡೀ, ಒಂದ್ಸಲ ಟಿಕೇಟ್ ಇಷ್ಯೂ ಮಾಡಿದ ಮೇಲೆ ಹಣ ವಾಪಸ್ ಕೊಡೋಕಾಗೋದಿಲ್ಲ. ಅಲ್ಲಾ ಸ್ವಾಮೀ, ನೀವೇನು ಪರ್ಮನೆಂಟಾಗಿ ಥಿಯೇಟರ್ ಸೀಟಲ್ಲಿ ಕೂತಿರ್ತೀರಾ? ಎರಡೂವರೆ ಗಂಟೆ ಕೂತು ನೋಡೋ ಸಿನಿಮಾಗೆ ಅದ್ಯಾಕ್ ಹಂಗೆ ಸೀಟೂ ಸೀಟೂ ಅಂತ ಬಡ್ಕತೀರೋ.. ಹೋಗಿ, ಸ್ವಲ್ಪ ಅಡ್ಜೆಸ್ಟ್ ಮಾಡ್ಕಂಡು ಸಿನಿಮಾ ನೋಡಿ ಹೋಗಿ” ಅಂತ ಥೇಟು ಕೃಷ್ಣ ಪರಮಾತ್ಮನ ಹಾಗೆ ಉಪದೇಶ ನೀಡಿ ಕಿಂಡಿಯ ಬಾಗಿಲು ಮುಚ್ಚಿದ!

ಟಿಕೇಟು ಕೌಂಟರಿನವನ ಉಪದೇಶ ಕೇಳಿಕೊಂಡು ಪುನಃ ಥಿಯೇಟರಿನೊಳಕ್ಕೆ ಬರುವ ವೇಳೆಗೆ ಸಿನಿಮಾ ಶುರುವಾಗಿ, ಮೊದಲ ಸೀನ್ ಮುಗಿದಿತ್ತು. ಥಿಯೇಟರಿನ ಮಬ್ಬು ಬೆಳಕಿನಲ್ಲಿ ಹಾಗೇ ತಡಕಾಡುತ್ತಾ, ‘ಯೋವ್ ಅಡ್ಡದಿಂದ ಏಳಯ್ಯಾ’ ಅಂತ ಯಾರತ್ರನೋ ಬೈಯಿಸಿಕೊಳ್ತಾ ಅಂತೂ ರಾಯರು ತಮ್ಮ ಎಲ್ 26ನೇ ನಂಬರಿನ ತಗಡು ಕುರ್ಚಿಯಲ್ಲಿ ಕೂತರು. ಇವರು ಮತ್ತೆ ಬಂದು ಕೂತಿದ್ದನ್ನು ನೋಡಿ ಪಕ್ಕದ ಸೀಟಿನ ಕ್ರಾಂತಿಕಾರಿ ಏನೋ ಹೇಳಲಿಕ್ಕೆ ಅಂತ ಬಾಯಿ ತೆರೆದಿದ್ದ. ಅಷ್ಟರಲ್ಲಿ ಪರದೆ ಮೇಲೆ ಐಟಂ ಸಾಂಗು ಶುರುವಾಯ್ತು. ಕ್ರಾಂತಿಕಾರಿ ಐಟಂ ಸಾಂಗಿನಲ್ಲಿ ಧ್ಯಾನಮಗ್ನನಾದ.

ಆದರೆ, ರಾಮಚಂದ್ರರಾಯರಿಗೆ ಮಾತ್ರ ಸಿನಿಮಾವನ್ನು ಆನಂದಿಸಲು ಸಾಧ್ಯವಾಗುತ್ತಿಲ್ಲ. ಏನೋ ಒಂದು ಬಗೆಯ ಕಿರಿಕಿರಿ. ಸಿಂಹಾಸನದಲ್ಲಿ ಕೂತಿರುವ ರಾಜ, ಮಹಾರಾಜರುಗಳ ಮುಂದೆ ನೆಲದಲ್ಲಿ ಕುಳಿತಿರುವ ಬಡಪಾಯಿ ತಾನೇನೋ ಎಂಬಷ್ಟರ ಮಟ್ಟಿಗೆ ಇರಿಸು-ಮುರುಸು. ಎಪ್ಪತ್ತು ರೂಪಾಯಿ ತಗೊಂಡು ಸರಿಯಾದ ಸೀಟಿನ ವ್ಯವಸ್ಥೆಯನ್ನೂ ಮಾಡದ ಥಿಯೇಟರುಗಳ ದುಷ್ಟ ಮಾಲೀಕರ ವಿರುದ್ಧ ದೊಡ್ಡ ಪ್ರತಿಭಟನೆ ಮಾಡಬೇಕು. ಬಡ್ಡೀಮಕ್ಕಳು, ಮಾತು-ವಿರೋಧಕ್ಕೆಲ್ಲ ಬಗ್ಗೋದಿಲ್ಲ. ಇವರನ್ನೆಲ್ಲ ಹಿಡಿದು ಚೆನ್ನಾಗಿ ತದುಕಿದರೆ ಸರಿ ಹೋದೀತು…

‘ಹೋ… ಹ ಹ್ಹ ಹ್ಹ ಹ್ಹ ಹ್ಹಾ…’ ಥಿಯೇಟರಿನಲ್ಲಿ ಎದ್ದ ದೊಡ್ಡ ನಗೆಯ ಅಲೆ ರಾಯರ ಆಲೋಚನಾ ಲಹರಿಯನ್ನು ತುಂಡರಿಸಿತು. ‘ಎಲ್ರೂ ನನ್ನ ಬಗ್ಗೆ ನಕ್ಕರಾ?’ ಅನ್ನುವ ಅನುಮಾನದಿಂದ ರಾಯರು ಒಮ್ಮೆ ಸುತ್ತಲೂ ನೋಡಿದರು. ಅವರೆಲ್ಲ ತೆರೆಯ ಮೇಲಿನ ಹಾಸ್ಯ ದೃಶ್ಯ ನೋಡಿ ನಗುತ್ತಿದ್ದುದನ್ನು ಗಮನಿಸಿ ನಿರಾಳರಾದರು.

ಮತ್ತೊಂದಷ್ಟು ಕ್ಷಣಗಳಲ್ಲಿ ರಾಯರು ವೇದಾಂತದ ಮಡುವಿನಲ್ಲಿದ್ದರು. “ನಾನ್ಯಾಕೆ ಈ ಸೀಟಿನ ಬಗ್ಗೆ ಇಷ್ಟೊಂದು ವ್ಯಥೆಗೊಂಡಿದ್ದೇನೆ? ಇಷ್ಟಕ್ಕೂ ಸಿನಿಮಾ ಮುಗಿದ ನಂತರ ಎಲ್ಲರೂ ಅವರವರ ಸೀಟು ಬಿಟ್ಟು ಹೋಗಲೇಬೇಕು. ಹಾಗಿರುವಾಗ ಕೇವಲ ಕೆಲವೇ ಸಮಯ ನಮ್ಮದಾಗಿರುವ ಈ ಸೀಟಿನ ಬಗ್ಗೆ ನಮಗ್ಯಾಕಿಷ್ಟು ವ್ಯಾವೋಹ..?” ಹೀಗೆ ರಾಯರು ಕ್ರಾಂತಿ ಮತ್ತು ವೇದಾಂತದ ನಡುವೆ ತೊಳಲಾಟ ನಡೆಸುತ್ತಿರುವಾಗ, ಸಿನಿಮಾದ ಇಂಟರ್‌ವೆಲ್ ಬಂತು.

ಝಗ್ಗನೆ ದೀಪಗಳೆಲ್ಲ ಹತ್ತಿಕೊಂಡು ಥಿಯೇಟರಿನಲ್ಲಿ ಬೆಳಕಾಯಿತು. ತಮ್ಮದೇ ಲಹರಿಯಲ್ಲಿದ್ದ ರಾಯರು, ಸಡನ್ನಾದ ಘಟನೆಗೆ ಬೆಚ್ಚಿಬಿದ್ದರು. ತಾನು ಬೆತ್ತಲೆಯಾಗಿರುವೆನೋ ಎಂಬಷ್ಟು ಮುಜುಗರದಿಂದ, ತಗಡು ಕುರ್ಚಿಯಿಂದೆದ್ದು ಹೊರಬಂದರು. ಮತ್ತೆ ಥಿಯೇಟರಿನೊಳಕ್ಕೆ ಹೋಗುವ ಮನಸ್ಸಾಗದೆ ಮನೆಯತ್ತ ಸಾಗಿದರು.

ದಾರಿಯಲ್ಲಿ; ಉಡುಪಿ ಭಟ್ಟರ ದರ್ಶಿನಿಯಲ್ಲಿ ಸೀಟು ಹಾಕದೆ ಎಲ್ಲರೂ ನಿಂತುಕೊಂಡೇ ತಿಂಡಿ ತಿನ್ನುವ ವ್ಯವಸ್ಥೆ ಮಾಡಿದ್ದು ಭಾಳಾ ಒಳ್ಳೇದಾಯ್ತು ಅಂದುಕೊಂಡರು. ಪಾರ್ಕಿನಲ್ಲಿ ಬೆಂಚು ಹಾಕಿದರೆ ಹುಡುಗರೆಲ್ಲ ಕೂತು ಕಾಲಹರಣ ಮಾಡುತ್ತಾರೆ. ಅದಕ್ಕೆ ಅವನ್ನೆಲ್ಲ ತೆಗೆಸಿಬಿಡಬೇಕು ಅಂತ ಯೋಚಿಸಿದರು. ಬಸ್ಸಿನಲ್ಲಿ ಸೀಟಿಗಾಗಿ ಹಪಹಪಿಸುತ್ತಿದ್ದ ಜನರನ್ನು ಕಂಡು ಮರುಕಪಟ್ಟರು.

ಮತ್ತು, ಮುಂದಿನ ತಿಂಗಳ ಸಂಬಳದಲ್ಲಿ ಮನೆಗೊಂದು ಸೋಫಾ ತರಬೇಕು ಅಂದುಕೊಂಡರು.

❍ ಶ್ರೀರಾಮಶಂಕರಿಸುತ

No comments:

Post a Comment