![]() |
ಗಂಗಾ ಮಾತೆಯ ಮಂದಿರ |
ಯಮುನೆಯ ನಂತರ ಗಂಗೆ, ಭಾಗೀರಥಿಯಾಗಿ ಇಳಿದು ಬರುವ ಗಂಗೋತ್ರಿ ದರ್ಶನ. ಉತ್ತರಕಾಶಿಯಲ್ಲಿ ಹಾಲ್ಟ್ ಮಾಡಿ ಬೆಳಿಗ್ಗೆ ಎಂಟು ಗಂಟೆಗೆ ಹೊರಟ್ವಿ.
ದಾರಿ ಸಾಗ್ತಾ ಇದ್ಹಾಗೆ ರುದ್ರ ರಮಣೀಯ ಪ್ರಕೃತಿ ತೆರೆದುಕೊಳ್ತಿತ್ತು. ಎಡದಲ್ಲಿ ಸಡಿಲ ಗುಡ್ಡಗಳು, ಬಲದಲ್ಲಿ ಆಳ ಪ್ರಪಾತ ಅದರಾಳದಲ್ಲಿ ಹರಿಯುವ ನದಿ, ಎದುರು, ಎತ್ತರದಲ್ಲಿ ಪೈಪೋಟಿ ನಡೆಸ್ತಿವೆಯೇನೋ ಎಂಬಂತಿರೊ ಪರ್ವತ ಶಿಖರಗಳು, ಅವುಗಳ ತುದಿಯಲ್ಲಿ ಹಿಮದ ಟೊಪ್ಪಿಗೆ. ಕುತ್ತಿಗೆ ಹೊರಹಾಕಿ, ಕಣ್ಣು ಹಿಗ್ಗಿಸಿ ನೋಡಿದ್ದೇ ನೋಡಿದ್ದು.
ಗಂಗೆಯ ಉಗಮ ಗೋಮುಖ ಎಂಬಲ್ಲಿ. ಗಂಗಾ ಮಾತೆಯ ಮಂದಿರದಿಂದ 18 ಕಿಮೀ ಟ್ರೆಕ್ಕಿಂಗ್ ಹಾದಿ. ಕೇಳಿಯೇ ಸುಸ್ತಾದ ನಾವು ದೇವಿ ದರ್ಶನ ಮಾಡಿ ಬರೋಣ ಅಂತ ಹೋದರೆ ಎರಡು ಕಿ.ಮೀ. ಉದ್ದದ ಕ್ಯೂ! ವಿಶೇಷ ದರ್ಶನದ ಟಿಕೆಟ್ ತೆಗೊಂಡು ಅದರ ಲೈನಿನಲ್ಲಿ ನಿಂತ್ವಿ. ಅಲ್ಲೂ ತಳ್ಳಾಟ. ಮುಂದೆ ನಿಂತಿದ್ದ ದೇವಸ್ಥಾನದ ಸಿಬ್ಬಂದಿಯಂತೂ ಎಲ್ಲಾ ಕಡೆಯಿಂದ ತಳ್ಳಲ್ಪಟ್ಟು ನಿಂತಲ್ಲೇ ರೌಂಡ್ ಹೊಡೆಯುತ್ತಿದ್ದ. ಸುಸ್ತಾಗಿದ್ದ ಆತ ಎರಡೂ ಕೈಗಳಿಂದ ಜನರನ್ನ ಒಳಗೆ ತಳ್ಳೋಕೆ ಶುರು ಮಾಡಿದ್ದ. ನನಗೆ ರಷ್ ನಲ್ಲಿ ಅಷ್ಟಾಗಿ ಕಾಣಿಸದೆ, ನಾನು ಎಗರಿ ಆತನ ಕೈಗೆ ಕೊಟ್ಟ ಟಿಕೆಟನ್ನ, ಆತ ಬಾಯಿಗೆ ಹಾಕಿದ್ದನ್ನ ನೋಡಿ ಗಾಬರಿಯಾಗಿ, “ಆಪ್ನೆ ಹಮಾರಿ ಪರ್ಚಿ ಖಾಲೀ” ಅಂತ ಕಿರುಚ್ದೆ. ಅವನ ಬಾಯಿ ನೋಡೋದ್ರೊಳ್ಗೆ, ತಳ್ಳುತ್ತಿದ್ದ ಅವನ ಕೈಗೂ ಸಿಗದ ಹಾಗೆ ನನ್ನನ್ನ ಗುಂಪು ಪಕ್ಕಕ್ಕೆ ನೂಕಿತ್ತು.
![]() |
ತಣ್ಣಗೆ ಹರಿವ ಪಾಪನಾಶಿನಿ ಭಾಗೀರಥಿ |
ಉಳಿದವರು ಒಳ ಹೋಗಿದ್ರು. ಹಿಂದಿ ಹೋಗಿ ಅಚ್ಚ ಕನ್ನಡದಲ್ಲಿ “ಟಿಕೆಟ್ನೆ ತಿಂದ್ಕೊಂಬಿಟ್ನಲ್ಲಪ್ಪ, ಇನ್ನೇನ್ ಮಾಡಂಗಿಲ್ಲ. ಸೈಡಲ್ಲಿ ನಿಲ್ಲೋದು” ಅಂತ ಗೊಣಗಾಡ್ತಿದ್ದೆ. ಜೈ ಮಾತಾಕಿ ಅಂತ ಆತನೇ ಮುಂದೆ ಬಾಗಿ ನನ್ನನ್ನೂ ಸೇರಿಸಿ ಮೂವರನ್ನು ಒಳ ತಳ್ಳಿದ್ದ. ಮತ್ತೆರಡು ನಿಮಿಷದೊಳಗೆ ಆ ಗುಂಪೇ ತಾಯಿಯ ದರ್ಶನ ಮಾಡಿಸಿ ಹೊರ ತಳ್ಳಿತ್ತು.
ಈಚೆ ಬಂದು ನೋಡಿದರೆ ಆ ಸಿಬ್ಬಂದಿಯ ಬಾಯಿ ತುಂಬ ಟಿಕೆಟ್‌ಗಳಿದ್ದವು! ಜನರನ್ನು ತಳ್ಳೋದರಲ್ಲಿ ಎರಡು ಕೈ ಬ್ಯುಸಿ ಆಗಿದ್ದರಿಂದ ಆತ ಟಿಕೆಟ್‌ಗಳನ್ನೆಲ್ಲ ಬಾಯಿಗೆ ತುಂಬಿಕೊಂಡು ಅದನ್ನೇ ಪರ್ಸ್‌ನಂತೆ ಮಾಡಿಕೊಂಡಿದ್ದ!
ಗಂಗೋತ್ರಿ ಹಾದಿಯ ಒಂದಿಷ್ಟು ದೃಶ್ಯಗಳನ್ನು ಇಲ್ಲಿ ನೋಡಿ
❍ ವೀಣಾ ವಾಸುದೇವ


No comments:
Post a Comment