ಬಿರುಬಿಸಿಲ ಮೇ ತಿಂಗಳಲ್ಲೂ ಇಲ್ಲಿ ಮಳೆ ಬರುತ್ತೆ!

ತಣ್ಣಗೆ ಹರಿಯುವ ಯಮುನೆ

ಮನೆಯಲ್ಲಿ ಒಂದು ಕಂತೆ ಕೊತ್ತಂಬರಿ ಸೊಪ್ಪಿಗೂ ಸ್ಕೂಟಿ ತೆಗೀತಿದ್ದ ನನ್ಗೆ ಈ ಸಲ ಚಾರ್ ಧಾಮ್ ಯಾತ್ರೆಗೆ ಹೋಗೋಣ ಅಂದಾಗ, 'ಈವಾಗ್ಲೇ ಯಾಕೆ ತೀರ್ಥಯಾತ್ರೆ. ಅದೂ ಸಿಕ್ಕಾಪಟ್ಟೆ ನಡೀಬೇಕಂತೆ.. ಸುಮ್ಮನೆ ಒದ್ದಾಟ' ಅನ್ಸಿತ್ತು. ಆದರೆ ಪ್ಲಾನ್ ರೆಡಿಯಾಗ್ತಿದ್ಹಾಂಗೆ ನಾನು ಸ್ವೆಟರ್ ಶಾಲ್ಸ್ ಸೇರ್ಸೋಕೆ ಶುರು ಮಾಡಿದ್ದೆ. ನಿಜವಾಗಿಯೂ ಬೇರೆಲ್ಲಾ ಪ್ರವಾಸಗಳಿಗಿಂತ ಸಾಹಸಮಯ ಹಾಗೇ ಸುಂದರ ಅನುಭವಗಳನ್ನ ಈ ಯಾತ್ರೆ ಕಟ್ಟಿಕೊಟ್ಟಿತ್ತು.

ಚಾರ್ ಧಾಮ್ ಯಾತ್ರೆ ಅಂದರೆ ಉತ್ತರಾಖಂಡದ ನಾಲ್ಕು ಪ್ರಸಿದ್ಧ ಪುಣ್ಯಕ್ಷೇತ್ರಗಳಾದ ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಹಾಗೂ ಬದರಿನಾಥ ದರ್ಶನ. ಯಮುನೋತ್ರಿ ಮತ್ತು ಕೇದಾರಗಳಲ್ಲಿ ಚಾರಣವಿದೆ. ಅದರಲ್ಲೂ ಕೇದಾರ ಅತ್ಯಂತ ದುರ್ಗಮ.

ಯಮುನೆಯ ತಪ್ಪಲಲ್ಲಿ ಖರಸಾಲಿ ಹಳ್ಳಿ

ದೆಹಲಿಯ ಟ್ರಾವೆಲ್ ಏಜೆನ್ಸಿ ಮೂಲಕ ಕಾರ್ ಬುಕ್ ಮಾಡಿ ಮೈಸೂರಿನಿಂದ ಹೊರಟ್ವಿ. ಬೆಳಗಿನ ಫ್ಲೈಟ್ ಮೂಲಕ ಡೆಲ್ಲಿ. ಅಲ್ಲಿಂದ ಕಾರ್ ಮೂಲಕ ಹೃಷಿಕೇಶ ತಲುಪಿದ್ವಿ. ಮಾರನೇ ದಿನದಿಂದ ನಮ್ಮ ಯಾತ್ರೆ ಶುರು, ಯಮುನೋತ್ರಿ ಕಡೆಗೆ. ಮಧ್ಯ ದಾರಿಯಲ್ಲಿ ಮಸ್ಸೂರಿಯ ಕೆಂಪ್ಟಿ ಫಾಲ್ಸ್ ನೋಡಿ ಸಂಜೆ 4:30ರ ಹೊತ್ತಿಗೆ ಬರ್ಕೋಟ್ ತಲುಪಿದ್ವಿ. ಬೇಗ ಬಂದಿದ್ರಿಂದ ನಮ್ಮ ವಾಸ್ತವ್ಯ ಖರಸಾಲಿ ಅನ್ನುವ ಊರಿಗೆ ಶಿಫ್ಟ್ ಆಗಿತ್ತು. ಯಮುನೋತ್ರಿಯ ಕೆಳಭಾಗದಲ್ಲಿನ ಹಳ್ಳಿ. ಅಲ್ಲಿಗೆ ಬರ್ತಿದ್ದ ಹಾಗೆ ಮಳೆ.

ನಾವು ಪ್ರವಾಸಕ್ಕೆ ಹೋಗಿದ್ದು ಬಿರುಬೇಸಿಗೆಯ ಮೇ ತಿಂಗಳಿನಲ್ಲಿ. ಆದರೆ ಈ ಬೆಟ್ಟ ಪ್ರದೇಶಗಳಲ್ಲಿ ಯಾವಾಗ ಬೇಕಾದರೂ ಮಿಂಚು ಸಿಡಿಲಿನ ಧಾರಾಕಾರ ಮಳೆಯಾಗುತ್ತೆ. ಮಳೆಯಿಂದ ಸಡಿಲವಾಗಿರುವ ಬೆಟ್ಟ ಜರಿದು ಬಿದ್ದು ರೋಡ್ ಬ್ಲಾಕ್ ಆದರಂತೂ ಇಡೀ ರಾತ್ರಿ ನಿಂತಲ್ಲಿಯೇ ಕಳೀಬೇಕು. ಫೋನ್ ನೆಟ್ ವರ್ಕ್ ಕೂಡ ಸಿಗೋದಿಲ್ಲ.

ಹಿಮಾವೃತ ಆಗುವ ಹಿನ್ನೆಲೆಯಲ್ಲಿ ಅಟ್ಟಿಗೆಗಳ ಮೇಲೆ ಕಟ್ಟಿದ, ಕಲ್ಲು ಹೊದೆಸಿದ ಛಾವಣಿಯ ಮನೆಗಳು

ಅಂತೂ ಹೋಟೆಲ್ ಸಿಬ್ಬಂದಿಯೇ ನಾವು ಇದ್ದಲ್ಲಿಗೆ ಬಂದು ಕರೆದೊಯ್ದ. ಚಳಿಗೆ ಒಳಗಿನ ಮೂಳೆಗಳು ಕೂಡ ನಡುಗ್ತಿವೆ ಅನ್ನಿಸ್ತಿತ್ತು. ಬೆಳಿಗ್ಗೆಯೂ ಹೀಗೆ ಮಳೆ ಬಂದರೆ ಬೆಟ್ಟ ಹತ್ತೋದ್ ಹೇಗೆ ಅನ್ನುವ ಚಿಂತೆ. ಮಾರನೇ ದಿನ ಆಕಾಶ ಫುಲ್ ಕ್ಲಿಯರ್. ಬೃಹದಾಕಾರದ ಬೆಟ್ಟಗಳ ಕಣಿವೆಗಳ ಮಧ್ಯೆ ಓಡುತ್ತಿರುವ ಯಮುನೆಯ ಉಗಮ ಸ್ಥಾನದೆಡೆಗೆ ಹೆಜ್ಜೆ ಹಾಕಿದೆವು. ಕೆಲವರು ಕುದುರೆ ಇನ್ನು ಕೆಲವರು ಡೋಲಿ, ಇನ್ನೊಂದಷ್ಟು ಜನ ಬುಟ್ಟಿಗಳ ಮೊರೆ ಹೋಗಿದ್ದರು.

ಯಮುನೋತ್ರಿ ಹಾದಿಯ ವಿಹಂಗಮ ನೋಟ

ಯಮುನೆಯ ಉಗಮ ಸಮುದ್ರಮಟ್ಟದಿಂದ ಸುಮಾರು 4421 ಮೀ. ಎತ್ತರದಲ್ಲಿರುವ ಕಳಿಂದ ಪರ್ವತದಲ್ಲಿ. ಅಲ್ಲಿಯವರೆಗೆ ತಲುಪೋದು ಸಾಧ್ಯವಿಲ್ಲ. ಹೀಗಾಗಿ 1 ಕಿಮೀ ಕೆಳಗೆ ಜಾನಕಿ ಚಟ್ಟಿ ಎಂಬಲ್ಲಿ ಯಮುನಾ ಮಂದಿರವನ್ನು ರಾಜ ಪ್ರತಾಪ ಶಾ ನಿರ್ಮಿಸಿದನಂತೆ. ಈ ಮಂದಿರ ತಲುಪಲು 7 ಕಿಮೀ ಏರು ಬೆಟ್ಟದ ಹಾದಿ. ಮಂದಿರದ ಪಕ್ಕದ ಸೂರ್ಯಕುಂಡದಲ್ಲಿ ಶಿಲೆಗಳ ಮೂಲಕ ಹರಿದು ಬರುವ ಸ್ವಾಭಾವಿಕ ಬಿಸಿನೀರ ಚಿಲುಮೆಗಳು.

ಯಮುನಾ ತಾಯಿಯ ಪುರಾನಾ ಮಂದಿರ್

ಎಂಥ ವೈರುಧ್ಯ! ಒಂದು ಕಡೆ ಕೈ ಮರಗಟ್ಟುವಷ್ಟು ಚಳಿಯ ಯಮುನೆ. ಅದರ ಪಕ್ಕದಲ್ಲೆ ಚರ್ಮ ಸುಡುವಷ್ಟು ಹೊಗೆಯೇಳುತ್ತಿರುವ ಬಿಸಿನೀರ ಚಿಲುಮೆ. ಭಕ್ತರು ಸೂರ್ಯಕುಂಡದ ಬಳಿಯಿರುವ ದಿವ್ಯಶಿಲೆಗೆ ಪೂಜೆ ಸಲ್ಲಿಸಿ ಒಂದು ಚಿಕ್ಕ ಬಟ್ಟೆಯಲ್ಲಿ ಅಕ್ಕಿ ಆಲೂಗಡ್ಡೆ ಚೂರನ್ನು ಕಟ್ಟಿ ಬಿಸಿನೀರಲ್ಲಿ ಮುಳುಗಿಸಿ ತೆಗೆಯುತ್ತಿದ್ದರು. ಅದನ್ನೆ ಪ್ರಸಾದವೆಂದು ಮನೆಗೆ ಕೊಂಡೊಯ್ತಾರಂತೆ. ದೇವಿಯ ಬಳಿ ತಿಲಕವಿಟ್ಟು ಒಂದು ಹಿಡಿ ಕಳ್ಳೇಪುರಿ ಕೊಡ್ತಾರೆ ಅಷ್ಟೇ.

❍ ವೀಣಾ ವಾಸುದೇವ

No comments:

Post a Comment