ವಿದ್ಯಾರ್ಥಿಗಳಿಗಾಗಿ ಬಸ್ ಡ್ರೈವರ್ ಆದ ಉಡುಪಿಯ ಸರ್ಕಾರಿ ಶಾಲಾ ಶಿಕ್ಷಕ

ವಿದ್ಯಾರ್ಥಿಗಳೊಂದಿಗೆ ಶಿಕ್ಷಕ ಕಮ್ ಶಾಲಾವಾಹನ ಚಾಲಕ ರಾಜಾರಾಮ್

ಉಡುಪಿ ಜಿಲ್ಲೆ, ಬ್ರಹ್ಮಾವರ ತಾಲೂಕಿನ ಬಾರಾಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ರಾಜಾರಾಮ್ ಕೇವಲ ವಿಜ್ಞಾನ ಮತ್ತು ಗಣಿತ ಕಲಿಸುವ ಟೀಚರ್ ಅಷ್ಟೇ ಅಲ್ಲ, ಮಕ್ಕಳನ್ನು ಪ್ರತಿದಿನ ಶಾಲಾಬಸ್ನಲ್ಲಿ ಕರೆತರುವ ಮತ್ತು ಮನೆಗೆ ತಲುಪಿಸುವ ಡ್ರೈವರ್ ಕೂಡ ಹೌದು!

ಬಾರಾಳಿಯ ಹಿರಿಯ ಪ್ರಾಥಮಿಕ ಶಾಲೆಗೆ ಸುತ್ತಮುತ್ತ ಇರುವ ಸುಮಾರು 3 ಕಿಮೀ ದೂರದ ಪ್ರದೇಶಗಳಿಂದ ವಿದ್ಯಾರ್ಥಿಗಳು ಬರುತ್ತಾರೆ. ಆದರೆ ಬರುವ ಹಾದಿ ದುರ್ಗಮ. ಕಾಡಿನ ಮಧ್ಯದ ಮಣ್ಣಿನ ರಸ್ತೆಯಲ್ಲಿ ನಡೆದು ಬರಬೇಕು. ಈ ಕಾರಣಕ್ಕೆ ಹಲವು ಮಕ್ಕಳು ಶಾಲೆ ತಪ್ಪಿಸುತ್ತಿದ್ದರು. ಹೆಣ್ಣುಮಕ್ಕಳ ಹೆತ್ತವರಿಗೆ 3 ಕಿಮೀ ನಡೆದು ಬರುವ ದಾರಿ ಆತಂಕ ತರುತ್ತಿದ್ದ ಹಿನ್ನಲೆಯಲ್ಲಿ ಅವರೂ ಮಕ್ಕಳಿಗೆ ಶಾಲೆಗೆ ಹೋಗುವಂತೆ ಒತ್ತಾಯ ಮಾಡುತ್ತಿರಲಿಲ್ಲ.

3 ಕಿಮೀ ದೂರದ ಪ್ರದೇಶದಿಂದ ನಡೆದು ಬರುತ್ತಿದ್ದ ಮಕ್ಕಳಿಗಾಗಿ ಶಾಲಾ ವಾಹನ ಖರೀದಿಸಿ, ಡ್ರೈವಿಂಗ್ ಕಲಿತು ನಿತ್ಯ ಮಕ್ಕಳನ್ನು ಶಾಲೆಗೆ ಕರೆತರುವ ಮತ್ತು ಶಾಲೆ ಮುಗಿದ ಬಳಿಕ ಮನೆಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು ಬಾರಾಳಿ ಸರ್ಕಾರಿ ಶಾಲೆಯ ಶಿಕ್ಷಕ ರಾಜಾರಾಮ್! 

ದಿನೇ ದಿನೇ ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಿದ್ದದ್ದನ್ನು ಗಮನಿಸಿ ಬೇಸರಗೊಂಡ ಶಿಕ್ಷಕ ರಾಜಾರಾಮ್, ಈ ಶಾಲೆಯ ಹಳೆ ವಿದ್ಯಾರ್ಥಿ- ಪ್ರಸ್ತುತ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಸಂಸ್ಥೆ ನಡೆಸುತ್ತಿರುವ ವಿಜಯ್ ಹೆಗ್ಡೆ ಜೊತೆ ಈ ಬಗ್ಗೆ ತಮ್ಮ ಆತಂಕ ಹಂಚಿಕೊಂಡರು. ವಿಜಯ್ ಹೆಗ್ಡೆ, ಶಾಲೆಯ ಮತ್ತೊಬ್ಬ ಹಳೆ ವಿದ್ಯಾರ್ಥಿ ಗಣೇಶ್ ಶೆಟ್ಟಿ ಮತ್ತು ಶಿಕ್ಷಕ ರಾಜಾರಾಮ್ ಹಣ ಸೇರಿಸಿ ಒಂದು ಶಾಲಾ ಬಸ್ ಖರೀದಿಸಿದರು.

ಬಸ್‌ಗೆ ಚಾಲಕನನ್ನು ನೇಮಕ ಮಾಡಿಕೊಂಡರೆ ತಿಂಗಳಿಗೆ ಕನಿಷ್ಟ 7,000 ರೂ. ಸಂಬಳ ನೀಡಬೇಕು. ಆದರೆ ಸರ್ಕಾರಿ ಶಾಲಾ ಶಿಕ್ಷಕನಾಗಿ ಪಡೆಯುತ್ತಿರುವ ವೇತನದಲ್ಲಿ ಅದನ್ನು ಭರಿಸಲು ಸಾಧ್ಯವಿಲ್ಲ ಎಂಬುದು ರಾಜಾರಾಂಗೆ ತಿಳಿದಿತ್ತು. ಅದಕ್ಕಾಗಿ ಸ್ವತಃ ಡ್ರೈವಿಂಗ್ ಕಲಿತು ಲೈಸೆನ್ಸ್ ಮಾಡಿಸಿಕೊಂಡರು!
ಬಾರಾಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

ಶಾಲಾದಿನಗಳಲ್ಲಿ 8 ಗಂಟೆಗೆ ದಿನಚರಿ ಆರಂಭಿಸುವ ರಾಜಾರಾಂ ಬೆಳಗ್ಗೆ 4 ಬಾರಿ ಪಿಕಪ್ ಟ್ರಿಪ್ ಮಾಡುತ್ತಾರೆ. 9.20ರ ಹೊತ್ತಿಗೆ ಎಲ್ಲ ಮಕ್ಕಳನ್ನೂ ಶಾಲೆಗೆ ಕರೆತರುತ್ತಾರೆ. 9.30ಕ್ಕೆ ಶಾಲೆ ಆರಂಭವಾಗುವುದಕ್ಕೆ ಮುಂಚೆ ಎಲ್ಲ ಮಕ್ಕಳೂ ಶಾಲೆಯಲ್ಲಿರುತ್ತಾರೆ. ಈ ಶಾಲೆಯಲ್ಲಿ ಹೆಡ್ಮಾಸ್ಟರ್ ಸೇರಿ ಮೂವರು ಶಿಕ್ಷಕರಿದ್ದಾರೆ. ಅವರಲ್ಲಿ ಒಬ್ಬ ಶಿಕ್ಷಕರು ಬೆಳಗ್ಗೆ ಬೇಗ ಶಾಲೆ ತೆರೆದು ರಾಜಾರಾಂ ಅವರ ಮೊದಲ ಟ್ರಿಪ್ನ ಮಕ್ಕಳನ್ನು ಬರಮಾಡಿಕೊಳ್ಳಲು ಸಿದ್ಧರಾಗಿರುತ್ತಾರೆ. ರಾಜಾರಾಂ ಅವರ ಶಾಲಾ ಬಸ್ ಸರ್ವೀಸ್ ಆರಂಭವಾದ ಮೇಲೆ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ 50ರಿಂದ 90ಕ್ಕೆ ಏರಿಕೆಯಾಗಿದೆ.

ವಾಹನ ವಿಮೆ ಮತ್ತು ಡೀಸೆಲ್‌ಗೆ ತಮ್ಮ ಸ್ವಂತ ಹಣ ಖರ್ಚು ಮಾಡುತ್ತಿರುವ ರಾಜಾರಾಮ್, ಶಾಲಾ ಮೈದಾನದಲ್ಲಿ ಒಂದು ರೇಸ್ ಟ್ರ್ಯಾಕ್ ನಿರ್ಮಿಸಿ 100 ಹಾಗೂ 200 ಮೀ ಓಟದಲ್ಲಿ ಮಕ್ಕಳನ್ನು ತರಬೇತು ಮಾಡುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ. 

ರಾಜಾರಾಂ ಕೇವಲ ಸರ್ಕಾರಿ ಶಾಲೆಗಷ್ಟೇ ಅಲ್ಲ, ಎಲ್ಲ ಶಾಲೆಗಳಿಗೂ ಮಾದರಿ ಶಿಕ್ಷಕ.

No comments:

Post a Comment