ನಾವು ಮತ್ತು ಅವರು ಎಂಬ ಮನಸ್ಥಿತಿಗೆ ಕನ್ನಡಿಯಾಗುವ ‘ಮುಲ್ಕ್’


“ನಂಗೆ ಈ ದೇಶದ ಬಗ್ಗೆ ಪ್ರೀತಿ ಇದೆ. ಆದ್ರೆ ಅದನ್ನು ಸಾಬೀತು ಮಾಡು ಅಂದ್ರೆ ಹೇಗೆ ಮಾಡೋದು?” ಅಂತ ಅಸಹಾಯಕ ಧ್ವನಿಯಲ್ಲಿ ಕೇಳ್ತಾನೆ ಮುರಾದ್ ಅಲಿ ಮೊಹಮದ್. ಪ್ರೇಕ್ಷಕನಿಗೂ ಒಂದು ಕ್ಷಣ ಹೌದಲ್ವ ಅನಿಸುತ್ತೆ. ಅಮ್ಮನನ್ನು ಎಲ್ರೂ ಪ್ರೀತಿಸ್ತೇವೆ, ಆದ್ರೆ ಅದನ್ನ ಸಾಬೀತು ಮಾಡು ಅಂದ್ರೆ ಕಷ್ಟವೇ ಸರಿ.

ಬಿಲಾಲ್ ಮೊಹಮದ್ ಪಾತ್ರದಲ್ಲಿ ಮನೋಜ್ ಪಹ್ವಾ
ಅನುಭವ್ ಸಿನ್ಹಾ ನಿರ್ದೇಶನದ ‘ಮುಲ್ಕ್’ ಸಿನಿಮಾದಲ್ಲಿ ಇಂಥ ಹಲವು ಕ್ಷಣಗಳು ಎದುರಾಗ್ತವೆ. ಕೆಲವಕ್ಕೆ ಉತ್ತರಗಳು ಸಿಗ್ತವೆ. ಕೆಲವು ಪ್ರಶ್ನೆಗಳಾಗೇ ಉಳೀತವೆ. ಉಗ್ರ ಚಟುವಟಿಕೆ ನಡೆಸಿ ಎನ್ಕೌಂಟರ್‌ನಲ್ಲಿ ಸಾಯುವ ಮಗನ ಕಾರಣದಿಂದ ಇಡೀ ಕುಟುಂಬ ‘ಭಯೋತ್ಪಾದಕರು’ ಎಂಬ ಹಣೆಪಟ್ಟಿ ಕಟ್ಟಿಕೊಳ್ಳಬೇಕಾಗುವುದು ಮತ್ತು ನಾವು ಉಗ್ರರಲ್ಲ ಅಂತ ವ್ಯವಸ್ಥೆಗೂ, ಸುತ್ತಲಿನ ಸಮಾಜಕ್ಕೂ ಸಾಬೀತು ಮಾಡುವಾಗಿನ ಹೆಣಗಾಟ ಸಿನಿಮಾದ ಒನ್ಲೈನ್ ಸ್ಟೋರಿ. ಇದನ್ನೊಂದು ಥ್ರಿಲ್ಲಿಂಗ್ ಕೋರ್ಟ್ ರೂಂ ಡ್ರಾಮಾ ಆಗಿ ಮಾಡುವಲ್ಲಿ ನಿರ್ದೇಶಕ ಯಶಸ್ವಿಯಾಗಿದ್ದಾರೆ. ರಿಶಿಕಪೂರ್‌ರಂಥ ಮಾಗಿದ ಕಲಾವಿದನಿಗೆ ಪೈಪೋಟಿ ನೀಡುವ ರೀತಿಯಲ್ಲಿ ಎಲ್ಲ ಕಲಾವಿದರೂ ಪಾತ್ರಗಳ ಪರಕಾಯ ಪ್ರವೇಶ ಮಾಡಿದ್ದಾರೆ. ಉಗ್ರ ಮಗನ ಅಮಾಯಕ ಮತ್ತು ಅಸಹಾಯಕ ಅಪ್ಪನ ಪಾತ್ರದಲ್ಲಿ ಮನೋಜ್ ಪಹ್ವಾರದ್ದು ನೆನಪಿನಲ್ಲುಳಿಯುವ ನಟನೆ. ಆಗಾಗ ನಡೆದ ನೈಜ ಘಟನೆಗಳನ್ನು ಆಧರಿಸಿದ ಸಿನಿಮಾ ಅಂತ ಟೈಟಲ್ ಕಾರ್ಡಿನಲ್ಲಿ ಹಾಕಲಾಗಿದೆ. ಚಿತ್ರ ವಾಸ್ತವತೆಗೆ ತುಂಬ ಹತ್ತಿರದಲ್ಲೂ ಇದೆ. "ಮುಸ್ಲಿಮರನ್ನು ಹಳಿಯುವಾಗ ಹಿಂದುಗಳು ಸಂಭ್ರಮಿಸುತ್ತಾರೆ. ಯಾಕಂದ್ರೆ ಹೀಯಾಳಿಕೆಗೆ ಗುರಿಯಾಗುವ ಸಮುದಾಯ ನಮಗೆ ಸಂಬಂಧಿಸಿಲ್ಲ, ಅದು ಇನ್ನೊಬ್ಬರದ್ದು ಅನ್ನುವ ಮನೋಭಾವ ಇದಕ್ಕೆ ಕಾರಣ" ಅಂತ ಕೋರ್ಟ್‌ನಲ್ಲಿ ಆರೋಪಿ ಪರ ವಕೀಲೆ ಆರತಿ ಹೇಳುವ ಮಾತು ಎದೆಗೆ ಮುಟ್ಟುತ್ತದೆ.

ದೇಶಪ್ರೇಮಿ ಕಾನ್ಪುರದ ಸರ್ತಾಜ್
ಅಂದ ಹಾಗೆ, ಎನ್ಕೌಂಟರ್ನಲ್ಲಿ ಸತ್ತ ಉಗ್ರ ಮಗನ ಶವವನ್ನ ಸ್ವೀಕರಿಸೋದಕ್ಕೆ ಕುಟುಂಬ ನಿರಾಕರಿಸುವ ದೃಶ್ಯ ಸಿನಿಮಾದಲ್ಲಿದೆ. ಇದು ಉತ್ತರಪ್ರದೇಶದ ಕಾನ್ಪುರದಲ್ಲಿ ಯಥಾವತ್ ನಡೆದಿದ್ದ ಘಟನೆ.  ಸರ್ತಾಜ್ ಅನ್ನುವ ವ್ಯಕ್ತಿಯ ಮಗ ಸೈಫುಲ್ಲಾ ಐಸಿಸ್ ಸೇರಿ ವಿಧ್ವಂಸಕ ಕೃತ್ಯ ನಡೆಸೋದಕ್ಕೆ ಸಂಚು ಮಾಡ್ತಿದ್ದಾಗ ಎನ್ಕೌಂಟರ್ನಲ್ಲಿ ಸತ್ತಿದ್ದ. ಅವನ ಶವನನ್ನ ಪಡೆಯೋದಕ್ಕೆ ನಿರಾಕರಿಸಿದ್ದ ಸರ್ತಾಜ್ “ಜೋ ಅಪ್ನೇ ದೇಶ್ ಕಾ ನಹೀ ಹುವಾ ವೋ ಹಮಾರಾ ಕ್ಯಾ ಹೋಗಾ?” (ತನ್ನ ದೇಶಕ್ಕೆ ಆಗದವ ನಮ್ಮವ ಹೇಗಾದಾನು?) ಅಂದಿದ್ದ. ಆತ ನಡೆದುಕೊಂಡ ರೀತಿಗೆ ಸಂಸತ್‌ನಲ್ಲಿ ರಾಜನಾಥ್ ಸಿಂಗ್ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದರು.
ಎಲ್ಲ ಭಾರತೀಯರೂ ತಂತಮ್ಮ ಕ್ರಿಮಿನಲ್ ಸಂಬಂಧಿಗಳನ್ನು ಹೀಗೆ ತಿರಸ್ಕರಿಸಿದರೆ ಬಹುಶಃ ನಮ್ಮ ನಡುವಿನ ಮಾನಸಿಕ ಗೋಡೆಗಳನ್ನು ಕಡೆವಬಹುದೇನೋ.

No comments:

Post a Comment