“ಸತ್ತ ಮೇಲೆ ಏನಾಗಬೇಕು? ಆರಡಿ-ಮೂರಡಿ ಇದ್ರೆ ಸಾಕು” ಅನ್ನೋ ವೈರಾಗ್ಯದ ಮಾತು ನಮ್ಮಲ್ಲಿ ಜನಪ್ರಿಯ. ಇದ್ದಾಗ ಎಷ್ಟು ಐಶ್ವರ್ಯ ಕೂಡಿಟ್ಟರೂ ಕೊನೆಗಾಲದಲ್ಲಿ ಅದನ್ನ ತಗೊಂಡು ಹೋಗೋಕೆ ಆಗಲ್ಲ ಅನ್ನೋ ತತ್ವಜ್ಞಾನದ ಅರ್ಥವೂ ಅಡಗಿರುವ ಈ ವಾಕ್ಯ, ಸತ್ತ ಮನುಷ್ಯನಿಗೆ ಆರಡಿ ಮೂರಡಿಯ ನೆಲ ಸಾಕು ಅಂತ ಸಿಂಪಲ್ಲಾಗಿ ಸೂಚಿಸುತ್ತೆ. ಒಂದ್ವೇಳೆ ಅಂಥ ಆರು ಅಡಿ ಇದ್ದ ಮೂರು ಅಡಿ ಅಗಲದ ಗೂಡಿನೊಳಗೆ ಬದುಕು ಸವೆಸಬೇಕಾದ ಪರಿಸ್ಥಿತಿ ಬಂದ್ರೆ? ಬಹುಶಃ ನಮ್ಮಲ್ಲಿ ಬಹುತೇಕರಿಗೆ ಊಹಿಸಿಕೊಳ್ಳೋಕೂ ಆಗದ ಪರಿಸ್ಥಿತಿ ಇದು.
ಅಡುಗೆಮನೆ ಮತ್ತು ಟಾಯ್ಲೆಟ್ ಒಂದೇ ರೂಮಿನಲ್ಲಿ ಇದ್ರೆ ಹೆಂಗೆ? ಶುಚಿತ್ವ ಕಮ್ಮಿಯಾದರೂ ಶೌಚದ ಬಗ್ಗೆ ಬಯಂಕರ ಮಡಿವಂತಿಕೆಯ ಭಾರತೀಯರಿಗೆ ಈ ಕಲ್ಪನೆಯೇ ‘ಯಪ್ಪಾ!’ ಅನಿಸಬಹುದು. ಹಾಂಕಾಂಗ್ನ ಕಡಿಮೆ ವೆಚ್ಚದ ಅಪಾರ್ಟ್ಮೆಂಟ್ಗಳು ಇರೋದು ಹೀಗೇ. ಇಲ್ಲಿ ಟಾಯ್ಲೆಟ್ಟೇ ಅಡುಗೆಮನೆ, ಅಡುಗೆಮನೆಯೇ ಬಚ್ಚಲು! ಇದರ ಜೊತೆ ಒಂದು ಮಲಗುವ ಗೂಡು ಇರೋ ಈ ಅಪಾರ್ಟ್ಮೆಂಟ್ಗೆ ತಿಂಗಳಿಗೆ 2000 ಹಾಂಕಾಂಗ್ ಡಾಲರ್ (ಸುಮಾರು 18,000 ರೂ.) ಬಾಡಿಗೆ ತೆರಬೇಕು!
ಇದು ಕೇವಲ ಮಲಗೋದಕ್ಕೆ ಇರುವ ಗೂಡು. ಇದರ ಸರಾಸರಿ ವಿಸ್ತೀರ್ಣ 15 ಚದರಡಿ. ಅಂದ್ರೆ ನಮ್ಮಲ್ಲಿ ಮನೆಯ ಮುಂದೆ ನಡೆದುಹೋಗೋದಕ್ಕೆ ಪ್ಯಾಸೇಜ್ ಇರುತ್ತಲ್ಲ ಅದಕ್ಕಿಂತ ಚಿಕ್ಕದು! ಇದಕ್ಕೆ ಮೂರು ಕಡೆಯಿಂದ ಗೋಡೆ. ಕಿಟಕಿ ಇಲ್ಲವೇ ಇಲ್ಲ! ಇದನ್ನ 'ಕಾಫಿನ್ ಕ್ಯೂಬಿಕಲ್ಸ್' ಅಂತಾರೆ. ಅಂದ್ರೆ ಶವ ಪೆಟ್ಟಿಗೆ ಅಂತ. ಇಟ್ಟಿಗೆ, ಸಿಮೆಂಟ್‌ನಿಂದ ಮಾಡಿದ್ದು ಅನ್ನೋದನ್ನ ಬಿಟ್ರೆ ಇದು ಅಕ್ಷರಶಃ ಶವಪೆಟ್ಟಿಗೆಯೇ. ಬೇಸಿಗೆಯಲ್ಲಿ 35 ಡಿಗ್ರಿ ತಾಪಮಾನ ಇರುವಾಗ ಇದರೊಳಗೆ ಮಲಗೋದು ಅಂದ್ರೆ ಅದು ಚಿತ್ರಹಿಂಸೆ ಅಂತಾರೆ ಇಲ್ಲಿ ವಾಸಿಸುವ ಬಡವರು.
![]() |
| ಇಂಥ ಗೂಡುಗಳಲ್ಲಿ ಹೆಂಡತಿ ಮಕ್ಕಳೊಂದಿಗೆ ಸಂಸಾರ ನಡೆಸ್ತಾರೆ! |
ಬಾಹ್ಯಾಕಾಶ ಮುಟ್ಟಿದ ಫ್ಲಾಟ್ ದರ!
75 ಲಕ್ಷ ಜನಸಂಖ್ಯೆ ಇರುವ ನಗರ ಹಾಂಕಾಂಗ್. ದೇಶದ ವಿಸ್ತೀರ್ಣ ಬದಲಾಗೋದಿಲ್ಲ. ಹೊಸ ಕಟ್ಟಡ ನಿರ್ಮಿಸೋದಕ್ಕೆ ಇನ್ನು ಬಹುತೇಕ ನೆಲ ಇಲ್ಲವೇ ಇಲ್ಲ ಅನ್ನೋ ಹಾಗಿದೆ ಪರಿಸ್ಥಿತಿ. ಹಾಗಾಗಿ ರಿಯಲ್ ಎಸ್ಟೇಟ್ ಬೆಲೆ ಗಗನವನ್ನೂ ಹಾದುಹೋಗಿ ಬಾಹ್ಯಾಕಾಶ ಮುಟ್ಟಿದೆ! ಫ್ಲಾಟ್‌ನ ಬೆಲೆ ಒಂದು ಚದರ ಅಡಿಗೆ 24,900 ಹಾಂಕಾಂಗ್ ಡಾಲರ್ ( ಸುಮಾರು 2,15,000 ರೂ.!) ಇದು ಸಿಂಗಾಪುರದ ಫ್ಲಾಟ್ ಬೆಲೆಗಿಂತ ದುಪ್ಪಟ್ಟು. ಚದರಡಿಗೆ 2500 ರೂ.ನಿಂದ ಆರಂಭವಾಗುವ ಬೆಂಗಳೂರಿನ ಫ್ಲಾಟುಗಳ ಬೆಲೆ ದುಬಾರಿ ಲೇಔಟುಗಳಲ್ಲಿ ಚದರಡಿಗೆ 8,000 ರೂಪಾಯಿವರೆಗೆ ಇದೆ. ಈ ಲೆಕ್ಕದಲ್ಲಿ ಹಾಂಕಾಂಗ್‌ನ ಫ್ಲಾಟು ಬೆಲೆ ಎಷ್ಟು ದುಬಾರಿ ಅಂತ ನೀವೇ ಊಹಿಸಿ. ಈ ಬೆಲೆಯಲ್ಲಿ ಒಂದು ಬೆಡ್‌ರೂಂ (650 ಚದರಡಿ ವಿಸ್ತೀರ್ಣದ) ಫ್ಲಾಟು ಖರೀದಿಗೆ 14 ಕೋಟಿ ರೂ. ಬೇಕು! ಇಷ್ಟು ಸಂಪಾದಿಸೋಕೆ ಮಧ್ಯಮವರ್ಗದ ಒಬ್ಬ ಸರ್ಕಾರಿ ನೌಕರ 20 ವರ್ಷಗಳ ಕಾಲ ತನ್ನ ಸಂಪೂರ್ಣ ಸಂಬಳವನ್ನ ತೆಗೆದಿರಿಸಬೇಕಾಗುತ್ತಂತೆ!ರೆಸ್ಟೊರೆಂಟ್‌ಗಳಲ್ಲಿ ವೇಟರ್ ಕೆಲಸ ಮಾಡುವವರು, ಸೆಕ್ಯುರಿಟಿ ಗಾರ್ಡ್‌ಗಳು, ಸ್ವಚ್ಛತಾ ಸಿಬ್ಬಂದಿ, ಡೆಲಿವರಿ ಬಾಯ್ಸ್ ಇತ್ಯಾದಿ ಉದ್ಯೋಗಿಗಳು ಇಂಥ ಸಿಂಗಲ್ ಗೂಡು ಅಥವಾ ಗೂಡು ಅಪಾರ್ಟ್‌ಮೆಂಟ್‌ಗಳ ನಿವಾಸಿಗಳು.
ಹಾಂಕಾಂಗ್ ಸರ್ಕಾರ ಇಂಥ ಬಡವರಿಗೆ ವರ್ಷಕ್ಕೆ ಸುಮಾರು 20 ಸಾವಿರ ಕಡಿಮೆ ವೆಚ್ಚದ ಮನೆ ನಿರ್ಮಿಸ್ತಿದೆ. ಅಂದಾಜು 2 ಲಕ್ಷಕ್ಕಿಂತ ಹೆಚ್ಚು ಮಂದಿ ಈ ರೀತಿಯ ಮನೆಗಳಲ್ಲಿ ಜೀವನ ಮಾಡ್ತಿರಬಹುದು. ಇವರೆಲ್ಲರಿಗೂ ಮನೆ ಸಿಗೋದಕ್ಕೆ 10ರಿಂದ 15 ವರ್ಷ ಬೇಕು. ದುರಂತ ಅಂದ್ರೆ ಈಗಾಗ್ಲೇ 10 ವರ್ಷಕ್ಕಿಂತ ಹೆಚ್ಚಿನ ಬದುಕನ್ನು ಇಂಥ ಗೂಡುಗಳಲ್ಲೇ ಕಳೆದವರಿದ್ದಾರೆ!
![]() |
| ಹಾಂಕಾಂಗ್‌ನಲ್ಲಿ ಬಹುತೇಕ ಮುಚ್ಚಿಟ್ಟಂತಿದ್ದ ಈ ಬವಣೆಯ ಬದುಕನ್ನು ಹೊರಜಗತ್ತಿಗೆ ತೆರೆದಿಟ್ಟವನು ಛಾಯಾಗ್ರಾಹಕ ಬೆನ್ನಿ ಲ್ಯಾಮ್ |









No comments:
Post a Comment