ಮದುವೆಮಂಟಪದ ವೇದಿಕೆಯಲ್ಲಿ ಮಾಡಿದ ಡ್ಯಾನ್ಸ್‌ನ ಸುಮಾರು ಒಂದು ನಿಮಿಷ ಅವಧಿಯ ದೃಶ್ಯ, ಊರಿಂದಾಚೆ ಅನಾಮಧೇಯರಾಗಿದ್ದ ಮಧ್ಯವಯಸ್ಕ ವ್ಯಕ್ತಿಯೊಬ್ಬರನ್ನ ಇಡೀ ಭಾರತಕ್ಕೆ ಪರಿಚಿಯಿಸಿದೆ; ಅವರ ಖ್ಯಾತಿ ಈಗ ಬಹುಶಃ ವಿದೇಶಗಳಿಗೂ ಹರಡಿರುವ ಸಾಧ್ಯತೆಯಿದೆ! ಇದು ಸಂಜೀವ್ ಶ್ರೀವಾಸ್ತವ್ ಅವರ ಬದುಕಿನ ಟರ್ನಿಂಗ್ ಪಾಯಿಂಟ್‌ನ ಒಂದು ಸಾಲಿನ ವಿವರ. ಸೋಷಿಯಲ್ ಮೀಡಿಯಾದ ಅಗಾಧ ಶಕ್ತಿಯ ಉದಾಹರಣೆಗಳ ಸಾಲಿಗೆ ಮತ್ತೊಂದು ಸೇರ್ಪಡೆ.
Best wedding performance selected by UNESCO pic.twitter.com/XPmLbmRKld— Gautam Trivedi (@KaptanHindustan) May 30, 2018
ಅವಕಾಶಗಳ ಸರದಿ ಸಾಲು
ಈ ಡ್ಯಾನ್ಸಿಂಗ್ ಅಂಕಲ್ ಈಗ ಮಧ್ಯಪ್ರದೇಶದ ವಿದಿಶಾ ನಗರಪಾಲಿಕೆ ರಾಯಭಾರಿ. ಬಜಾಜ್ ಅಲಯನ್ಸ್ ಕಂಪನಿಯ ಜಾಹೀರಾತಿಗೆ ಮಾಡೆಲ್. ಟಿವಿ ಚಾನೆಲ್ಲುಗಳಿಗೆ ಟಿಆರ್ಪಿ ತಂದುಕೊಡುವ ಸರಕು. ಆ ಕಾರಣಕ್ಕೆ ಸ್ಥಳೀಯ ಚಾನೆಲ್ನ ಕಾರ್ಯಕ್ರಮದಿಂದ ಹಿಡಿದು ಸಲ್ಮಾನ್ ಖಾನ್ನ ಶೋದವರೆಗೆ ಅವರಿಗೆ ಆಹ್ವಾನ. ಇದೆಲ್ಲಕ್ಕಿಂತ ಮಿಗಿಲಾಗಿ ಸಂಜೀವ್‌ರ ಆರಾಧ್ಯ ನಟ ಗೋವಿಂದನನ್ನು ಭೇಟಿ ಮಾಡಿ ಆತನ ಜೊತೆ ಹೆಜ್ಜೆ ಹಾಕುವ ಅವಕಾಶ. ಇಷ್ಟೆಲ್ಲವನ್ನೂ ಕೇವಲ ಹತ್ತು ದಿನಗಳಲ್ಲಿ ಸಾಧ್ಯವಾಗಿಸಿದೆ ಸೋಷಿಯಲ್ ಜಗತ್ತು! ಇಷ್ಟು ದಿನ ಫೇಸ್‌ಬುಕ್ಕು, ಟ್ವಿಟರು ಇತ್ಯಾದಿ ಸೋಷಿಯಲ್ ಸೈಟುಗಳ ಸಹವಾಸದಿಂದ ದೂರ ಇದ್ದ ಸಂಜೀವ್ ಈಗ ಯೂಟ್ಯೂಬೂ ಸೇರಿದಂತೆ ಎಲ್ಲವುಗಳಲ್ಲೂ ತಮ್ಮ ಖಾತೆ ತೆರೆದಿದ್ದಾರೆ.![]() |
| ಯೌವನದ ದಿನಗಳಲ್ಲಿ ವೇದಿಕೆ ಮೇಲೆ ಸಂಜೀವ್ ಶ್ರೀವಾಸ್ತವರ ಹುಮ್ಮಸ್ಸು |
ಶಾಲೆಯಲ್ಲಿ ಕಲಿತ ವಿದ್ಯೆಯಲ್ಲ
ಅಂದ ಹಾಗೆ ಸಂಜೀವ್ ಶ್ರೀವಾಸ್ತವ್ ಶಾಲೆಗೆ ಹೋಗಿ ಡ್ಯಾನ್ಸ್ ಕಲಿತವರಲ್ಲ. ಅವರ ತಾಯಿ ಶಾಸ್ತ್ರೀಯ ನೃತ್ಯದ ಶಿಕ್ಷಕಿ. ಚಿಕ್ಕವರಿದ್ದಾಗ ಹೆಣ್ಮಕ್ಕಳ ನೃತ್ಯಭಂಗಿಗಳನ್ನ ತಮಾಷೆಯಾಗಿ ಅನುಕರಿಸಿ ಲೇವಡಿ ಮಾಡುತ್ತಿದ್ದರಂತೆ ಸಂಜೀವ್. ಹತ್ತು ವರ್ಷದವರಿದ್ದಾಗ ಅವರ ಕಾಲನಿಯಲ್ಲಿ ನಡೆದ ಡ್ಯಾನ್ಸ್ ಸ್ಪರ್ಧೆಯಲ್ಲಿ ಸಂಜೀವ್ ಮೊದಲ ಬಾರಿ ವೇದಿಕೆ ಏರಿ ಕುಣಿದಿದ್ದರು. ಅವರ ಅದೃಷ್ಟಕ್ಕೆ ಅದರಲ್ಲಿ ಪ್ರೈಜು ಬಂದಿತ್ತು. ಅದು ಆರಂಭ. 1982ರಿಂದ 1998ರವರೆಗೆ 16 ವರ್ಷಗಳ ಕಾಲ ಸಂಜೀವ್ ಅನೇಕ ಸ್ಟೇಜ್ ಶೋಗಳನ್ನ ಕೊಟ್ಟಿದ್ರು. ಆದರೆ ಅನಿರೀಕ್ಷಿತವಾಗಿ ಕಾಲಿಗೆ ಆದ ನೋವು ಮತ್ತು ಮನೆಯ ಜವಾಬ್ದಾರಿ ಅವರು ವೇದಿಕೆಯಿಂದ ಇಳಿಯುವ ಹಾಗೆ ಮಾಡಿತ್ತು. ಇಂಜಿನಿಯರಿಂಗ್ ಓದಿ ಲೆಕ್ಟರರ್ ಆಗಿರುವ ಸಂಜೀವ್ ಈಗ ಪತ್ನಿ ಹಾಗೂ ಎರಡು ಮಕ್ಕಳ ಜೊತೆ ಸಂತೃಪ್ತ ಜೀವನ ನಡೆಸ್ತಿದಾರೆ.ಅಮ್ಮ ಹುಶಾರಾದರು!
ಇದ್ದಕ್ಕಿದ್ದ ಹಾಗೆ ಸಿಕ್ಕ ಜನಪ್ರಿಯತೆ, ನಟ ಗೋವಿಂದನ ಜತೆ ಹೆಜ್ಜೆ ಹಾಕಿದ್ದು ಇದೆಲ್ಲಕ್ಕೂ ಮೀರಿ ಸಂಜೀವ್‌ರಿಗೆ ಖುಷಿ ಕೊಟ್ಟ ಸಂಗತಿ ಅಂದರೆ ಅವರಮ್ಮನ ಖುಷಿ. ಕಳೆದ ವರ್ಷ ರೈಲು ಅಪಘಾತದಲ್ಲಿ ಸಂಜೀವ್‌ರ ತಮ್ಮ ತೀರಿಕೊಂಡಿದ್ದರು. ಮಗನ ಸಾವಿನಿಂದ ಆಘಾತಕ್ಕೊಳಗಾದ ಅವರ ತಾಯಿ ಅವತ್ತಿಂದ ಇವತ್ತಿನವರೆಗೆ ಮನೆ ಬಿಟ್ಟು ಎಲ್ಲೂ ಹೋಗಿಲ್ಲ. ಮನೆಯಲ್ಲಿದ್ದಾಗಲೂ ನಗುವಿಲ್ಲದ ಪ್ರೇತಕಳೆಯ ಮುಖ. ಆದರೆ ಹದಿನೈದು ದಿನಗಳ ಹಿಂದೆ ಸಂಜೀವ್‌ರನ್ನು ನೋಡೋದಕ್ಕೆ, ಮಾತನಾಡಿಸೋದಕ್ಕೆ ಮಾಧ್ಯಮದ ಮಂದಿ ಮನೆ ಮುಂದೆ ಜಮಾಯಿಸಿದಾಗ ಅವರ ತಾಯಿ ಕುತೂಹಲದಿಂದ ಹೊರಬಂದರಂತೆ. 'ಡ್ಯಾನ್ಸ್‌ನ ವೀಡಿಯೋ ನೋಡಿ ಅಮ್ಮ ಮನಸಾರೆ ನಕ್ಕರು. ಅದು ಅತ್ಯಂತ ಖುಷಿಯ ಕ್ಷಣ' ಅಂದಿದ್ದಾರೆ ಸಂಜೀವ್.ಅಂದ ಹಾಗೆ ಯಶಸ್ವಿ ಪುರುಷರ ಹಿಂದೆ ಮಹಿಳೆ ಇರುತ್ತಾಳೆ ಅನ್ನೋ ಮಾತಿದೆ; ಸಂಜೀವ್‌ರ ಹಿಂದೆ ಅವರ ಪತ್ನಿ ಅಂಜಲಿ ವೇದಿಕೆಯಲ್ಲಿ ಇದ್ದೇ ಇರುತ್ತಾರೆ. ಆಕೆ ಡ್ಯಾನ್ಸ್ ಮಾಡಬೇಕಂತಿಲ್ಲ, ವೇದಿಕೆಯಲ್ಲಿದ್ದರೆ ಸಾಕು ನನಗೆ ಹುಮ್ಮಸ್ಸು ಅನ್ನುತ್ತಾರೆ ಸಂಜೀವ್. ನಿಜಕ್ಕೂ ಆದರ್ಶ ಪತಿ!




No comments:
Post a Comment