![]() |
| ತಮಿಳುನಾಡಿನ ವೆಲಿಯಾಗರಮ್ ಸರ್ಕಾರಿ ಶಾಲೆಯ ಇಂಗ್ಲೀಷ್ ಶಿಕ್ಷಕ ಭಗವಾನ್ ಬೇರೆ ಶಾಲೆಗೆ ಹೋಗದಂತೆ ಬೈಕ್ ತಡೆಹಿಡಿದು ಕಣ್ಣೀರು ಹಾಕುತ್ತಿರುವ ವಿದ್ಯಾರ್ಥಿ |
ಮೂರ್ನಾಕು ದಿನಗಳ ಹಿಂದೆ ತುಂಬ ಸಂಚಲನ ಸೃಷ್ಟಿಸಿದ ಫೋಟೊ ಸುದ್ದಿ ಇದು. ತಮಿಳುನಾಡಿನ ವೆಲಿಯಾಗರಮ್ ಸರ್ಕಾರಿ ಶಾಲೆಯ ಇಂಗ್ಲೀಷ್ ಶಿಕ್ಷಕ ಜಿ. ಭಗವಾನ್ರನ್ನ ತಿರುತ್ತಣಿಯ ಮತ್ತೊಂದು ಶಾಲೆಗೆ ವರ್ಗಾವಣೆ ಮಾಡಿದ್ದನ್ನು ವಿರೋಧಿಸಿ ವಿದ್ಯಾರ್ಥಿಗಳು ಮುತ್ತಿಗೆ ಹಾಕಿ ಪ್ರತಿಭಟಿಸಿದ್ದೂ, ಆ ಹಿನ್ನೆಲೆಯಲ್ಲಿ ಅವರ ವರ್ಗಾವಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೂ ಈಗಾಗಲೇ ಮಾಧ್ಯಮ, ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡಿವೆ.
ಇದಾದ ನಂತರ ಮೊನ್ನೆ ಮತ್ತೊಂದು ಸುದ್ದಿ ಕರ್ನಾಟಕದಲ್ಲಿ ಸದ್ದು ಮಾಡ್ತು. ಉನ್ನತ ಶಿಕ್ಷಣ ಸಚಿವರಾದ ಜಿ.ಟಿ. ದೇವೇಗೌಡ, ಅಮೆರಿಕದ ವಿದ್ಯಾರ್ಥಿ ಸಂಘಟನೆಯ ಸದಸ್ಯರ ಜೊತೆ ಇಂಗ್ಲೀಷಿನಲ್ಲಿ ಮಾತನಾಡೋಕೆ ಪರದಾಡಿ, ಭಾಷಾಂತರಕಾರರ ಸಹಾಯ ಪಡೆದುಕೊಂಡ್ರು ಅಂತ ಎಲ್ಲ ಮಾಧ್ಯಮಗಳಲ್ಲಿ ಸುದ್ದಿಯಾಯ್ತು. ಬಿಜೆಪಿ ಬೆಂಬಲಿಗರು ಅದನ್ನೇ ಆಡಿಕೊಂಡು ನಕ್ಕಿದ್ದೂ ಆಯ್ತು.
ವಿದ್ಯಾರ್ಥಿಗಳಿಂದ ಅಚ್ಚುಮೆಚ್ಚಿನ ಶಿಕ್ಷಕ ಅನ್ನಿಸಿಕೊಂಡ ಭಗವಾನ್ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡುವಾಗ ತಡವರಿಸಿದ್ದಾರೆ. ಸರಳ ವಾಕ್ಯಗಳನ್ನೂ ವ್ಯಾಕರಣ ದೋಷವಿಲ್ಲದೆ ರಚಿಸಿ ಸಲೀಸಾಗಿ ಮಾತನಾಡೋಕೆ ಅವರಿಗೆ ಸಾಧ್ಯವಾಗಿಲ್ಲ! ಇದು ಸದ್ಯದ ನಮ್ಮ ಶಿಕ್ಷಣ ವ್ಯವಸ್ಥೆಯ ದುಸ್ಥಿತಿಗೆ ಕನ್ನಡಿ.
ಈ ಎರಡೂ ಘಟನೆಗಳಿಗೆ ಒಂದು ವಿಚಿತ್ರ ಸಂಬಂಧ ಇದೆ ಅಂದ್ರೆ ನಿಮಗೆ ಗೊಂದಲ ಆಗ್ಬಹುದು. ಈ ಘಟನೆಗಳಿಗಿರುವ ಕೊಂಡಿ ಮತ್ತೇನಲ್ಲ; ನಮ್ಮ ಶಿಕ್ಷಣ ವ್ಯವಸ್ಥೆಯ ಅವಸ್ಥೆಯದ್ದು! ಹೌದು, ವಿದ್ಯಾರ್ಥಿಗಳಿಂದ ಅಚ್ಚುಮೆಚ್ಚಿನ ಶಿಕ್ಷಕ ಅನ್ನಿಸಿಕೊಂಡ ಭಗವಾನ್ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡುವಾಗ ತಡವರಿಸಿದ್ದಾರೆ. ಸರಳ ವಾಕ್ಯಗಳನ್ನೂ ವ್ಯಾಕರಣ ದೋಷವಿಲ್ಲದೆ ರಚಿಸಿ ಸಲೀಸಾಗಿ ಮಾತನಾಡೋಕೆ ಅವರಿಗೆ ಸಾಧ್ಯವಾಗಿಲ್ಲ! ಇದು ಸದ್ಯದ ನಮ್ಮ ಶಿಕ್ಷಣ ವ್ಯವಸ್ಥೆಯ ದುಸ್ಥಿತಿಗೆ ಕನ್ನಡಿ. 10ನೇ ತರಗತಿಯವರೆಗೆ ಇರುವ ಈ ಸರ್ಕಾರಿ ಶಾಲೆಯಲ್ಲಿ ಇಂಗ್ಲೀಷ್ ಕಲಿಸುವ ಶಿಕ್ಷಕರಿಗೆ ನಿರರ್ಗಳವಾಗಿ ಇಂಗ್ಲೀಷ್ನಲ್ಲಿ ಮಾತನಾಡೋಕೆ ಸಾಧ್ಯವಾಗ್ತಿಲ್ಲ ಅಂದ್ರೆ ಇನ್ನು ಅವರು ವಿದ್ಯಾರ್ಥಿಗಳನ್ನ ಎಷ್ಟರ ಮಟ್ಟಿಗೆ ಇಂಗ್ಲೀಷ್ ಭಾಷೆಯಲ್ಲಿ ಪರಿಣಿತರಾಗಿ ಮಾಡಬಲ್ಲರು ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಭಗವಾನ್ಗೆ ಪುಸ್ತಕದ ಅನುಭವ ಇರಬಹುದು. ಅದು 8ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಕಲಿಸೋದಕ್ಕೆ, ಅವರನ್ನು ಪರೀಕ್ಷೆಯ ಚೌಕಟ್ಟಿಗೆ ಸಿದ್ಧಪಡಿಸೋದಕ್ಕೆ ಸಾಕಾಗಲೂಬಹುದು. ಆದರೆ ನಾಲ್ಕೈದು ವರ್ಷ ಇಂಗ್ಲೀಷ್ ಕಲಿತ ಬಳಿಕವೂ ಆ ವಿದ್ಯಾರ್ಥಿಗಳಿಗೆ ಇಂಗ್ಲೀಷಿನಲ್ಲಿ ಮಾತನಾಡುವ ಆತ್ಮವಿಶ್ವಾಸ ಬರೋದಿಲ್ಲ. ಸಚಿವ ಜಿ.ಟಿ. ದೇವೇಗೌಡ ಓದಿದ್ದು 8ನೇ ತರಗತಿವರೆಗೆ ಮಾತ್ರ. ಅವರಿಗೆ ಇಂಗ್ಲೀಷು ಬರದಿರುವುದು ಅಪರಾಧವೇನೂ ಅಲ್ಲ. ಆದರೆ ಇಂಗ್ಲೀಷ್ ಕಲಿಸುವ ಶಿಕ್ಷಕರಿಗೆ ಇಂಗ್ಲೀಷ್ನಲ್ಲಿ ಸಲೀಸು ಮಾತು ಸಾಧ್ಯವಿಲ್ಲ ಅಂತಾದರೆ ಅದು ನಿಜಕ್ಕೂ ವಿಪರ್ಯಾಸ.
ಮುಖ್ಯ ಶಿಕ್ಷಕ ಅರವಿಂದನ್ ಕೊಡುಗೆಯೂ ಇದೆ
ಇಷ್ಟು ಹೇಳಿದ ಮಾತ್ರಕ್ಕೆ ಭಗವಾನ್ ಕೆಟ್ಟ ಶಿಕ್ಷಕರು ಅಂತಲ್ಲ. ವಿದ್ಯಾರ್ಥಿಗಳ ಕಷ್ಟ-ಸುಖಗಳನ್ನ ಖುದ್ದಾಗಿ ಕೇಳಿಸಿಕೊಂಡು, ಹೆತ್ತವರೊಡನೆ ಮಾತಾಡಿ, ವಿದ್ಯಾರ್ಥಿಗಳನ್ನು ಹುರಿದುಂಬಿಸಿ ಅವರನ್ನು ಪಠ್ಯದಲ್ಲಿ ಆಸಕ್ತರನ್ನಾಗಿ ಮಾಡೋದು ಪ್ರಾಮಾಣಿಕ ಕೆಲಸವೇ. ಇಂಥ ಪ್ರಾಮಾಣಿಕ ಕೆಲಸದಲ್ಲಿ ವೆಲಿಯಾಗರಮ್ ಶಾಲೆಯ ಮುಖ್ಯ ಶಿಕ್ಷಕ ಎ. ಅರವಿಂದನ್ ಪಾತ್ರವೂ ಇದೆ. ವಿದ್ಯಾರ್ಥಿಗಳನ್ನು ಶ್ರೀಹರಿಕೋಟಾ ರಾಕೆಟ್ ಉಡ್ಡಯನ ಕೇಂದ್ರ, ಬಿರ್ಲಾ ಪ್ಲಾನೆಟೊರಿಯಂ ಇತ್ಯಾದಿ ಪ್ರದೇಶಗಳಿಗೆ ವೈಜ್ಞಾನಿಕ ಪ್ರವಾಸಕ್ಕೆ ಕರೆದೊಯ್ದಿದ್ದು, ನಟರನ್ನು ಕರೆಸಿ ಅವರಿಂದ ನಾಟಕ ತರಬೇತಿ ಕೊಡಿಸಿದ್ದು. ಬಾಲ್ಯವಿವಾಹದಂಥ ಪಿಡುಗುಗಳ ಬಗ್ಗೆ ವಿದ್ಯಾರ್ಥಿನಿಯರು ಮತ್ತು ಹೆತ್ತವರಿಗೆ ಅರಿವು ಮೂಡಿಸಿದ್ದು.. ಇತ್ಯಾದಿಗಳೆಲ್ಲ ಅರವಿಂದನ್‌ರ ವೃತ್ತಿಪರತೆಗೆ ನಿದರ್ಶನ. ಕಳೆದ ವರ್ಷ ಅವರು ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ 40 ದಿನಗಳ ವಿಶೇಷ ತರಬೇತಿಯನ್ನೂ ಕೊಡಿಸಿದ್ದರು. ಶಾಲೆ ಮುಗಿದ ಬಳಿಕ ರಾತ್ರಿ 8 ಗಂಟೆಯವರೆಗೆ ಈ ಕೋಚಿಂಗ್ ನಡೆಯುತ್ತಿತ್ತು.ಅರವಿಂದನ್, ಭಗವಾನ್ರಂಥ ಶಿಕ್ಷಕರು ಸರ್ಕಾರಿ ಶಾಲೆಗಳಿಗೆ ಬೇಕು ಅನ್ನೋದರಲ್ಲಿ ಎರಡು ಮಾತಿಲ್ಲ. ಅದೇ ವೇಳೆ ಶಿಕ್ಷಣದ ಗುಣಮಟ್ಟಕ್ಕೆ, ಶಿಕ್ಷಕರ ನೇಮಕಾತಿಗೆ ಒಂದು ಮಾನದಂಡವೂ ಅಗತ್ಯವಾಗಿ ಬೇಕಿದೆ.

No comments:
Post a Comment