ಹಿಂದೂಗಳ ಹಣಿಯಲು ಜಾತ್ಯತೀತರ ಹುನ್ನಾರ!


ಡಿಸೆಂಬರ್ 2, 2015, ಲಖ್ನೋ, ಉತ್ತರಪ್ರದೇಶ.

ಕಮಲೇಶ್ ತಿವಾರಿ ಎಂಬಾತನ ಮನೆಗೆ ಬಂದ ಪೊಲೀಸರು ಅನಾಮತ್ತಾಗಿ ಆತನನ್ನ ಕರೆದೊಯ್ದು, ಲಖ್ನೋ ಕೇಂದ್ರ ಕಾರಾಗೃಹದಲ್ಲಿ ಬಂಧಿಸಿಟ್ರು. ಅವನ ಮೇಲಿದ್ದಂಥ ಆರೋಪ; ಒಂದು ಕೋಮಿನ ಭಾವನೆ ಕೆರಳಿಸುವ ಮಾತುಗಳನ್ನ ಆಡಿದ್ದಾನೆ ಮತ್ತು ಪ್ರಸಾರ ಮಾಡಿದ್ದಾನೆ ಅನ್ನೋದು.

ಪ್ರವಾದಿ ಮೊಹಮ್ಮದರು ಮೊದಲ ಸಲಿಂಗಿ ಅಂದಿದ್ದ ಕಮಲೇಶ ತಿವಾರಿಯ ಮಾತು ಮುಸ್ಲಿಮರ ಭಾವನೆಗಳಿಗೆ ಧಕ್ಕೆ ತಂದಿದೆ. ಹಾಗಾಗಿ ಆತನನ್ನು ಬಂಧಿಸಿದ್ದೇವೆ ಅಂತ ಅಖಿಲೇಶ್ ಯಾದವ್ ಸರ್ಕಾರ ಸಮರ್ಥನೆ ಕೊಟ್ಟುಕೊಳ್ತು.

ಆದರೆ ಅದಕ್ಕೆ ಒಂದು ವಾರ ಮುಂಚೆ, ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್, ಆರೆಸೆಸ್‌ನವರೆಲ್ಲ ಸಲಿಂಗಿಗಳು. ಯಾಕಂದ್ರೆ ಅವರೆಲ್ಲ ಮದುವೆ ಆಗಲ್ಲ ಅಂತ ಬಹಿರಂಗ ಸಮಾರಂಭವೊಂದರಲ್ಲಿ ಕೇವಲವಾಗಿ ಮಾತನಾಡಿದ್ದ. ಕಮಲೇಶ್ ತಿವಾರಿಯ ಹೇಳಿಕೆ ಅದಕ್ಕೆ ಪ್ರತಿಕ್ರಿಯೆ ಆಗಿತ್ತೇ ಹೊರತು, ಸ್ವಯಂ ಹೇಳಿಕೆಯಾಗಿರಲಿಲ್ಲ.

ಒಂದು ಹೇಳಿಕೆಗೆ ಹೇರಲಾಯ್ತು ಉಗ್ರದಮನ ಕಾನೂನು!

ಅಸಲಿಗೆ ವಿಷಯ ಇದಲ್ಲ; ಡಿಸೆಂಬರ್ 9ರಂದು ಲಖ್ನೋ ಜಿಲ್ಲಾ ಮ್ಯಾಜಿಸ್ಟ್ರೇಟರು, ಕಮಲೇಶ್ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಜಾರಿ ಮಾಡ್ತಾರೆ! 2016ರ ಜನವರಿ 12ಕ್ಕೆ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟರು ಕಮಲೇಶ್ಗೆ ಜಾಮೀನು ನೀಡುತ್ತಾರೆ. ಆದರೆ ಜನವರಿ 29ರಂದು ತರಾತುರಿಯ ನಿರ್ಧಾರ ತೆಗೆದುಕೊಳ್ಳುವ ಅಖಿಲೇಶ್ ಸರ್ಕಾರ, ಕಮಲೇಶ್ನನ್ನು ಎನ್ಎಸ್ಎ ಅಡಿ ಒಂದು ವರ್ಷ ಬಂಧಿಸಿಡುವ ಆದೇಶ ಹೊರಡಿಸುತ್ತೆ! ಇನ್ನೂ ವಿಪರ್ಯಾಸ ಅಂದ್ರೆ ಕೇಂದ್ರದ ಬಿಜೆಪಿ ಸರ್ಕಾರದ ಗೃಹ ಸಚಿವಾಲಯ ಕೂಡ ಈ ಆದೇಶಕ್ಕೆ ಮೌನ ಸಮ್ಮತಿ ನೀಡಿರುತ್ತದೆ!

ಕಮಲೇಶ್‌ನ ಪತ್ನಿ –ಮೂರು ಮಕ್ಕಳ ತಾಯಿ- ಗಂಡನನ್ನು ಬಿಡಿಸಿಕೊಳ್ಳೋಕೆ ದಾರಿ ಕಾಣದೆ, ತನ್ನ ಹಳ್ಳಿ ತೊರೆದು ಲಖ್ನೋದಲ್ಲೇ ಅವರಿವರ ಆಶ್ರಯದಲ್ಲಿ ದಿನ ನೂಕುತ್ತಾಳೆ. ಏಳು ತಿಂಗಳ ಅಲೆದಾಟದ ಬಳಿಕ 2016ರ ಸೆಪ್ಟೆಂಬರ್ನಲ್ಲಿ ಕಮಲೇಶ್ ವಿರುದ್ಧದ ಎನ್ಎಸ್ಎ ಕಾಯ್ದೆಯನ್ನು ರದ್ದು ಮಾಡುವ ಅಲಹಾಬಾದ್ ಹೈಕೋರ್ಟ್, ಇಂಥ ಕ್ಷುಲ್ಲಕ ಪ್ರಕರಣಕ್ಕೆ ಕರಾಳ ಕಾನೂನು ಬಳಸಿದ ಉತ್ತರಪ್ರದೇಶ ಸರ್ಕಾರಕ್ಕೆ ಛೀಮಾರಿ ಹಾಕುತ್ತೆ.

ಉಗ್ರರಿಗೆ  ಗಲ್ಲು ಬೇಡ ಎನ್ನುವವರೂ ಸೊಲ್ಲೆತ್ತಲಿಲ್ಲ!

ಕಮಲೇಶ್‌
ಎನ್ಎಸ್ಎ ಎಂಬುದು ಭಯೋತ್ಪಾದಕ ಚಟುವಟಿಕೆ ಅಥವಾ ದೇಶದೊಳಗೆ ಆಂತರಿಕ ದಂಗೆಯ ಸಂಚು ನಡೆಸುವವರ ಮೇಲೆ ಹೂಡುವ ಕಾಯ್ದೆ. ಉತ್ತರಪ್ರದೇಶದ ಜಾತ್ಯಾತೀತ ಸರ್ಕಾರ ಮುಸ್ಲಿಮರ ಓಲೈಕೆಗಾಗಿ, ಕೇವಲ ಒಂದು ಹೇಳಿಕೆ ನೀಡಿದ್ದ ಕಮಲೇಶ್‌ನ ಮೇಲೆ ಈ ಕಾನೂನು ಜಾರಿ ಮಾಡುತ್ತದೆ!

ವಾಕ್ ಸ್ವಾತಂತ್ರ್ಯ ದಮನಿಸಲಾಗುತ್ತಿದೆ ಅಂತ ಹೇಳಿಕೊಂಡು ಮೆರವಣಿಗೆ ನಡೆಸುವ ಉದಾರವಾದಿ ಜನಗಳು ಇಂಥ ಪ್ರಕರಣಗಳಲ್ಲಿ ಸದ್ದು ಹೊರಬರದಂತೆ ಎಲ್ಲವನ್ನೂ ಬಂದ್ ಮಾಡಿಕೊಂಡಿರುತ್ತಾರೆ. ಹಾಗೂ, ಮೂಲ ಕಿಡಿ ಹಚ್ಚಿದ ಆಜಂ ಖಾನ್ ವಿರುದ್ಧ, ಮತ್ತು ಇದಕ್ಕಿಂತ ಘೋರವಾದ ಫತ್ವಾ ಹೊರಡಿಸುವವರ ವಿರುದ್ಧ ಜಾತ್ಯತೀತರ ಸರ್ಕಾರಗಳಲ್ಲಿ ಯಾವ ಕ್ರಮವೂ ಜಾರಿಯಾಗುವುದಿಲ್ಲ!

ಬರಬರುತ್ತಾ ಪರಿಸ್ಥಿತಿ ಹೇಗಾಗಿದೆ ಅಂದ್ರೆ ನಾನೊಬ್ಬ ಹಿಂದು ಅಂತ ಸಾರ್ವಜನಿಕವಾಗಿ ಯಾರಾದರೂ ಹೇಳಿಕೊಂಡ್ರೆ ಅವ್ನನ್ನ ಆದಿಕಾಲದವನಂತೆ ವೈಚಾರಿಕವಾಗಿ ಹಿಂದುಳಿದವನಂತೆ ನೋಡಲಾಗುತ್ತಿದೆ! ಸುಮ್ಮನೆ ಗಮನಿಸಿ ನೋಡಿ; ಲಿಬರಲ್‌ ಜನಗಳು ಒಂದೊಂದಾಗಿ ಹಿಂದುಗಳ ನಂಬಿಕೆಗಳಿಗೆ ಕೊಡಲಿ ಏಟು ನೀಡುತ್ತಾ ಹಿಂದುಗಳ ಮನಸ್ಸಿನಲ್ಲಿ ಕೀಳರಿಮೆ ಹುಟ್ಟುಹಾಕುತ್ತಿದ್ದಾರೆ.

ಯೋಚಿಸಿ; ಅಕಸ್ಮಾತ್ ಈ ಪ್ರಕರಣದಲ್ಲಿ ಕಮಲೇಶ್ ಬದಲು ಕಮ್ರಾನ್ ಅಕ್ಮಲ್ ಬಂಧಿಯಾಗಿದ್ದರೆ ಲಿಬರಲ್‌ ಜನಗಳ ಎಗರಾಟ ಹೇಗಿರುತ್ತಿತ್ತು? ಅಮಾಯಕ ಮುಸ್ಲಿಮನ ಮೇಲೆ ಕರಾಳ ಕಾನೂನು. ಆತ 10 ತಿಂಗಳು ಅನುಭವಿಸಿದ ಜೈಲು ವಾಸಕ್ಕೆ ಯಾರು ಹೊಣೆ? ಅಂತೆಲ್ಲ ಇವರು ಬೊಬ್ಬೆ ಹಾಕುತ್ತಿದ್ದರು..

ಉಗ್ರನನ್ನೂ ಗಲ್ಲಿಗೆ ಹಾಕಬಾರದು, ಗಲ್ಲು ಶಿಕ್ಷೆಯನ್ನೇ ರದ್ದು ಮಾಡಬೇಕು ಅಂತ ವಾದಿಸುವ ಪರಮ ದಯಾಳು ಗುಂಪೊಂದು ನಮ್ಮ ದೇಶದಲ್ಲಿದೆ. ಆದರೆ ಇವರ್ಯಾರಿಗೂ ಕಮಲೇಶ್‌ನಂಥವರ ಪರ ಸಣ್ಣ ದನಿಯನ್ನಾದರೂ ಎತ್ತಬೇಕು ಅನ್ನಿಸುವುದಿಲ್ಲ. ಏಕೆಂದರೆ ಆತ ಹಿಂದೂ ಮಹಾಸಭಾ ಎಂಬ ಸಂಘಟನೆಯ ಕಾರ್ಯಕಾರಿ ಆಧ್ಯಕ್ಷ, ಜಮಾತೆ ಉಲೇಮಾ ಅಥವಾ ಪಿಎಫ್ಐನ ಸದಸ್ಯನಾಗಿರಲಿಲ್ಲ! ಇದೊಂದು ಉದಾಹರಣೆ ಅಷ್ಟೇ.

ಹಿಂದೂಗಳ ಆಚರಣೆಗಳೆಲ್ಲ ಇವರಿಗೆ ಮೌಢ್ಯ

ಈಗೀಗ ಹಿಂದು ಎಂಬ ಐಡೆಂಟಿಟಿಯೇ ತಿರಸ್ಕಾರಕ್ಕೆ ಕಾರಣವಾಗುವಂಥ ಸನ್ನಿವೇಶ ಸೃಷ್ಟಿಯಾಗ್ತಿದೆ. ಹಿಂದುಗಳ ನಂಬಿಕೆಗಳೆಲ್ಲವನ್ನೂ ಅಪಹಾಸ್ಯ ಮಾಡುವ, ಪ್ರಶ್ನಿಸಿ ಕೋರ್ಟು ಮೆಟ್ಟಿಲೇರುವ 'ಜಾತ್ಯತೀತ ಉದಾರವಾದಿಗಳು' ಉಳಿದ ಧರ್ಮಗಳ ಡೊಂಕುಗಳ ಬಗ್ಗೆ ಮಾತ್ರ ಜಾಣಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ.

ಗಣೇಶನ ಹಬ್ಬ ಬಂದರೆ- ಅಯ್ಯೋ ಪರಿಸರಕ್ಕೆ ಹಾನಿ ಮಾಡ್ಬೇಡಿ 

ದೀಪಾವಳಿ ಬಂದರೆ- ಪಟಾಕಿಯಿಂದ ಮಾಲಿನ್ಯ. ಸದ್ದಿಲ್ಲದೆ ಮನೆಯೊಳಗೆ ಆಚರಿಸಿ! 

ಕರ್ವಾ ಚೌಥ್ ಆಚರಿಸಿದರೆ- ಅಯ್ಯೋ ಎಂಥಾ ದಾಸ್ಯ ಇದು, ಗಂಡನಿಗೋಸ್ಕರ ಹೆಂಡತಿ ಉಪವಾಸ ಇರೋದಾ? 

ಕೋಳಿ ಅಂಕ ಆಡಿದರೆ- ಅಯ್ಯಯ್ಯೋ, ಪ್ರಾಣಿಹಿಂಸೆ ಮಾಡ್ಬಾರ್ದು.. 

ಹೀಗೆ ಎಲ್ಲದಕ್ಕೂ ಕೋರ್ಟಿನಲ್ಲಿ ಕೇಸುಗಳನ್ನ ಹೆಟ್ಟಿ ಅಡ್ಡಗಾಲು ಹಾಕುವ ಸಾಲು ಸಾಲು ಲಿಬರಲ್ ವಾದಗಳ ಉದಾಹರಣೆಗಳು ಸಿಗುತ್ತವೆ. ಆದರೆ ಇದೇ ಲಿಬರಲ್ಗಳ ಇನ್ನೊಂದು ಮುಖ ನೋಡಿ, ಕೋಳಿ ಅಂಕ ಕ್ರೌರ್ಯ ಅನ್ನಿಸುವ ಇವರಿಗೆ ಬಕ್ರೀದ್ ದಿನ ನಡೆಯುವ ಆಡು-ಕುರಿಗಳ ಮಾರಣಹೋಮ ಕ್ರೌರ್ಯ ಅನ್ನಿಸುವುದಿಲ್ಲ!

ಪಟಾಕಿಯಿಂದ ಮಾಲಿನ್ಯ ಅನ್ನುವ ಇವರಿಗೆ ಹೊಸ ವರ್ಷಾಚರಣೆ ಸಂದರ್ಭ ಕುಡಿದು, ಕುಣಿದು ಕುಪ್ಪಳಿಸುವಾಗ ಸಿಡಿಸುವ ಸುಡುಮದ್ದು ಆರೋಗ್ಯಕ್ಕೆ ಪೂರಕವಾಗಿರುತ್ತೆ!

ಗಂಡ-ಹೆಂಡಿರ ವಾತ್ಸಲ್ಯವನ್ನು ದಾಸ್ಯ ಎನ್ನುವ ಇವರು ಮುಸ್ಲಿಂ ಹೆಂಗಸರ ಬುರ್ಖಾದೊಳಗಿನ ಮತ್ತು ಸಮಾಜದೊಳಗಿನ ಬಂಧನದ ಬದುಕಿನ ಬಗ್ಗೆ ಕುರುಡರಾಗಿರುತ್ತಾರೆ!

ಸಲಿಂಗ ಕಾಮ ಸಹಜವಾದ್ದು. ಅದರ ವಿರುದ್ಧ ಇರೋ ಕಾನೂನನ್ನು ರದ್ದು ಮಾಡಬೇಕು ಅಂತ ಎಲ್‌ಜಿಬಿಟಿ ಪರೇಡು ಎಂಬ ದೊಂಬರಾಟಗಳನ್ನು ಮಾಡುವ ಇದೇ ಮಂದಿ ಆರ್‌ಎಸ್‌ಎಸ್‌ನವರು ಸಲಿಂಗಿಗಳು ಅಂತ ಲೇವಡಿ ಮಾಡಿ ನಕ್ಕು ತಮ್ಮ ಉದಾರ ಬುದ್ಧಿ ಪ್ರದರ್ಶಿಸುತ್ತಾರೆ..!

ಇಂಥ ಗೋಸುಂಬೆಗಳ ಬಗ್ಗೆ ಬರೆಯೋದಕ್ಕೆ ಬಹಳಷ್ಟಿದೆ. ಇದು ಕೇವಲ ಪೀಠಿಕೆ ಮಾತ್ರ!

❍ ಭೀಮಸೇನ 
ವೃತ್ತಿಯಿಂದ ಪತ್ರಕರ್ತ. ಹೆಮ್ಮೆಯ ಭಕ್ತ. ಬಲದಲ್ಲಿ ಬಲವಿದೆ ಎಂಬ ಸಿದ್ಧಾಂತಿ. ಓಟು ಬ್ಯಾಂಕಿನ ರಾಜಕಾರಣ ಮತ್ತು ಹಿಂದುತ್ವದ ತಲ್ಲಣಗಳ ಬಗ್ಗೆ  ಬಲ ವಾದದಲ್ಲಿ ಬರೆಯಲಿದ್ದಾರೆ.

No comments:

Post a Comment