ಕೊಟ್ಟಿದ್ದು ಮುತ್ತು, ಏರಿದ್ದು ಮತ್ತು!


ಇದು ಮುತ್ತಿನಿಂದ ಮತ್ತೇರಿದ ಗಮ್ಮತ್ತಿನ ಪ್ರಸಂಗ!

ಇಂಗ್ಲೀಷು ಸಿನಿಮಾಗಳಲ್ಲಿ (ಈಗೀಗ ಬಾಲಿವುಡ್ ಸಿನಿಮಾಗಳಲ್ಲೂ) ಪ್ರೇಮಿಗಳು ತುಟಿಗೆ ತುಟಿ ಇಟ್ಟು ಚುಂಬಿಸುವುದನ್ನು ನೋಡಿ ರೋಮಾಂಚನಗೊಂಡಿರ್ತೀರಿ. ಅಂಥ ಚುಂಬನದಿಂದ ಒಲಿಂಪಿಕ್ಸ್ ಸ್ವರ್ಣ ವಿಜೇತ ಅಮೆರಿಕನ್ ಅಥ್ಲೀಟ್ ಗಿಲ್ ರಾಬರ್ಟ್ಸ್ ಉದ್ದೀಪನ ಸೇವನೆ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿದ್ದೂ ಮತ್ತು ಅದೇ ಮುತ್ತಿನ ಪ್ರಸಂಗವನ್ನು ಸಾಕ್ಷ್ಯವಾಗಿ ನೀಡಿ ಕೇಸಿನಿಂದ ಖುಲಾಸೆಯಾಗಿರುವುದೂ ತಮಾಷೆಯಾಗಿದೆ.

ಉದ್ದೀಪನ ಔಷಧ ತೆಗೆದುಕೊಂಡರೆ ಕ್ರೀಡಾಪಟುಗಳನ್ನು ಅಮಾನತು ಮಾಡಲಾಗುತ್ತೆ. ಆದರೆ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ ಅಮೆರಿಕದ ಗಿಲ್‌ ರಾಬರ್ಟ್ಸ್‌, ಪ್ರೇಯಸಿ ತಗೊಂಡ ಉದ್ದೀಪನ ವಸ್ತುವಿನಿಂದ ನಿಷೇಧಕ್ಕೆ ಒಳಗಾಗಿದ್ದ. ಅದು ಅವನ ದೇಹ ಸೇರಿದ್ದು ಚುಂಬನದ ಮೂಲಕ!

ಅಥ್ಲೀಟ್ ಗಿಲ್‌ ರಾಬರ್ಟ್ಸ್‌
2016ರ ರಿಯೋ ಒಲಿಂಪಿಕ್ಸ್‌ನ ಪುರುಷರ 4X400 ಮೀಟರ್ ರಿಲೇ ಓಟದಲ್ಲಿ ಗಿಲ್ ರಾಬರ್ಟ್ಸ್ ಚಿನ್ನ ಗೆದ್ದಿದ್ದ. 2017ರ ಮೇ ತಿಂಗಳಿನಲ್ಲಿ ಉದ್ದೀಪನ ಪರೀಕ್ಷೆ ನಡೆಸಿದಾಗ probenecid ಅನ್ನೋ ನಿಷೇಧಿತ ಪದಾರ್ಥದ ಅಂಶಗಳು ಪತ್ತೆಯಾಗಿದ್ವು. ಅವನು ಉದ್ದೀಪನ ಮದ್ದು ಸೇವಿಸಿದ್ದು ಸಾಬೀತಾದ ಹಿನ್ನಲೆಯಲ್ಲಿ 4 ವರ್ಷಗಳ ಕಾಲ ಅವನನ್ನು ಕ್ರೀಡೆಯಿಂದ ಅಮಾನತು ಮಾಡಲಾಗಿತ್ತು. ಆದ್ರೆ ಈಗ ಅಲ್ಲಿನ ಕ್ರೀಡಾ ಪ್ರಾಧಿಕಾರ ಅಮಾನತನ್ನ ವಾಪಸ್ ತಗೊಂಡಿದೆ. ಯಾಕಂದ್ರೆ ಅಸಲಿಗೆ ಉದ್ದೀಪನ ಔಷಧ ತಗೊಂಡಿದ್ದು ರಾಬರ್ಟ್ಸ್‌ನ ಪ್ರೇಯಸಿ ಮತ್ತು, ಆ ಉದ್ದೀಪನ ವಸ್ತು ರಾಬರ್ಟ್ಸ್ ದೇಹಕ್ಕೆ ವರ್ಗಾವಣೆಯಾಗಿದ್ದು ಚುಂಬನದ ಮೂಲಕ!

ಭಾರತದಲ್ಲಿ ತಗೊಂಡಿದ್ದ ಔಷಧ!

ಕೆಮ್ಮು, ನೆಗಡಿ, ಸಣ್ಣ ಜ್ವರ ಇಂಥವಕ್ಕೆ ತೆಗೆದುಕೊಳ್ಳುವ ಔಷಧಗಳಲ್ಲಿ ಅಲ್ಪಪ್ರಮಾಣದ ಉದ್ದೀಪನ ವಸ್ತುಗಳಿರ್ತವೆ. ರಾಬರ್ಟ್ಸ್‌ ಗೆಳತಿ ಅಲೆಕ್ಸ್ ಸಲಜಾರ್ ತನ್ನ ಕುಟುಂಬ ಸಮೇತ ಭಾರತಕ್ಕೆ ಬಂದಾಗ ನೆಗಡಿ ಆಗಿತ್ತಂತೆ. ಆಗ ಸ್ಥಳೀಯ ವೈದ್ಯರ ಸಲಹೆ ಮೇರೆಗೆ ತಗೊಂಡ ಔಷಧದದಲ್ಲಿ ಈ ಪ್ರೊಬೆನೆಸಿಡ್ ಅಂಶ ಇತ್ತಂತೆ. ಆಕೆ ಅಮೆರಿಕಕ್ಕೆ ವಾಪಸ್ಸಾಗಿ ಔಷಧ ಮುಂದುವರಿಸಿದ್ದ ಸಂದರ್ಭವೇ ಗೆಳತಿ ಭೇಟಿಯಾಗಲು ಹೋಗಿದ್ದ ರಾಬರ್ಟ್ಸ್.

ಮುಂದಿನದು ಇಂಗ್ಲೀಷ್ ಪಿಕ್ಚರ್ ಸೀನ್! ನಿಮ್ಮ ನಿಮ್ಮ  ಕಲ್ಪನೆಗೆ ಬಿಟ್ಟಿದ್ದು.

“ಪ್ರೇಮದ ಉನ್ಮಾದದಲ್ಲಿ ತುಟಿಗೆ ತುಟಿ, ನಾಲಿಗೆಗೆ ನಾಲಿಗೆ ಸೋಕಿರಬಹುದು. ಆದ್ರೆ ಆಕೆ ಅನಾರೋಗ್ಯಕ್ಕೆ ಔಷಧ ತಗೊಳ್ತಿದ್ಲು ಅಂತ ದೇವ್ರಾಣೆ ಗೊತ್ತಿರರ್ಲಿಲ್ಲ, ಗೊತ್ತಿದ್ರೆ ಖಂಡಿತಾ ಪ್ರಣಯಕ್ಕೆ ಮುಂದಾಗ್ತಿರಲಿಲ್ಲ” ಅಂತ ಕ್ರೀಡಾ ಪ್ರಾಧಿಕಾರದ ಮುಂದೆ ಅಹವಾಲು ಹೇಳಿಕೊಂಡಿದ್ದಾನೆ ರಾಬರ್ಟ್ಸ್. ಅವನ ಪ್ರೇಯಸಿ ಔಷಧ ತಗೊಂಡಿದ್ದೂ ಮತ್ತು ಆ ಔಷಧದಲ್ಲಿ ಪ್ರೊಬೆನೆಸಿಡ್ ಇದ್ದಿದ್ದೂ ಸಾಬೀತಾದ ಹಿನ್ನಲೆಯಲ್ಲಿ ಕ್ರೀಡಾ ಪ್ರಾಧಿಕಾರ ರಾಬರ್ಟ್ಸ್ ಮೇಲಿನ ನಿಷೇಧ ಹಿಂಪಡೆದುಕೊಂಡಿದೆ.

ಮಾತ್ರೆ ತಗೊಳ್ತಿದ್ದ ರೀತಿಯೂ ವಿಚಿತ್ರ!

ಅಂದ ಹಾಗೆ ಪ್ರೇಯಸಿ ಸಲಜಾರ್‌ಗೆ ಟ್ಯಾಬ್ಲೆಟ್ ನುಂಗೋದಂದ್ರೆ ಆಗ್ತಿರಲಿಲ್ಲವಂತೆ. ಆಕೆ ಕ್ಯಾಪ್ಯೂಲ್ ತೆರೆದು ಅದರಲ್ಲಿನ ಪುಡಿಯನ್ನು ನಾಲಗೆ ಮೇಲೆ ಹಾಕೊಂಡು ಚಪ್ಪರಿಸಿ ತಿಂತಿದ್ಳಂತೆ! ಹಂಗಾಗಿ ಮುತ್ತಿನ ಮತ್ತು ಪವರ್‌ಫುಲ್‌ ಆಗಿಯೇ ವರ್ಗಾವಣೆಯಾಗಿದೆ! ಒಂಥರಾ ವಿಚಿತ್ರ ಪಾರ್ಟೀನೇ ಬಿಡಿ.

ಅದೇನೇ ಇರ್ಲಿ, ಕ್ರೀಡಾಕೂಟಗಳಿಗೆ ತೆರಳುವಾಗ ತಮ್ಮ ಪ್ರೇಯಸಿಯರ ಜೊತೆ ಹೋಗುವ ಕ್ರೀಡಾಪಟುಗಳು ಆಟ ಮುಗಿಯುವವರೆಗಾದರೂ ತಮ್ಮ ಖಾಸಗಿ ‘ಆಟ’ಕ್ಕೆ ಬ್ರೇಕ್ ಹಾಕೋದು ಒಳ್ಳೇದು. ಇಲ್ಲದಿದ್ರೆ ಇಂಥ ಕೇಸಲ್ಲಿ ಸಿಕ್ಕಿಹಾಕೊಂಡು ಒದ್ದಾಡುವ ಸಂದರ್ಭ ಸೃಷ್ಟಿಯಾದರೂ ಆಗ್ಬಹುದು.

No comments:

Post a Comment