ಒಮ್ಮೆ ಚುನಾಯಿತರಾದ ಮೇಲೆ ಗೊರಕೆ ಹೊಡೆದು ಮಲಗುವ ಮುಕ್ಕಾಲು ಪಾಲು ಜನಪ್ರತಿನಿಧಿಗಳು ಹಾಗೂ ದುಡ್ಡು ಗೆಬರುವುದನ್ನೇ ಮುಖ್ಯ ಕೆಲಸವಾಗಿಸಿಕೊಂಡಿರುವ ಅಷ್ಟೇ ಪ್ರಮಾಣದ ಅಧಿಕಾರಿಗಳೂ ಇರುವ ನಮ್ಮ ದೇಶದ ಮಹಾನ್ ಆಡಳಿತ ವ್ಯವಸ್ಥೆಯಲ್ಲಿ ಕರುಣ ಕತೆಗಳಿಗೇನೂ ಕೊರತೆಯಿಲ್ಲ. ಇದೂ ಅಂಥದ್ದೇ ಒಂದು ಘಟನೆ.
ಜಾರ್ಖಂಡ್‌ನ ಸಂಗ್ರಹೆಬಿಂದ್ ಟೋಲಾ ಎಂಬ ಹಳ್ಳಿಯಲ್ಲಿ ಒಂದು ಅಜ್ಜಿ ಇತ್ತೀಚೆಗೆ ತೀರಿಕೊಂಡಿತು. ಕಾರಣ; ಆ ಮುದಿ ದೇಹಕ್ಕೆ ವಿಪರೀತದ ಚಳಿ ತಾಳಿಕೊಳ್ಳೋಕೆ ಸಾಧ್ಯವಾಗ್ಲಿಲ್ಲ. ಮಳೆ, ಚಳಿ, ಬಿಸಿಲು ಇತ್ಯಾದಿಗಳಿಂದ ಮನುಷ್ಯರು ಸಾಯೋದು ಸಹಜ, ಇದಕ್ಕೆಲ್ಲ ಅಧಿಕಾರವರ್ಗ ಏನು ಮಾಡೋಕೆ ಆಗುತ್ತೆ ಅಂತ ನಿಮಗನಿಸಿರಬಹುದು. ಅಧಿಕಾರಿಗಳು ಮಾಡಬೇಕಿದ್ದನ್ನು ಮಾಡಿದ್ದರೆ ಆ ಅಜ್ಜಿ ಇನ್ನೊಂದಿಷ್ಟು ವರ್ಷ ಬದುಕುತ್ತಿದ್ದಳು!
ನಮ್ಮ ವ್ಯವಸ್ಥೆ ಎಷ್ಟು ಜಡ್ಡುಗಟ್ಟಿದೆ ಎಂಬುದಕ್ಕೆ ಇರುವ ನಿದರ್ಶನಗಳ ಸಾಲಿಗೆ ಇದು ಇನ್ನೊಂದು ಸೇರ್ಪಡೆ. ಚಳಿ ತಾಳಲಾರದೆ ಸರ್ಕಾರ ಕೊಡುವ ಕಂಬಳಿ ಹೊದ್ದು ಮಲಗುವ ಆಸೆಯಿಂದ 15 ದಿನ ಕಚೇರಿಗೆ ಅಲೆದಾಡಿದ ಜಾರ್ಖಂಡ್‌ನ ಅಜ್ಜಿಯೊಬ್ಬಳು ಕಡೆಗೂ ಕಂಬಳಿ ಇಲ್ಲದೆ ಪರಲೋಕ ಸೇರಿದ್ದಾಳೆ..
ಬಿಪಿಎಲ್ ಕಾರ್ಡಿನವರಿಗೆ ಸ್ಥಳೀಯ ಆಡಳಿತ ಕಂಬಳಿ ಕೊಡುವ ಕಾರ್ಯಕ್ರಮ ಜಾರಿ ಮಾಡಿತ್ತು. ಆ ಕಂಬಳಿ ಪಡೆಯೋದಕ್ಕೆ ಅಂತ ಶ್ಯಾಮದೇಯೀ ಕುಂವರ್ ಅನ್ನೋ ಈ ಅಜ್ಜಿ ಉಪವಿಭಾಗೀಯ ಕಚೇರಿಗೆ ನಿತ್ಯ ಪ್ರದಕ್ಷಿಣ ಹಾಕಿದ್ದಾಳೆ. ಒಂದಿನ ಆಧಾರ್ ಕಾರ್ಡು, ಮತ್ತೊಂದಿನ ರೇಷನ್ ಕಾರ್ಡು, ಮಗದೊಂದು ದಿನ ಐಡಿ ಕಾರ್ಡು, ಅದರಾಚೆಯ ದಿನ ಆಫೀಸರ್ ಇಲ್ಲ ಅಂತೆಲ್ಲ ಅಧಿಕಾರಿಗಳು ದಿನದೂಡಿದ್ದಾರೆ. ನಿರಂತರ 15 ದಿನ ಕಚೇರಿಗೆ ಅಲೆದಾಡಿದ್ದಾಳೆ ಈ ಅಜ್ಜಿ.
ಅವತ್ತೂ ಮನೆಯಲ್ಲಿ ಹೇಳಿ ಬಂದಿದ್ದಳಂತೆ; ಇವತ್ತು ಕಂಬಳಿ ತಗೊಂಡೇ ವಾಪಸ್ ಬರ್ತೀನಿ ಅಂತ. ಬೆಳಗ್ಗೆ ಹತ್ತೂವರೆಗೆ ಉಪವಿಭಾಗೀಯ ಕಚೇರಿ ಮುಂದಿನ ಕಟ್ಟೆಯ ಮೇಲೆ ಕುಳಿತ ಹತ್ರತ್ರ 70 ವರ್ಷದ ಅಜ್ಜಿಗೆ ಥರಗುಟ್ಟುವ ಚಳಿ ತಡೆದುಕೊಳ್ಳೋಕೆ ಆಗಿಲ್ಲ. ಮಧ್ಯಾಹ್ನ 2 ಗಂಟೆಯವರೆಗೂ ಗಡಗಡ ನಡುಗುತ್ತ, ಅಧಿಕಾರಿಗಳ ಬರವನ್ನೇ ಕಾದುಕೂತಿದ್ದ ಅಜ್ಜಿ, ಕುಡೀಲಿಕ್ಕೆ ಒಂದು ಲೋಟ ನೀರು ಕೊಡಿ ಅಂತ ಅಲ್ಲಿದ್ದವನೊಬ್ಬನನ್ನು ಕೇಳಿದ್ದಳಂತೆ.
ಆತ ಕೊಟ್ಟ ನೀರು ಕೈಗೆತ್ತಿಕೊಳ್ಳುವ ಮುನ್ನವೇ ಅಜ್ಜಿ ಕುಸಿದು ಬಿದ್ದಿದ್ದಾಳೆ, ಪ್ರಾಣ ಹಾರಿಹೋಗಿದೆ.
ಹತ್ರತ್ರ 25 ಲಕ್ಷ ಕೋಟಿ ರೂಪಾಯಿ ಮೊತ್ತದ ಬಜೆಟ್ ಮಂಡಿಸುವ, ಅದರಲ್ಲೊಂದಿಷ್ಟು ಲಕ್ಷ ಕೋಟಿಗಳನ್ನು ಬಡವರ ಉದ್ಧಾರಕ್ಕೆ ಅಂತ ತೆಗೆದಿಡುವ ನಮ್ಮ ದೇಶದಲ್ಲಿ ಅಜ್ಜಿಯೊಬ್ಬಳು ಒಂದು ಕಂಬಳಿಗಾಗಿ ಹಾತೊರೆದು ಸತ್ತುಹೋಗುತ್ತಾಳೆ. ನಮಗೇನೂ ಅನ್ನಿಸುವುದಿಲ್ಲ; ಏಕೆಂದರೆ ನಾವೂ ‘ಸತ್ತು’ ಹೋಗಿದ್ದೇವೆ!

No comments:
Post a Comment