![]() |
| ಈ ವಿದ್ಯಾರ್ಥಿಗಳ ಮಾತಷ್ಟೇ ಅಲ್ಲ, ಕೃತಿಯೂ ವಿಶಿಷ್ಟ |
"ವಸಿ ಮಡ್ಗಿ ನಾಕ್ ಯೋಳ್ತೀನಿ, ಸ್ಯಾನೆ ತೀಟೆ ಕಣ್ ಹೇಳಿ, ಅಲ್ಲ ಅನ್ನ ಉಣ್ಣೊ ಒತ್ನಲ್ಲಿ ಇಪಾಟಿ ಕಲ್ ತೆಗತಾನಲ್ಲ ಒಡ್ಯಕೆ, ಅವ್ರಪ್ಪಂಗ್ ಗೊತ್ತಾದ್ರೆ ಕೂಟ ಸೇರ್ಸ್ದೆ ಬಿಟ್ಟಾರ, ಅವ್ರವ್ವಂಗ್ ಬಾಯ್ ಕೊಡಕಾದ್ದಾ ನೀವೇ ಯೋಳಿ, ಇಸ್ಕೂಲಿಗ್ ಏನಕ್ ಕಳ್ಸೋದ್ ಯೋಳಿ, ಇದ್ಯೆ ಕಲ್ಯೋಕ್ ತಾನೆ, ಅದ್ ಬುಟ್ಬುಟ್ಟು ಈ ಚೆಲ್ ಬುದ್ಧಿ ತೋರ್ಸದ್ರೆ ಏನ್ ಉದ್ಧಾರಾದಾನು."
ಸೋಮವಾರ ಪ್ರಾರ್ಥನೆ ಶುರು ಆಗಿದೆ ಅಂತಾನೂ ನೋಡ್ದೆ ಶಿವು ಅಜ್ಜಿ, ನರಪೇತಲನನ್ನ ದರದರ ಎಳ್ಕೊಂಡ್ ಬಂದ್ರು. "ಇರಿ ಅಜ್ಜಿ, ಪ್ರೇಯರ್ ಮುಗೀಲಿ", ಅಂತ ಹೇಳಿದ್ದಕ್ಕೆ ಗೊಣಗೊಣಾಂತ್ಲೇ ಹೋಗಿ ಆಫೀಸ್ ರೂಮ್ ಎದ್ರು ಜಗಲಿ ಮೇಲೇ ಕೂತ್ರು.
ಲೈನಲ್ಲಿ ನಿಂತಿದ್ದ ಶಿವು ಉರುಫ್ ಶಿವಪ್ರಸಾದ್ ಕಳ್ಳನಗೆ ಜೊತೆಗೇ ಕಣ್ಣು ಕೆಳ್ಗ್ ಹಾಕ್ದ. ಪ್ರಾರ್ಥನೆ ಮುಗೀತಿದ್ದಂಗೆ ಅಜ್ಜಿ ಮತ್ತೆ ಶುರು ಹಚ್ಕೊಂಡ್ರು. ವಿಷ್ಯ ಏನಪ್ಪಾ ಅಂದ್ರೆ, ಭಾನುವಾರ ಮಧ್ಯಾಹ್ನ ಶಿವು ಪಕ್ಕದ್ಮನೇಲೆ ಇರೋ ಪ್ರತಾಪಂಗೆ, ಆಟ ಆಡೋವಾಗ ಜಗಳ ಶುರು ಆಗಿ ಕಲ್ ಹೊಡ್ಯೋಕ್ ಹೋದಾಗ, ನೋಡಿದ್ ಅಜ್ಜಿ ತಡ್ದು, ಇವತ್ತು ಮೇಷ್ಟ್ರು, ಮಿಸ್‌ಗಳು ಬುದ್ಧಿ ಹೇಳ್ಲಿ ಅಂತ ಬಂದಿದ್ರು.
ಹೆಡ್ಮಾಸ್ಟ್ರು "ಸರಿ ಮತ್ತೆ ಭಾನ್ವಾರನೂ ಬಂದು ಕಾಯ್ಕಳಿ ಅಂತೀರಿ. ನಿಮ್ಗೆ ಒಂದ್ ಗಂಡು, ನಮ್ಗೆ ದಿನಾ ಇನ್ನೂರ್ನ ಕಾಯ್ಕಬೇಕಲ್ಲ, ನಾವೂ ಬುದ್ಧಿ ಹೇಳ್ತೀವಿ, ಹಂಗೆ ನೀವೂ ವಸಿ ಭಯ ಮಡ್ಗಿ", ಅಂತ ಅವ್ರ ಸ್ಟೈಲ್ ನಲ್ಲೇ ಸಮಾಧಾನ ಮಾಡಿ ಕಳ್ಸಿದ್ರು.
ಹೊಡದ್ರೂ ಕಷ್ಟ, ಹೊಡೀದಿದ್ರೂ ಕಷ್ಟ!
"ನೋಡಿ, ಹೊಡದ್ರೆ ನಮ್ ಕೂಸ್ಗ್ಯಾಕ್ ಹೊಡದ್ರಿ ಅಂತಾರೆ, ಇಲ್ಲಾಂದ್ರೆ ನೀವು ಹೊಡ್ಯಲ್ಲ ಅದ್ಕೆ ಚೆಲ್ಲು ಅಂತಾರೆ. ಏನ್ ಮಾಡೋಣ ಹೇಳಿ", ಅಂತಿದ್ದಂಗೆ ನಾನ್ ಶುರು ಮಾಡ್ದೆ. "ಹೂಂ ಸರ್, ಶನಿವಾರ ವಿಷ್ಣುವರ್ಧನ್ ಬಳೆ ಅಂತ ಕೈಗೆ ಕಬ್ಣದ್ ಬಳೆ ಹಾಕೊಂಡಿದ್ದ. ಅದ್ನ ನೆಲಕ್ ಉಜ್ಬಿಟ್ಟು ಬೇರೆಯವ್ರ ಕೈಗೆ ಇಡ್ತಿದ್ದ, ಎರಡೇಟ್ ಕೊಟ್ಟಿದೀನಿ, ಬಳೆ ನನ್ಹತ್ರಾನೇ ಇದೆ, ಭಾಳ ತೀಟೆ ಸರ್" ಅಂದೆ.ದಕ್ಷಿಣಕನ್ನಡದ ವಾತಾವರಣದಲ್ಲಿ ಹುಟ್ಟಿ ಬೆಳೆದ ನನಗೆ ನಂಜನಗೂಡಿನ ಭಾಷೆ ಅಪರಿಚಿತವಾಗಬಹುದು ಎಂಬ ಕಲ್ಪನೆಯೇ ಇರಲಿಲ್ಲ. ಕೆಲಸಕ್ಕೆ ಸೇರಿದ ಹೊಸತರಲ್ಲಿ ಮಕ್ಕಳು, ಅವರ ಹೆತ್ತವರು ಹೇಳಿದ್ದು ಏನಂತ ಅರ್ಥವಾಗದೆ ಪ್ರಶ್ನಾರ್ಥಕ ಚಿಹ್ನೆಯಾಗುತ್ತಿದ್ದೆ. ಈಗ ಅವೆಲ್ಲವನ್ನು ಮನಸ್ಸಿನಲ್ಲಿ ರಿವೈಂಡ್ ಮಾಡಿಕೊಂಡ್ರೆ ಮುದ ಎನಿಸುತ್ತೆ..
ಕ್ಲಾಸಿಗೆ ಬಂದಾಗ ನನ್ನ ಮಾತಿಗೆ ನನಗೇ ನಗು. ಇಲ್ಲಿಗೆ ಬಂದ ಹೊಸತರಲ್ಲಿ "ತೀಟೆ" ಅನ್ನುವ ಪದ ಬಳಸಿದ್ದಕ್ಕಾಗಿ ಒಬ್ರು ಸರ್ ಜೊತೆ ಮಹಾಯುದ್ಧನೇ ಮಾಡ್ಬಿಟ್ಟಿದ್ದೆ. ಇಲ್ಲಿ ತುಂಟ ಅನ್ನೋದಕ್ಕೆ ಪರ್ಯಾಯ ಪದ ಅದು. ಹಾಗೇ ಹಳೆಯದು ನೆನಪಾಯ್ತು. ವಿವಿಧ ರೀತಿಯ ಮನೆಗಳ ಬಗ್ಗೆ ಪಾಠ ಶುರು ಮಾಡೋಕೆ ಅಂತ, "ಮಕ್ಳೇ ಸ್ಕೂಲ್ ಮುಗದ್ಮೇಲೆ ನೀವ್ ಎಲ್ಲಿಗ್ ಹೋಗ್ತೀರಾ" ಅಂತ ಕೇಳ್ದಾಗ "ಹಟ್ಟಿಗೆ.." ಅನ್ನೋ ಒಕ್ಕೊರಲ ಉತ್ರ. ಒಮ್ಮೆಲೆ 30 ದನ, ಕುರಿಗಳು ಮ್ಯಾ.. ಅಂದಂಗಾಗಿತ್ತು ನನ್ಗೆ.
ಗಾಬರಿ ಬೀಳಿಸಿದ್ದ 'ಕೊತ್ತಿ ಮರಿ'
ಒಮ್ಮೆ ಪಿನ್ ಡ್ರಾಪ್ ಸೈಲೆನ್ಸ್ ಕ್ಲಾಸಲ್ಲಿ ಗಣಿತ ಪಾಠ ಮಾಡ್ತಿದ್ದಾಗ ಫಸ್ಟ್ ಬೆಂಚ್ ಹುಡ್ಗಿ "ಮಿಸ್ ಕೊತ್ತಿಮರಿ ಬಂತು", ಅಂತ ಉದ್ಗರಿಸಿದಾಗ, ಎಲ್ಲಿ ಹೆಂಚು ಎಳ್ದು ನನ್ನ, ಮಕ್ಕಳ ತಲೆ ಮೇಲೆ ಹಾಕ್ತಾವೋ ಈ ಮಂಗಗಳು ಅಂತ ನಾನು ಗಾಬರೀಲಿ ಮೇಲ್ ನೋಡ್ತಿದ್ರೆ, ಮಕ್ಳೆಲ್ಲಾ ಬಾಗಿಲ ಬಳಿ ಮೈ ತಿಕ್ತಾ ನಿಂತಿದ್ದ ಬೆಕ್ಕನ್ನ ನೋಡ್ತಿದ್ರು. ಆಗ್ಲೇ ಗೊತ್ತಾಗಿದ್ದು, ಇಲ್ಲಿ ಕೊತ್ತಿ ಅಂದ್ರೆ ಬೆಕ್ಕು. ಕಪಿ ಅಂದ್ರೆ ಮಂಗ ಅಂತ.ಅಮ್ಮ ಸತ್ತೋಯ್ತು, ಮಡ್ಕ ತೆಗೀಬೇಕು!
ಇನ್ನೊಮ್ಮೆ, ಮಂಗಳಮ್ಮ ಅನ್ನೋ ವಿದ್ಯಾರ್ಥಿನಿಯನ್ನು 'ಮೂರ್ ದಿನದಿಂದ ಸ್ಕೂಲ್ಗ್ಯಾಕ್ ಬಂದಿರ್ಲಿಲ್ಲ?' ಅಂತ ವಿಚಾರಿಸ್ತಿದ್ದೆ. ಅವ್ಳ ಜೊತೆ ನಿಂತಿದ್ದ ಮಲ್ಲಿಗಮ್ಮ "ಅವ್ರಮ್ಮ ಸತ್ತೋಯ್ತು ಮಿಸ್" ಅಂದ್ಲು. ನನ್ಗೋ ಆಶ್ಚರ್ಯ. ಆಧಾರ್ ಕಾರ್ಡ್ ಜೆರಾಕ್ಸ್ ಕೊಡೋಕೆ ಬಂದಿದ್ರು ಅವ್ಳ ತಾಯಿ, ಏನಿನ್ನೂ 30 ವರ್ಷ ಇರ್ಬಹುದು. ಏನಾಗಿತ್ತೇ ಅಂತ ಕೇಳಿದ್ದಕ್ಕೆ, "ಎರ್ಡ್ ದಿನ್ದಿಂದ ಹಿಟ್ ಉಣ್ತಿರ್ಲಿಲ್ಲ ಮಿಸ್, ನೆನ್ನೆ ಬೆಳ್ಗೆ ಸೂಲೊಂಟೋಯ್ತು ಮಿಸ್, ಮಡ್ಕ ತೆಗೀಬೇಕು, ಬಟ್ಟೆ ತೆಕ್ಕೊಂಡ್ ಕಾವ್ಲಿಗ್ ಓಗ್ಬೇಕು, ಮುಂದಿನ್ ವಾರ ಇನ್ನೆರ್ಡ್ ದಿನ ರಜ ಬೇಕಿತ್ತು" ಅಂತ ವಿವರಣೆ ಕೊಡ್ತಿದ್ರೆ ನನ್ನ ಮುಖದಲ್ಲಿ ದೊಡ್ಡ ಕೊಶ್ಚನ್ ಮಾರ್ಕ್!ಹಿಂದೆ ನಿಂತು ಮುಸಿಮುಸಿ ನಗ್ತಿದ್ದ ಮಾಲಾ ಮಿಸ್ "ಛೇ ಪಾಪ, ನಿಮ್ ಮಿಸ್ಗೆ ಏನು ಅರ್ಥ ಆಗ್ಲಿಲ್ಲ ಕಣ್ರೋ" ಅಂದಿಂದ್ರು. "ಇಲ್ಲಿ ಅಮ್ಮ ಅಂದ್ರೆ ಅಜ್ಜಿ, ಅವ್ವ ಅಂದ್ರೆ ತಾಯಿ. ಅವ್ರಜ್ಜಿಗೆ 93ರ ಮೇಲೆ ಆಗಿತ್ತಂತೆ, ಮುಂದಿನ ವಾರ ಸೂತಕ ತೆಗೀಬೇಕು ಬಟ್ಟೇನೆಲ್ಲಾ ತೆಗೊಂಡು ಕಾಲುವೆ ನೀರಿನಲ್ಲಿ ಒಕ್ಕೊಂಡ್ ಬರ್ತಾರೆ" ಅಂತ ಅವ್ರೇ ತಿಳ್ಸಿ ಹೇಳ್ತಿದ್ರೆ, ಎಷ್ಟ್ ಕಷ್ಟ ಈ ಭಾಷೆ ಅನ್ಸಿತ್ತು.
ಮಣ್ಣಿನ ಘಮದ ಮಾತು..
ಇವತ್ತು ಆಟೋದಲ್ಲಿ ಕೂತಿದ್ದಾಗ ಪಕ್ಕದಲ್ಲಿ ಕೂತಿದ್ದವಳು ತನ್ನ ಅತ್ತೆ ಬಗ್ಗೆ ಇನ್ನೊಬ್ಬಳ ಹತ್ರ ಹೇಳ್ಕೋತಾ ಇದ್ಲು. ಅವ್ಳ ಅತ್ತೆ ಬೇರೆಯವ್ರ ಸೊಸೆ ಮಾತಾಡಿಸಿದ್ದನ್ನೆ ಹೊಗಳ್ತಾ ಇವ್ಳನ್ನ ತೆಗಳ್ತಾರಂತೆ. ಅವ್ಳು ಕೇಳೋವಷ್ಟು ಕೇಳಿ ,"ಅಯ್ಯೋ ಅದ್ಕೇ ಯೋಳೋದು, ಹಿಟ್ ಇಕ್ದೋಳ್ಗಿಂತ ಬಟ್ ಇಕ್ದೋಳ್ ಮೇಲು ಅಂತ. ಕಾಲ ಹಿಂಗೇ ಇದ್ದದ ತಗ, ಅವ್ರ್ದೇ ನಡೀಲಿ ಬಿಡು. ನೀನೇ ವಸಿ ಸೈರಸ್ಕೋ ಓಗು ತಾಯಿ", ಅಂತ ಸಮಾಧಾನದ ಮಾತಾಡಿದ್ಲು.ಇಲ್ಲಿನ ಮಣ್ಣಿನ ಕಂಪನ್ನ ಹೊದ್ದಂತ ಅರ್ಥಗರ್ಭಿತ ಮಾತು.
❍ ವೀಣಾ ವಾಸುದೇವ್
ಗೃಹಿಣಿ. ತಾಯಿ. ನಂಜನಗೂಡು ಸಮೀಪದ ಹಳ್ಳಿಯೊಂದರ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿ. ತಮ್ಮ ವೃತ್ತಿ ಜೀವನದ ಸಿಹಿ-ಕಹಿ ಕ್ಷಣಗಳನ್ನು ಕರಿಹಲಗೆ ಮೂಲಕ ಹಂಚಿಕೊಳ್ಳಲಿದ್ದಾರೆ.


No comments:
Post a Comment