ನಮಸ್ಕಾರ,
ಇವರು ನನಗೆ ಕಾಲಂ ಬರ್ದು ಕೊಡಿ ಅಂತ ಹೇಳಿದಾರೆ. ಆದ್ರೆ ನನಗೆ ಇಲ್ಲಿವರೆಗೆ ಒಂದು ಲವ್ ಲೆಟರ್ ಸಾ ಬರ್ದು ಅಭ್ಯಾಸ ಇಲ್ಲ ಮಾರಾಯ್ರೆ! ಇವ್ರು ಒತ್ತಾಯ ಮಾಡಿದಾರೆ ಅಂತ ನನಗೆ ತೋಚಿದ್ದನ್ನು ಬರೀತಿದೇನೆ. ಪುರುಸೊತ್ತು ಮಾಡಿಕೊಂಡು ಓದಿ ಲೈಕು ಬಟನ್ ಒತ್ತಿ ಆಯ್ತ?
ಕಾಲಂ ಬರೀಲಿಕ್ಕೆ ಶುರು ಮಾಡುವ ಮೊದ್ಲು ನನ್ನ ಬಗ್ಗೆ ಸ್ವಲ್ಪ ಇಂಟ್ರೊಡಕ್ಷನ್ ಕೊಡುವ ಅಲ್ಲವ? ನಮ್ಮ OMK ಜನಾರ್ಧನರ ಸ್ಟೈಲಿನಲ್ಲಿ ಹೇಳಬೇಕಂದ್ರೆ, ನನ್ನ ಹೆಸರು ಮಾನಸಿ. ನಮ್ಮದು ಕುಂದಾಪುರ ಆಗ್ತದೆ. ಆದ್ರೆ ನಮ್ಮ ಕುಂದಾಪ್ರ ಭಾಷೆಯಲ್ಲಿ ಹೇಳೂದಾದ್ರೆ ಹ್ವಾಯ್ ನಮ್ದ್ ಕುಂದಾಪ್ರ್ವೇ!
ಇದು ಯಾಕೆ ಹೀಗೆ ಅಂತ ನಿಮಗೆ ಆಶ್ಚರ್ಯ ಆಗ್ಲಿಕ್ಕೂ ಸಾಕು. ನನ್ನ ಅಪ್ಪ ಕುಂದಾಪ್ರ, ಅಮ್ಮ ಮಂಗ್ಳೂರು. ನಾನು ಈಗ ಇರುವುದು ಬೆಂಗ್ಳೂರು. ಹಾಗೆ ಎಲ್ಲ ಭಾಷೆ ಮಿಕ್ಸ್ ಆಗಿ ಒಂಥರಾ ಫ್ರೂಟ್ ಸಲಾಡ್ ಆಗಿದೆ. ಭಾಷೆ ಕಟ್ಟಿಕೊಂಡು ಎಂತ ಆಗ್ಬೇಕು, ಓದುವವರಿಗೆ ಬರೆದದ್ದು ಅರ್ಥ ಆದ್ರೆ ಸಾಕಲ್ಲವಾ, ನೀವೆಂತ ಹೇಳ್ತೀರಿ?
ಮತ್ತೆ ವ್ಯಾಲೆಂಟೈನ್ ಡೇ ಹತ್ರ ಬರ್ತಾ ಉಂಟು ನೋಡಿ. ನಂಗೆ ಒಂದಿಷ್ಟು ಜನ ಗೆಳತಿಯರು ಇದಾರೆ, ಅವರು ಮಾಡೂದೆಲ್ಲ ನೀವು ನೋಡ್ಬೇಕು ಒಂದ್ಸಲ! ಎಂತೆಂತ ಕತೆ ಗೊತ್ತುಂಟ? ಒಬ್ಬಳಿಗೆ ಶಾರುಖ್ ಖಾನನ ಮೇಲೆ ಪ್ರಾಣ. ಇನ್ನೊಬ್ಬಳಿಗೆ ಮದುವೆ ಆಗ್ಲಿಕ್ಕೆ ಬಾಹುಬಲಿ ಪ್ರಭಾಸೇ ಬೇಕು. ಮತ್ತೊಬ್ಬಳಿಗೆ ವಿರಾಟ್ ಕೊಹ್ಲಿ ಕಂಡ್ರೆ ಹುಚ್ಚು ಹಿಡಿಯುತ್ತೆ. ಇನ್ನೂ ಒಬ್ಬಳಿದ್ದಾಳೆ; ಅವನ್ಯಾವನೋ ಯೂ ಟ್ಯೂಬು ಸ್ಟಾರ್ ಅಂತೆ ಭುವನ್ ಅಂತ. ಅವನ ಒಂದೊಂದು ವೀಡ್ಯೋವನ್ನ ಇವಳು ಹತ್ತು ಹತ್ತು ಸಲ ನೋಡುವುದು. ಇವರಿಗೆಲ್ಲ ಮಂಡೆ ಸಮ ಉಂಟಾ ಅಂತ ನಾನು ಕೇಳೂದು. ಅಲ್ಲ, ಇನ್ನೊಂದೆರಡು ವರ್ಷದಲ್ಲಿ ಅವನ ಮಗಳೇ ಮದುವೆ ವಯಸ್ಸಿಗೆ ಬರುವ ಶಾರುಖ್ ಖಾನು ಅಕಸ್ಮಾತ್ ಇವಳಿಗೆ ಸಿಕ್ಕ ಅಂತ್ಲೇ ಇಟ್ಟುಕೊಳ್ಳುವ, ಆ ಮುದುಕನ ಜೊತೆ ಇವಳು ವ್ಯಾಲಂಟೈನ್ ಡೇ ಮಾಡ್ಲಿಕ್ಕಾಗ್ತದಾ? ಮತ್ತೆ ಪ್ರಭಾಸು, ವಿರಾಟ್ ಕೊಹ್ಲಿ ಎಲ್ಲ ಇವರ ಕನಸಲ್ಲಿ ಮಾತ್ರ ಅಲ್ಲವಾ ಬಂದು ಹೋಗೂದು. ಪಕ್ಕದಲ್ಲೇ ನಿಂತು ಆಸೆಯಿಂದ ಮಾತನಾಡಿಸುವ ಹುಡುಗರನ್ನ ಕಂಡ್ರೆ ಇವರಿಗೆಲ್ಲ ಒಂಥರಾ ಸಸಾರ! ಇವರೆಲ್ಲ ಎಂತ ಸ್ವರ್ಗದಿಂದ ಇಳಿದು ಬಂದವರಾ ಅಂತ ಒಂದೊಂದ್ಸಲ ನನಗೆ ಡೌಟು ಕೂಡ ಆಗ್ತದೆ.
ಅವರ ವಿಷ್ಯ ಹಾಗಿರ್ಲಿ, ಈಗ ನನ್ನ ಫಸ್ಟ್ ಡೇಟಿನ ಕತೆ ಹೇಳ್ತೆನೆ, ತುಂಬ ಮಜ ಉಂಟು, ಪೂರ್ತಿ ಓದಿಕೊಳ್ಳಿ ಆಯ್ತ. ಅವನು ನಮ್ಮ ನೆರೆಮನೆಯಲ್ಲಿ ಇದ್ದ ಹುಡುಗ. ನೋಡ್ಲಿಕ್ಕೆ ಪರವಾಗಿಲ್ಲ ಅನ್ನುವಷ್ಟು ಚೆನ್ನಾಗಿದ್ದ. ನಮ್ಮ ಮನೆಯ ಛಾವಣಿಯಲ್ಲಿ ನಿಂತ್ರೆ ಅವನ ಮನೆಯ ಛಾವಣಿ ಕಾಣಿಸ್ತಿತ್ತು. ದಿನಾ ಬೆಳಗ್ಗೆ ಏಳು ಗಂಟೆ ಹೊತ್ತಿಗೆ ಅವನು ಡಂಬೆಲ್ಸ್ ಎತ್ತಿಕೊಂಡು ಜಿಮ್ ಮಾಡುವುದು, ನಾನು ಕದ್ದು ಕದ್ದು ನೋಡುವುದು ಹೀಗೇ ನಡೀತಿತ್ತು. ನಾನು ನೋಡ್ಲಿ ಅಂತಲೇ ಅವನು ಜಿಮ್ ಮಾಡ್ತಿದ್ದದ್ದಾ ಅನ್ನುವ ಅನುಮಾನವೂ ಈಗ ಬರ್ತದೆ!
ಹೀಗೆ ಸುಮಾರು ಹದಿನೈದು ದಿನ ಹಿಡಿ-ತಪ್ಪಿಸಿಕೋ ಆಟ ಆಡಿದ ಮೇಲೆ ಅಂತೂ ಜಿಮ್ ಬಾಡಿ ಮನುಷ್ಯ ಮುಖಕ್ಕೆ ಮುಖ ಕೊಟ್ಟು ಮಾತಾಡುವ ಸ್ಟೇಜಿಗೆ ಬಂದ. ಇಷ್ಟೆಲ್ಲ ಆದ ಮೇಲೆ ಒಟ್ಟಿಗೆ ಕಾಫಿ ಕುಡೀದಿದ್ರೆ ಹೇಗೆ? ಒಂದು ದಿನ ಟೈಮ್ ಫಿಕ್ಸ್ ಮಾಡಿಕೊಂಡು ಸಾಯಂಕಾಲ ಕಾಫಿ ಡೇಯಲ್ಲಿ ಸೇರಿದ್ವಿ.ಆದ್ರೆ ಆ ಡೇಟು ಮಾತ್ರ ಬಯಂಕರ ವಿಚಿತ್ರವಾಗಿ ಕೊನೆಯಾಯ್ತು...
ಒಂದು ದಿನ ನನ್ನ ಸ್ಕೂಟಿ ಕೆಟ್ಟು ಹೋಗಿದ್ದರಿಂದ ಆಟೋಗೆ ಕಾಯ್ತಾ ನಿಂತಿದ್ದೆ. ಅವ ಬೈಕಿನಲ್ಲಿ ಬಂದ. ನನ್ನ ಹತ್ರವೇ ಗಾಡಿ ನಿಲ್ಲಿಸ್ದ. ಬಹುಶಃ ನನಗೆ ಗಾಳ ಹಾಕ್ಲಿಕ್ಕೆ ಟ್ರೈ ಮಾಡ್ತಿರಬಹುದು ಅಂದುಕೊಂಡು ನನಗೆ ಒಳಗೊಳಗೇ ಸಣ್ಣಗೆ ಖುಷಿಯಾಯ್ತು. ಆದ್ರೆ ಅವ ನನ್ನ ಪಕ್ಕದಲ್ಲಿ ನಿಂತಿದ್ದವನನ್ನು ಕೂರಿಸಿಕೊಂಡು ಹೋಗೇಬಿಟ್ಟ! ಬಹುಶಃ ಅವನ ಫ್ರೆಂಡ್ ಇರ್ಬೇಕು ಅಂತ ಕಾಣ್ತದೆ. ಎಂತ ಅವಸ್ಥೆ ಮಾರಾಯ್ರೆ!
ಸುಮಾರು ಹದಿನೈದು ದಿನ ಆಗಿರ್ಬಹುದು, ಮನೆ ಹತ್ತಿರದ ಅಂಗಡಿಯಲ್ಲಿ ಕೊತ್ತಂಬರಿ ಸೊಪ್ಪು ತಕೊಳ್ಳುವ ಅಂತ ಹೋಗಿದ್ದೆ. ನನ್ನ ಹತ್ತಿರ 50 ರೂ. ನೋಟಿತ್ತು. ಅಂಗಡಿಯವ 5 ರೂ. ಚಿಲ್ರೆ ಕೊಡಿ ಅಂತ ರಗಳೆ ಮಾಡ್ತಿದ್ದ. ಆ ಹೊತ್ತಿಗೆ ಸರಿಯಾಗಿ – ಸಿನಿಮಾದಲ್ಲಿ ಹೀರೋ ಎಂಟ್ರಿ ಕೊಡುವ ಹಾಗೆ – ಇಂವ ಬಂದ ನೋಡಿ! ನಾನು ಬೇಡ ಅಂದ್ರೂ 5 ರೂ. ಚಿಲ್ರೆ ಅವನೇ ಕೊಟ್ಟ. ಅವನು ತಕೊಂಡಿದ್ದು ಕಾಲು ಕೇಜಿ ಟೊಮೆಟೊ. ಬಹುಶಃ ಮನೇಲಿ ಒಬ್ನೇ ಇರಬೇಕೇನೋ ಅಂತ ಅಂದ್ಕೊಂಡೆ.
“ನೀವಿರೂದು ಎದುರು ಮನೇಲಲ್ವಾ?” ಅಂತ ಮಾತು ಶುರು ಮಾಡಿದೆ.
“ಹೌದು” ಅಂದ.
“ತುಂಬ ಥ್ಯಾಂಕ್ಸ್ ಚಿಲ್ರೆ ಕೊಟ್ಟಿದ್ದಕ್ಕೆ. ಮನೆ ಹತ್ರ ಬನ್ನಿ, ನಿಮಗೆ 5 ರೂ. ಕೊಡ್ತೇನೆ” ಅಂದೆ
“ಪರವಾಗಿಲ್ಲ ಇರ್ಲಿ ಬಿಡಿ” ಅಂತ ಹೋಗಿಯೇಬಿಟ್ಟ!
ನಾನು ಇವನನ್ನು ಮಾತಾಡಿಸುವ ಅಂದ್ರೆ ಇವ ಸೀದ ಹೋಗಿಯೇ ಬಿಡೂದಾ? ಎಂತ ಅವಸ್ಥೆ ಮಾರಾಯ್ರೆ!
ಹೀಗೆ ಸುಮಾರು ಹದಿನೈದು ದಿನ ಹಿಡಿ-ತಪ್ಪಿಸಿಕೋ ಆಟ ಆಡಿದ ಮೇಲೆ ಅಂತೂ ಜಿಮ್ ಬಾಡಿ ಮನುಷ್ಯ ಮುಖಕ್ಕೆ ಮುಖ ಕೊಟ್ಟು ಮಾತಾಡುವ ಸ್ಟೇಜಿಗೆ ಬಂದ. ಇಷ್ಟೆಲ್ಲ ಆದ ಮೇಲೆ ಒಟ್ಟಿಗೆ ಕಾಫಿ ಕುಡೀದಿದ್ರೆ ಹೇಗೆ? ಒಂದು ದಿನ ಟೈಮ್ ಫಿಕ್ಸ್ ಮಾಡಿಕೊಂಡು ಸಾಯಂಕಾಲ ಕಾಫಿ ಡೇಯಲ್ಲಿ ಸೇರಿದ್ವಿ.
ನಾನು “ಹಲೋ..” ಅಂತ ಕೈ ಮುಂದೆ ಚಾಚಿದೆ. ಅವ್ನು ಸ್ವಲ್ಪ ಹಿಂಜರಿಕೆಯಲ್ಲೇ ಷೇಕ್‌ಹ್ಯಾಂಡ್‌ಗೆ ಕೈ ಚಾಚಿದ. ನಾನು ಅವನಿಗೆ ಷೇಕ್ ಹ್ಯಾಂಡ್ ಮಾಡಿದ್ದಷ್ಟೇ, ತಕ್ಷಣ ವಾಪಸ್ ಕೈ ಹಿಂದಕ್ಕೆ ಎಳೆದುಕೊಂಡುಬಿಟ್ಟೆ!
ಅವನ ಕೈ ಪೂರ ಚಂಡಿ! ಅಂಥ ಎಸಿ ರೂಮಲ್ಲೂ ಈ ಜಿಮ್ ಬಾಡಿಯವ ಬೆವರ್ತಾ ಇದ್ದಾನೆ! ಎಂತ ಅವಸ್ಥೆ ಮಾರಾಯ್ರೆ! ಆಮೇಲೆ ಮಾತು-ಕತೆ ಯಾವುದೂ ನೆಟ್ಟಗೆ ನಡೀಲಿಲ್ಲ. ಕುಡಿದ ಕಾಫಿ ಸಹ ಸಿಹಿ ಇರ್ಲಿಲ್ಲ! ಆ ಫ್ರೆಂಡ್‌ಶಿಪ್ಪು ಅಲ್ಲೇ ಶುರುವಾಗಿ ಅಲ್ಲೇ ಕೊನೆ ಆಯ್ತು.
ಇವತ್ತು ನನ್ನ ಮೊದಲ ಡೇಟು ನೆನಪಿಸಿಕೊಂಡ್ರೆ ನಗು ಬರ್ತದೆ. ಹಾಂ, ಅಂದಹಾಗೆ ಅವನ 5 ರೂ. ವಾಪಸ್ ಕೊಟ್ಟಿದ್ದೇನೆ ಆಯ್ತ..
*ಚಂಡಿ = ಒದ್ದೆ
❍ ಮಾನಸಿ ಮರವಂತೆ
ಸಾಫ್ಟ್‌ವೇರ್ ಇಂಜಿನಿಯರ್. ಓದು ಮೆಚ್ಚಿನ ಹವ್ಯಾಸ. ಬರೆಯುತ್ತಿರುವುದು ಇದೇ ಮೊದಲು. ಪುರುಸೊತ್ತಿದ್ದಾಗ ತಮಗೆ ತೋಚಿದ್ದರ ಬಗ್ಗೆ ಎಂತ ಗೊತ್ತುಂಟ ಅಂತ ಕತೆ ಹೇಳಲಿದ್ದಾರೆ.


No comments:
Post a Comment