ವಿದ್ಯಾರ್ಥಿಗೆ ಹೊಡೆದು ಟೀಚರೇ ಹೆದರೋ ಕಾಲ!


"ಬಾಲನ್ಯಾಯ ಕಾಯ್ದೆ ನಿಯಮ 85ರ ಪ್ರಕಾರ ಮಗುವಿಗೆ ದೈಹಿಕ ದಂಡನೆ, ನಿಂದನೆ, ಕೆಕ್ಕರಿಸಿ ನೋಡುವುದು ಎಲ್ಲವೂ ಶಿಕ್ಷಾರ್ಹ ಅಪರಾಧ. ಇದು ನಿಮ್ಗೆ ಗೊತ್ತಿರ್ಲಿಲ್ವ ಮೇಡಂ?" 

ವಾರ್ತಾ ನಿರೂಪಕಿ ಜೋರಾಗಿ ಕಿರುಚ್ತಾ ಕೇಳ್ತಾ ಇದಾಳೆ. ಏನ್ ಉತ್ರ ಹೇಳ್ಲಿ? "ಅದು... ಆಕಸ್ಮಿಕವಾಗಿ ತಗುಲಿದ್ದು, ಸ್ವಲ್ಪ ಬುದ್ಧಿ ಬರ್ಲಿ ಅಂತ ಹೊಡ್ದಿದ್ದು..." ತಡವರಿಸ್ತಾ ಗದ್ಗದ ದನೀಲಿ ಹೇಳೋಕೆ ಶುರು ಮಾಡಿದ್ದೇ ತಡ, ನನ್ನ ಮಾತನ್ನ ಕೇಳಿಸಿಕೊಳ್ದೆ  "ಈಗೊಂದು ಕರೆ ಬರ್ತಿದೆ, ಇದ್ರ ಬಗ್ಗೆ  ಜನ ಏನ್ ಹೇಳ್ತಾರೆ ಅಂತ ಕೇಳೋಣ.." ಅಂತಂದು ಆ ಕಡೆ ತಿರುಗಿದ್ಲು.

ಎದುರಿನ ಮಾನಿಟರ್‌ ಪರದೆಯ ಕೆಳ ಭಾಗದಲ್ಲಿ 'ರಕ್ಕಸಿರೂಪಿ ಶಿಕ್ಷಕಿ' ಅನ್ನೋ ಟೈಟಲ್ಲು ಸ್ಕ್ರೋಲ್ ಆಗ್ತಿತ್ತು. ಹಿಂದೆ ತಿರುಗಿದ್ರೆ ಮಲ್ಲನ ತಂದೆ-ತಾಯಿ, ಅಜ್ಜಿ-ತಾತ, ಅಪ್ಪಾಜಿ ಎಲ್ಲ ನಿಂತು ಕೆಂಗಣ್ಣು ಬಿಡ್ತಿದಾರೆ. ಆ ನೋಟಗಳನ್ನ ನೋಡೋಕಾಗ್ದೆ ಭಯದಿಂದ ಹೆದ್ರಿ ಓಡಿ ಹೋಗೋಣ ಅಂತ ಕುರ್ಚಿಯಿಂದ ಎದ್ರೆ, ಎಲ್ಲರೂ ನನ್ನ ಕೈ ಹಿಡ್ದು ಎಳೀತಿದಾರೆ. ನಾನು ಜೋರಾಗಿ ಕಿರ್ಚಿದ್ರೂ ಬಿಡ್ತಿಲ್ಲ..

ಥಟ್ ಅಂತ ಕಣ್ಬಿಟ್ಟೆ!

ಮೈ ಬೆವರಿತ್ತು. ಎದೆ ಇನ್ನೂ ಹೊಡ್ಕೋತಾ ಇತ್ತು. ನಾಳೆ ಮೊದ್ಲು ಮಲ್ಲನನ್ನು ಮಾತಾಡಿಸ್ಬೇಕು ಅಂದ್ಕೊಂಡು ಮಗ್ಗುಲು ಬದಲಿಸ್ದೆ.

ಮಧ್ಯಾಹ್ನದ ಘಟನೆ ನೆನಪಾಯ್ತು; ಊಟ ಮುಗಿಸಿ ಬಾಕ್ಸ್ ತೊಳಿಯೋದಕ್ಕಂತ ಏಳ್ತಿದ್ದಂಗೆ, ಏಳನೇ ಕ್ಲಾಸಿನ ಮಾನಸಿ, ಬಾಲ್ ಹಿಡ್ಕೊಂಡು, ಅಳ್ತಾ ಇದ್ದ ಮೂರನೇ ಕ್ಲಾಸಿನ ಹುಡುಗಿ ಜೊತೆ ಬಂದ್ಲು. "ಏನಾಯ್ತೇ..?" ಅಂದಿದ್ದಕ್ಕೆ, "ಮಿಸ್ ಮಲ್ಲ, ರಂಗ, ದಿಲೀಪ್ ಎಲ್ಲ ಓದೋದ್ ಬುಟ್ಟು ಬಾಲ್ ಆಡ್ತವ್ರೆ. ಇದು ಬುಂಡ್ಗ ಬುದ್ದು ಊದ್ಕಂಡದ" ಅಂತ ಊದಿದ ಹಣೆ, ರಬ್ಬರ್ ಬಾಲ್ ಎರಡನ್ನೂ ತೋರ್ಸಿದ್ಲು. ಮಾಲಾ ಮಿಸ್,  "ಏನಾಗಲ್ಲ ಬಾ, ಉಪ್ನೀರ್ ಶಾಖ ಕೊಟ್ರೆ ಕಡ್ಮೆ ಆಗತ್ತೆ" ಅಂತ ಹುಡುಗೀನ ಕರ್ಕೊಂಡು ಹೋದ್ರು.

ನಾನು ಆ ಮೂವರನ್ನು ಕರೆಸಿ ಅಂಗೈಗಳಿಗೆ ಒಂದೊಂದು ಬಿಟ್ಟು, ಬೆಲ್ ಆಗೋದ್ರೊಳಗೆ ಬಾಕಿ ಇರುವ ನೋಟ್ಸ್ ಕಂಪ್ಲೀಟ್ ಮಾಡಿ, ಅಂತ ಗದರಿಸಿದ್ದೆ. ಉಳಿದಿಬ್ಬರು ಕೈ ಉಜ್ಕೊಂಡು ಹೋದ್ರು. ಮಲ್ಲ ಮಾತ್ರ ಇನ್ನೂ ನೋವಿನಲ್ಲಿ ತೋಳು ಹಿಡ್ಕೊಂಡಿದ್ದ. ಹತ್ರ ಹೋಗಿ ನೋಡಿದ್ರೆ, ಹೊಡೆಯುವಾಗ ಕೈ ಅಡ್ಡ ಕೊಟ್ಟ ಕಾರಣ, ತೋಳಿಗೂ ಏಟು ಬಿದ್ದು ಬರೆ ಬಂದಿತ್ತು.

ಒಳಗೇ ಗಾಬರಿ ಶುರು ಆಗಿತ್ತು. ತೋರಿಸ್ಕೊಳ್ದೆ ಫಸ್ಟ್ ಏಯ್ಡ್ ಬಾಕ್ಸ್ ತಂದು ಟಿಂಚರ್ ಹಚ್ಚಿದ್ದೆ. ಅವನು ಹತ್ತು ನಿಮಿಷಕ್ಕೇ ಸರಿಯಾದರೂ ನನ್ನ ಕಣ್ಣೆಲ್ಲ ಆ ಮಾರ್ಕಿನ ಮೇಲೇ. ಸಂಜೆ ಮನೆಗೆ ಹೋಗೋ ಸಮಯದಲ್ಲಿ ಗೀರು ಇನ್ನೂ ಇತ್ತು. ಅವನಿಗೆ ಕಳೆದ ವಾರ ಜ್ವರ ಬಂದಿತ್ತು. ಈಗ ಇದರ ನೋವಿಗೇನಾದ್ರೂ ಮತ್ತೆ ಬಂದ್ರೆ, ವೀಕ್ನೆಸ್ ಆಗಿ ಶಾಲೆಗೇ ಬರೋಕಾಗ್ದಿದ್ರೆ? ನನ್ನ ಆತಂಕ ನೋಡಿ ಕಲೀಗ್, "ಏನೂ ಆಗಿಲ್ಲ ಬಿಡ್ರಿ, ಇನ್ನೇನ್ ಪರೀಕ್ಷೆ  ಬಂತು. ಓದ್ಕೋಬೇಕಲ್ವಾ. ಭಯ ಇರ್ಬೇಕು ಮಕ್ಳಿಗೆ. ಇವತ್ತು ಮೂರು, ನಾಳೆ ಮೂವತ್ತು ಆಡ್ತವೆ. ಯಾರಾದ್ರು ಬಂದ್ರೆ ಹೇಳ್ತೀವಿ ಬಿಡಿ" ಅಂದಿದ್ರು.

ಹಿಂದೆ, ನಾವು ಚಿಕ್ಕವರಿದ್ದಾಗ ಶಾಲೆಯಲ್ಲಿ ಟೀಚರ್‌ ಹತ್ರ ಪೆಟ್ಟು ತಿಂದು ಮನೆಗೆ ಬಂದ್ರೆ, ಟೀಚರು ನಮ್ಮ ಬಗ್ಗೆ ಪೇರೆಂಟ್ಸ್‌ ಹತ್ರ ಕಂಪ್ಲೇಂಟು ಮಾಡಿದ್ರೆ 'ಮರ್ಯಾದಿ ತೆಗ್ಯಕ್ಕೇ ಹುಟ್ಟಿದೀಯಾ' ಅನ್ನೋ ಬೈಗುಳದ ಜತೆ ಮನೆಯಲ್ಲೂ ನಾಲ್ಕು ಒದೆಗಳ ಭಕ್ಷೀಸು ಸಿಗ್ತಿತ್ತು! ಈಗ ಸಮಾಜದ ದೃಷ್ಟಿಕೋನ ಬದಲಾಗಿದೆ. ಕೆಲವೊಮ್ಮೆ ಇದು ಟೀಚರುಗಳನ್ನೇ ಇಕ್ಕಟ್ಟಿಗೂ ಸಿಲುಕಿಸುತ್ತೆ..!

ಈ ತರ ನಾನೂ ಎಷ್ಟೊಂದ್ ಸಲ ಬೇರೆಯವ್ರಿಗೆ ಸಮಾಧಾನ ಮಾಡಿಲ್ಲ? ಆದ್ರೆ ನಮ್ದೇ ವಿಷ್ಯ ಆದಾಗ ಟೆನ್ಷನ್ ತಡೆದುಕೊಳ್ಳೋದು ಕಷ್ಟ. ಕಳ್ದ ತಿಂಗಳು ಸಿಕ್ಕಿದ್ದ ಗೆಳತಿ ರಜನಿಗೂ ಇದೇ ರೀತಿ ಆಗಿತ್ತು. ಅವ್ಳು ಗಾಬರೀಲಿ ಏನೂ ತೊಂದ್ರೆ ಆಗ್ದೇ ಇರ್ಲಿ, ಬೆಟ್ಟಕ್ ಬಂದು ರಜ ಹೊಡಿತೀನಿ ದೇವ್ರೆ ಅಂತ ಹರಕೆ ಹೇಳ್ಕೊಂಡಿದ್ಲಂತೆ. ನಾನದನ್ನ ಕೇಳಿ "ಯಾಕೆ ಮುಡಿ ಕೊಡ್ತೀನಿ ಅಂತ ಹೇಳ್ಕೊಳ್ಲಿಲ್ವಾ?" ಅಂತ ಜೋರಾಗಿ ನಕ್ಕಿದ್ದೆ. ಈಗ ನಾನೇನ್ ಹೇಳ್ಕೊಳ್ಲಿ? ನನ್ಗೋ ಅರ್ಧಂಬರ್ಧ ನಂಬಿಕೆ. ಯಾವತ್ತೂ ಹರಕೆ ಹೊತ್ತವಳಲ್ಲ. ಕೊನೆಗೆ 100 ರುಪಾಯಿ ಹುಂಡಿಗೆ ಹಾಕ್ತೀನಿ ಅಂತ ದೇವರ ಜೊತೆ ಚೀಪ್ ಅಂಡ್‌ ಬೆಸ್ಟ್ ಡೀಲ್ ಮಾಡಿಕೊಂಡು ನಿದ್ರೆಗೆ ಜಾರಿದೆ.

ಬೆಳಿಗ್ಗೆ ಭಯ ಆತಂಕಗಳ ಮೇಲೆ ಗಾಂಭೀರ್ಯದ ಮುಖವಾಡ ಹೊತ್ತು ಶಾಲೆಗೆ ಹೋಗಿ ನೋಡಿದ್ರೆ ಮಲ್ಲ ಬಂದಿಲ್ಲ!

ಕೂತಲ್ಲಿ ಕೂರಕ್ಕಾಗ್ದೆ 2ನೇ ಕ್ಲಾಸಿನಲ್ಲಿ ಓದ್ತಿದ್ದ ಮಲ್ಲನ ತಮ್ಮ ಗುರುವನ್ನ ಕರ್ಸಿದೆ. "ಯಾಕೋ ನಿಮ್ಮಣ್ಣ ಬಂದಿಲ್ಲ?" ಅಂದ್ರೆ ಕೆಳಗೆ ಹಾಕಿದ ತಲೆ ಮೇಲೆತ್‌ತಾ ಇಲ್ಲ!

"ಹುಷಾರಿಲ್ವೇನೋ?" ನನ್ನ ದನಿಯ ವ್ಯತ್ಯಾಸ ನನ್ಗೇ ಗೊತ್ತಾಗ್ತಿತ್ತು! ಅಡ್ಡಡ್ಡ ತಲೆ ಅಲ್ಲಾಡಿಸ್ದ. "ಮತ್ತೆ.. ಎಲ್ಲಿಗ್ ಹೋಗಿದಾನೆ?" ಅಂದಾಗ ಮೆಲ್ಲಗೆ "ಮಿಸ್, ವಾದ್ಯಕ್ ಹೋಗವ್ನೆ ಮೈಸೂರ್ಗೆ" ಅಂದ.

ಅಬ್ಬ! ಅನ್ನಿಸ್ತು. ವಾಪಾಸು ನನ್ನ ಟೀಚರ್‌ ಮೂಡ್‌ಗೆ ಬಂದು, "ಛೆ, ಓದೋ ಮಕ್ಳನ್ನ ಯಾಕ್ ವಾದ್ಯಕ್ ಕರ್ಕೊಂಡ್ ಹೋಗ್ತಾರೋ. ಸರಿ, ನೀ ಹೋಗು" ಅಂದೆ.

ಮೂರನೇ ಪೀರಿಯಡ್ ಸೈನ್ಸ್ ಕ್ಲಾಸ್ ಗೆ ಬಂದಾಗ ಮಲ್ಲ ಹಾಜರ್! ಅದೂ ವಿತ್ ಕಂಪ್ಲೀಟೆಡ್ ನೋಟ್ಸ್! "ಕೈ ನೋವಿದ್ಯೇನೋ?" ಅಂದಿದ್ದಕ್ಕೆ, "ಇಲ್ಲ ಮಿಸ್ ಆವಾಗ್ಲೇ ಹೋಯ್ತು. ಇನ್ ಆಡಲ್ಲ ಮಿಸ್, ಬಾಲ್ ಕೊಡಿ ಮಿಸ್.." ಅಂತ ಬೇಡೋಕೆ ಶುರು ಮಾಡ್ದ. "ಕೊಡ್ಬೇಡಿ ಮಿಸ್" ಅಂತ ಮಾನಸಿ, ಹತ್ತು ನಿಮಿಷದ ಗ್ಯಾಪಲ್ಲಿ ಮಾತಾಡಿದವರ ಲಿಸ್ಟ್ ಹಿಡ್ಕೊಂಡ್ ಬಂದ್ಲು.

ನೋಡಿದ್ರೆ ನಿನ್ನೆ ಏಟು ತಿಂದವರೇ ಮೊದಲ ಮೂರು ಸ್ಥಾನ ಹಂಚಿಕೊಂಡಿದ್ರು. ಮಾತಾಡಿದವರ ಪಟ್ಟಿಯಲ್ಲಿ ಮಲ್ಲನಿಗೆ ಎಂಟು ಮಾರ್ಕ್ಸು! (ಜಾಸ್ತಿ ಗಲಾಟೆ ಮಾಡಿದಂಗೆ ಪಟ್ಟಿಯಲ್ಲಿ  ಮಾರ್ಕ್ಸೂ ಏರಿಕೆಯಾಗುತ್ತೆ.) ಬೀರು ಮೇಲಿನ ಕೋಲು, ಮಲ್ಲನ ಮುಖ ನೋಡ್ತಾ ನಿಂತ ನಾನು ಮಾತ್ರ ತಟಸ್ಥೆ!

'ಕಲಿಯುಗದಲಿ ಶ್ರೀಗುರು ಶಿಷ್ಯಂಗೆ ವಂದಿಸಿ ಬುದ್ಧಿಯ ಕಲಿಸಿದರೆ ಆಗಲಿ ಮಹಾಪ್ರಸಾದವೆಂದೆನಯ್ಯಾ ಗುಹೇಶ್ವರಾ!'

❍ ವೀಣಾ ವಾಸುದೇವ್‌ 
ಗೃಹಿಣಿ. ತಾಯಿ. ನಂಜನಗೂಡು ಸಮೀಪದ ಹಳ್ಳಿಯೊಂದರ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿ. ತಮ್ಮ ವೃತ್ತಿ ಜೀವನದ ಸಿಹಿ-ಕಹಿ ಕ್ಷಣಗಳನ್ನು ಕರಿಹಲಗೆ ಮೂಲಕ ಹಂಚಿಕೊಳ್ಳಲಿದ್ದಾರೆ.

No comments:

Post a Comment