![]() |
ಉನಕೋಟೀಶ್ವರ ಕಾಲ ಭೈರವ, ಉನಕೋಟಿ, ತ್ರಿಪುರಾ. 1300 ವರ್ಷಗಳ ಹಿಂದಿನ ಶಿವನ ವಿಗ್ರಹ |
ಇದು ತ್ರಿಪುರಾದ ಉನಕೋಟಿ ಜಿಲ್ಲೆಯ ಕೈಲಾಶಹರದಲ್ಲಿರುವ ಶಿವನ ತಲೆ. ಬೃಹತ್ ಬಂಡೆಯಲ್ಲಿ ಅನಾಮಧೇಯ ಶಿಲ್ಪಿ 1300 ವರ್ಷಗಳ ಹಿಂದೆ (ಅಂದಾಜು ಕ್ರಿ.ಶ, 700ರ ಆಸುಪಾಸು) ಕಡೆದು ನಿಲ್ಲಿಸಿರುವ ಈ ತಲೆ 30 ಅಡಿ ಎತ್ತರವಿದೆ. ಶಿವನ ತಲೆಯ ಮೇಲೆ ಧರಿಸಿರುವ ಮಣಿಕಿರೀಟದ ಎತ್ತರವೇ ಭರ್ತಿ 10 ಅಡಿಯಷ್ಟಿದೆ! ಇದಕ್ಕೆ ಉನಕೋಟೀಶ್ವರ ಕಾಲಭೈರವ ಅಂತ ಹೆಸರಿಟ್ಟಿದ್ದಾರೆ ಜನ.
ಪ್ರತೀ ಕ್ಷೇತ್ರಗಳಿಗೂ ಒಂದಿಷ್ಟು ಹಿನ್ನೆಲೆಯ ಕಥೆ ಇರುವ ಹಾಗೆ ಈ ಕ್ಷೇತ್ರಕ್ಕೂ ಒಂದಿಷ್ಟಿವೆ. ಸ್ಥಳೀಯರ ಜಾನಪದ ಕತೆಯ ಪ್ರಕಾರ, ಕಲ್ಲೂಕುಮಾರ ಎಂಬ ಶಿವಭಕ್ತ ಶಿಲ್ಪಿಯಿದ್ದ. ಆತನಿಗೆ ಶಿವ-ಪಾರ್ವತಿಯರ ಜೊತೆ ಕೈಲಾಸ ಪರ್ವತಕ್ಕೆ ಹೋಗಬೇಕು ಅನ್ನೋ ಆಸೆಯಿತ್ತಂತೆ. ಶಿವ ಅದಕ್ಕೊಂದು ಷರತ್ತು ಹಾಕಿದನಂತೆ. ರಾತ್ರಿ ಬೆಳಗಾಗೋದರ ಒಳಗೆ ಒಂದು ಕೋಟಿ ವಿಗ್ರಹಗಳನ್ನು ಕೆತ್ತಿದರೆ ಕೈಲಾಸಕ್ಕೆ ಕರೆದುಕೊಂಡು ಹೋಗುತ್ತೇನೆ ಅಂದನಂತೆ. ಆದರೆ ಬೆಳಗಾಗುವ ಹೊತ್ತಿಗೆ ಕೋಟಿಗೆ ಒಂದು ವಿಗ್ರಹ ಕಡಿಮೆ ಇತ್ತಂತೆ. ಹಾಗಾಗಿ ಈ ಸ್ಥಳಕ್ಕೆ ಉನಕೋಟಿ (ಬಂಗಾಳಿಯಲ್ಲಿ ಉನಕೋಟಿ ಅಂದರೆ ಕೋಟಿಗೊಂದು ಕಡಿಮೆ) ಅನ್ನೋ ಹೆಸರು ಬಂತಂತೆ.
ಇಲ್ಲಿ ಕೋಟಿ ವಿಗ್ರಹಗಳಿವೆಯಾ? ಲೆಕ್ಕ ಮಾಡಿದವರಿಲ್ಲ. ಆದರೆ ಬಂಡೆಗಳುದ್ದಕ್ಕೆ ಈ ರೀತಿ ಕಲೆ ಸೃಷ್ಟಿಸಿರುವ ಅನಾಮಧೇಯ ಶಿಲ್ಪಿಗಳ ಶ್ರಮ ಇವತ್ತಿಗೂ ಪ್ರವಾಸಿಗರ ಆಕರ್ಷಣೆ. ಎಪ್ರಿಲ್ ತಿಂಗಳಿನಲ್ಲಿ ಇಲ್ಲಿ ಅಶೋಕಾಷ್ಟಮಿ ಮೇಳ ಎಂಬ ದೊಡ್ಡ ಜಾತ್ರೆಯೂ ನಡೆಯುತ್ತದೆ.

No comments:
Post a Comment