ತುಂಬಾ ಆಸಕ್ತಿಯಿಂದ ಕಾದಂಬರಿಯನ್ನು ಓದುತ್ತಿದ್ದಾಳೇನೋ ಅಂತ ನೋಡುವವರು ಅಂದುಕೊಳ್ಳಬೇಕು; ಹಾಗೆ ಸುಮತಿ ಕೈಯಲ್ಲಿ ಒಂದು ಕಾದಂಬರಿ ಪುಸ್ತಕ ಹಿಡಿದು ಕುಳಿತಿದ್ದಳು. ನಿಜ ಹೇಳಬೇಕೆಂದರೆ,ಅವಳಿಗೆ ಕಾದಂಬರಿ ಎಂದರೆ, ಅದರಲ್ಲೂ ಕೌಟುಂಬಿಕ ಕಥೆಯುಳ್ಳ ಕಾದಂಬರಿ ಎಂದರೆ ತುಂಬಾ ಇಷ್ಟ. ಮನೆಯ ಹತ್ತಿರದ ಗ್ರಂಥಾಲಯದಲ್ಲಿ ತುಂಬಾ ವರ್ಷಗಳಿಂದ ಸದಸ್ಯತ್ವ ತೆಗೆದುಕೊಂಡು, ಸಕ್ರಿಯಳಾಗಿದ್ದಾಳೆ. ಅಲ್ಲಿಂದ ವಾರ ವಾರವೂ ಪುಸ್ತಕಗಳನ್ನು ತಂದು ಓದುವಳು. ಹಿಂದಿನ ಕಾದಂಬರಿಗಾರ್ತಿಯರ ಕಾದಂಬರಿಗಳಿಂದ ಹಿಡಿದು,ಈಗಿನ ಕಾಲದ ಕಾದಂಬರಿಯವರೆಗೂ ಇಷ್ಟಪಟ್ಟು ಓದುವಳು. ಆದರೆ, ಈಗ ಏಕೋ ಕಾದಂಬರಿಯಲ್ಲಿ ಮನಸ್ಸು ನಿಲ್ಲುತ್ತಿಲ್ಲ. ಅವಳೇ ಇಷ್ಟಪಟ್ಟು ಆರಿಸಿ ತಂದ ಕಾದಂಬರಿ ಬುಕ್ ಅದು. ಇವತ್ತು ಅವಳ ಮನಸ್ಸು ಮತ್ತೆಲ್ಲೊ ಇದೆ,ನೆಮ್ಮದಿ ಇಲ್ಲ. ನಿರಾಸೆ, ಬೇಸರ ಕಾಡುತ್ತಿದೆ.
ಇದಕ್ಕೆ ಕಾರಣ ಅವಳ ಏಕೈಕ ಮಗಳು ಸುಧಾ. ಸುಮತಿಗೆ ಈಗ ಕುಳಿತಲ್ಲಿ ನಿಂತಲ್ಲಿ ಸುಧಾ ಬಗ್ಗೇನೇ ಚಿಂತೆ. ಸುಧಾಗೆ ಈಗ ಇಪ್ಪತ್ತೆಂಟು ವರ್ಷ. ಅವಳಿಗಿನ್ನೂ ಮದುವೆಯಾಗಿಲ್ಲ ಎನ್ನುವುದೇ ಸುಮತಿಯ ಚಿಂತೆ. ಸುಧಾಗೆ ಏನೂ ಕಡಿಮೆಯಿಲ್ಲ, ರೂಪ,ವಿದ್ಯೆ,ಕಾಲೇಜೊಂದರಲ್ಲಿ ಉಪನ್ಯಾಸಕಿ ಹುದ್ದೆ ಎಲ್ಲವೂ ಇದೆ. ಯಾವುದೇ ವರ ಬಂದರೂ ಬೇಡ ಎನ್ನುವುದಕ್ಕೆ ಕಾರಣವೇ ಇಲ್ಲ. ಈಗ ಸಮಸ್ಯೆ ಬಂದಿರುವುದು ಹುಡುಗನ ಕಡೆಯಿಂದಲ್ಲ, ಸುಧಾನೇ ಕಾರಣ. ಅವಳು ಮತ್ತು ಅವಳ ಅಪ್ಪ ಆನಂದರಾಯರು ಯಾವುದೇ ಸಂಬಂಧ ಬಂದರೂ ಆ ವರನಲ್ಲಿ ಏನಾದರೂ ಕುಂದುಕೊರತೆ ಹುಡುಕಿ ತೆಗೆದು ನಿರಾಕರಿಸುತ್ತಲೇ ಬಂದಿದ್ದರು.
ಅವಳ ಅಕ್ಕ ಸುನಂದಾ ಹೇಳಿದಂತೆ ಒಬ್ಬ ಇಂಜಿನಿಯರ್ ವರನ ಸಂಬಂಧವನ್ನು ಹುಡುಕಿ ಸುಮತಿಗೆ ತಿಳಿಸಿದಳು. ಹುಡುಗನ ಫೋಟೋ ನೋಡಿ ಅಪ್ಪ-ಮಗಳು ಇಬ್ಬರೂ ಯಾವುದೇ ತಕರಾರು ಇಲ್ಲದೆ ಒಪ್ಪಿಕೊಂಡರು. ಇಂಜಿನಿಯರ್ ಆದಿತ್ಯ ಕೆನಡಾದಲ್ಲಿರುವುದು ಎಂದು ಸುಧಾ ಫಾರಿನ್ ಕನಸು ಕಾಣಲಾರಂಭಿಸಿದಳು. ಆದರೆ ಆ ಕನಸು ಗರಿಗೆದರುವುದಕ್ಕೂ ಮುನ್ನವೇ ರೆಕ್ಕೆ ಮುರಿದುಕೊಂಡಿತು!
ಸುಮತಿಯ ಗೆಳತಿ ಮನೋರಮಾಗೆ ಒಬ್ಬ ಮಗನಿದ್ದನು. ರಾಜೇಶ್, ಬ್ಯಾಂಕೊಂದರಲ್ಲಿ ಉದ್ಯೋಗಿ. ಸುಮತಿಗೆ ಸುಧಾನ ರಾಜೇಶ್ ಗೆ ಕೊಡಬೇಕು ಅಂತ ತುಂಬಾ ಆಸೆಯಿತ್ತು. ರಾಜೇಶ್ ತುಂಬಾ ಸಭ್ಯ ಮತ್ತು ಸೌಮ್ಯ ಹುಡುಗ. ಜೊತೆಗೆ, ಚಿಕ್ಕ ಇದ್ದಾಗಿನಿಂದಲೂ ನೋಡಿದ ಹುಡುಗ ಎನ್ನುವ ಅಭಿಪ್ರಾಯ. ಆದರೆ, ಈ ಅಪ್ಪ- ಮಗಳಿಗೆ ಆತನನ್ನು ಕಂಡರೆ ಮೊದಲಿನಿಂದಲೂ ಅಷ್ಟಕ್ಕಷ್ಟೆ. ಅದಕ್ಕೆ ಕಾರಣ, ರಾಜೇಶ್ ಸುಧಾಳ ತರ ರ್ಯಾಂಕ್ ಸ್ಟೂಡೆಂಟ್ ಅಲ್ಲ ಎನ್ನುವುದು. ಅದೂ ಸಾಲದೆ, ಈಗ ಅಪ್ಪ ಅಮ್ಮನೂ ಆತನ ಜೊತೆಗೆ ಇದ್ದಾರೆ ಎನ್ನುವ ನೆಪ ಬೇರೆ ಸೇರಿಕೊಂಡಿತ್ತು.
ಫಾರಿನ್ ಗೆ ಹೋಗುತ್ತಾ- ಬರುತ್ತಾ ಇರುವ ಇಂಜಿನಿಯರ್ ವರನೇ ಬೇಕು ಎನ್ನುವ ಹಠ ಸುಧಾ ಮತ್ತು ಅವಳ ಅಪ್ಪನದು. ಸುಮತಿಗೋ ಹೇಳಿ ಸಾಕಾಗಿತ್ತು. ಈಗ ಅದೇ ಒಂದು ತಲೆನೋವಾಗಿತ್ತು. ಅವಳ ಅಕ್ಕ ಸುನಂದಾ ನಿವೃತ್ತ ಉಪನ್ಯಾಸಕಿ. ಅವರು ತಮ್ಮ ಮಗಳನ್ನು ಲಂಡನ್ನಿನಲ್ಲಿರುವ ವರನಿಗೆ ಮದುವೆ ಮಾಡಿಕೊಟ್ಟಿದ್ದರು. ಆದ್ದರಿಂದಲೇ, ಸಮಯ ಸಿಕ್ಕಾಗಲೆಲ್ಲ ಸುಧಾಗೆ ಫೋನ್ ಮಾಡಿ, "ಹಳ್ಳಿ ಮನೆ,ಅತ್ತೆ-ಮಾವ ಇರುವ ಮನೆ, ದನ-ಕರು, ತೋಟ-ಗದ್ದೆ ಎಲ್ಲಾ ಇರುವ ಮನೆತನದ ಸಂಬಂಧಗಳನ್ನು ಒಪ್ಪಿಕೊಳ್ಳಬೇಡ.ಫಾರಿನ್ ರಿಟರ್ನ್ ಸಂಬಂಧಾನ ನಾನು ನೋಡುತ್ತೇನೆ ನಿನಗೆ" ಅಂತ ಹೇಳಿ ತಲೆ ಕೆಡಿಸಿಟ್ಟಿದ್ದರು.
ಸುಮತಿಗೆ ಇರುವ ಒಬ್ಬಳೇ ಮಗಳು ಕಣ್ಮುಂದೆನೇ ಇರಲಿ ಎನ್ನುವ ಆಸೆ. " ಅವಳೊಬ್ಬಳು,ಮಾಡುವುದಕ್ಕೆ ಬೇರೆ ಕೆಲಸ ಇಲ್ಲ ಅಂತ ಈಗ ಬ್ರೋಕರ್ ಕೆಲಸಕ್ಕೆ ಕೈ ಹಾಕಿದಾಳಾ?" ಅಂತ ಮನಸ್ಸಿನಲ್ಲೇ ಅಕ್ಕನನ್ನು ಬೈದುಕೊಳ್ಳುವಳು. ಅಂತೂ, ಅವಳ ಅಕ್ಕ ಸುನಂದಾ ಹೇಳಿದಂತೆ ಒಬ್ಬ ಇಂಜಿನಿಯರ್ ವರನ ಸಂಬಂಧವನ್ನು ಹುಡುಕಿ ಸುಮತಿಗೆ ತಿಳಿಸಿದಳು. ಹುಡುಗನ ಫೋಟೋ ನೋಡಿ ಅಪ್ಪ-ಮಗಳು ಇಬ್ಬರೂ ಯಾವುದೇ ತಕರಾರು ಇಲ್ಲದೆ ಒಪ್ಪಿಕೊಂಡರು. ಇಂಜಿನಿಯರ್ ಆದಿತ್ಯ ಕೆನಡಾದಲ್ಲಿರುವುದು ಎಂದು ಸುಧಾ ಫಾರಿನ್ ಕನಸು ಕಾಣಲಾರಂಭಿಸಿದಳು. ಸುಮತಿಗೋ ಮಗಳು ದೂರ ಹೋಗುತ್ತಾಳೆ ಎನ್ನುವುದಕ್ಕಿಂತ ಹುಡುಗನನ್ನು ಕುಂದು-ಕೊರತೆ ಹೇಳದೆ ಒಪ್ಪಿಕೊಂಡಳಲ್ಲ ಎನ್ನುವ ಸಮಾಧಾನ. ಇಷ್ಟವಿಲ್ಲದಿದ್ದರೂ, ಏನೂ ಹೇಳದೆ ಸುಮ್ಮನಾದಳು.
ವರನ ಕಡೆಯವರು ಹುಡುಗಿ ನೋಡಲು ಮನೆಗೆ ಬಂದಿದ್ದರು, ಹುಡುಗನ ಅಪ್ಪ-ಅಮ್ಮ ಅಕ್ಕ, ಬಂದಿದ್ದರು. ಬಂದವರನ್ನು ಸುಮತಿ ಮತ್ತು ಆನಂದರಾಯರು ಬಹಳ ಗೌರವದಿಂದ ಮತ್ತು ಒಂದಷ್ಟು ಟೆನ್ಶನ್ನಿನಿಂದಲೇ ಉಪಚರಿಸಿದರು. ಕಾಫಿ-ತಿಂಡಿ ಮುಗಿದರೂ, ಹುಡುಗನ ಪತ್ತೆಯೇ ಇರಲಿಲ್ಲ. ಆದಿತ್ಯ ಎಲ್ಲಿ ಹೋದ, ಮನೆವರೆಗೂ ಬಂದವನು ಒಳಗೆ ಬರಲಿಲ್ಲವಲ್ಲ? ಎಂದು ಎಲ್ಲರೂ ಗಾಬರಿಯಾದರು. ಆನಂದರಾಯರು ತಮ್ಮ ಆಳಿನ ಜೊತೆ ಹುಡುಕುತ್ತಾ ಹೋದರು.
ಆದಿತ್ಯ, ಊರಿನ ಮಧ್ಯೆ ಇದ್ದ. ಊರಿನ ವ್ಯವಸಾಯದ ನೀರಾವರಿಯ ಉದ್ದೇಶಕ್ಕೆಂದು ಮಾಡಿದ್ದ ಕೆರೆಯೊಂದರಲ್ಲಿ ಕೆಲವು ಮಕ್ಕಳ ಜೊತೆ ಈಜಾಡುತ್ತಿದ್ದ. ಆನಂದರಾಯರು ನೋಡಿ ಬಲವಂತದಿಂದ ಮನೆಗೆ ಕರೆತಂದರು. " ಹಿಂದೆ ಕುರುಕ್ಷೇತ್ರದಲ್ಲಿ ದುರ್ಯೋಧನ ಭೀಮನಿಗೆ ಹೆದರಿ ವೈಶಂಪಾಯನ ಸರೋವರದಲ್ಲಿ ಅಡಗಿ ಕುಳಿತಿದ್ದನಂತೆ, ಹಾಗೆ ವ ಊರಿನ ಕೆರೆಯಲ್ಲಿ ಅಡಗಿ ಕುಳಿತುಕೊಳ್ಳುವುದಾ?" ಎಂದು ಸುಮತಿಗೆ ಟೆನ್ಷನ್, ಗಾಬರಿಯ ಮನಸ್ಥಿತಿಯಲ್ಲೂ ನಗು ಉಕ್ಕಿತು. ಮಾತುಕತೆಯೆಲ್ಲಾ ಮುಗಿದು ನಿರ್ಧಾರವಾಯಿತು.
ವರನ ಕಡೆಯವರು ಆದಿತ್ಯನಿಗೆ ರಜೆ ಇಲ್ಲ, ಬೇಗ ಕೆನಡಾಕ್ಕೆ ಹೋಗಬೇಕು ಎಂದು ಅವಸರಿಸಿ ಹತ್ತಿರದ ಮುಹೂರ್ತದಲ್ಲೇ ದಿನ ನಿಗದಿ ಮಾಡಿದರು.
ಇದಾಗಿ ಒಂದೆರಡು ದಿನ ಕಳೆದಿರಬೇಕು, ಸುಧಾಳ ಮೊಬೈಲ್ ಗೆ ಅನ್ನೋನ್ ನಂಬರ್ನಿಂದ ಒಂದು ಕಾಲ್ ಬಂದಿತು.ಆ ಕಡೆಯಿಂದ ಒಂದು ಹೆಣ್ಣು ಧ್ವನಿ ಕೇಳಿಸಿತು. ಸುಧಾ ಗಾಬರಿಯಿಂದಲೇ ವಿಚಾರಿಸಿದಾಗ, ಅವಳು "ನಾನು ನೇಹಾ ಅಂತ, ನಾನು ಆದಿತ್ಯ ತುಂಬಾ ಪ್ರೀತಿಸ್ತಿದ್ದೇವೆ. ನಾವು ಕೆನಡಾದಲ್ಲಿ ಒಟ್ಟಾಗಿ ಇರುವುದು. ನಮ್ಮದು ಬೇರೆ ಜಾತಿ ಅಂತ ಅವರ ಅಪ್ಪ ಅಮ್ಮ ನನ್ನನ್ನು ಒಪ್ಪಿಕೊಳ್ತಾ ಇಲ್ಲ. ನಿಮ್ಮ ಸಂಬಂಧ ಮಾಡ್ತಿದಾರೆ ಅಂತ ತಿಳೀತು. ನೀನು ಆದಿತ್ಯನ ಮದುವೆಯಾಗಿ ಅವರ ಅಪ್ಪ-ಅಮ್ಮನ ಸೇವೆ ಮಾಡ್ತಾ ಇಂಡಿಯಾದಲ್ಲೇ ಇರ್ತೀಯೋ? ಅಥವಾ ಬೇರೆ ಹುಡುಗನ್ನ ಮದುವೆಯಾಗಿ ಸಂತೋಷವಾಗಿ ಇರ್ತಿಯೋ? ನೀನೆ ಡಿಸೈಡ್ ಮಾಡು" ಅಂತ ಹೇಳಿ ಕಾಲ್ ಕಟ್ ಮಾಡಿದಳು.
ಸುಧಾಗೆ ದುಃಖ ಒತ್ತರಿಸಿ ಬಂತು. ಕನಸು ‘ಒಡೆದುಹೋದ ಕನ್ನಡಿ’ಯಾಯಿತು. ಆನಂದರಾಯರು " ಮುಗ್ಧ ಹುಡುಗಿಯರಿಗೆ ಮೋಸ ಮಾಡೋ ಇಂತವರಿಗೆ ಸರಿಯಾಗಿ ಬುದ್ಧಿ ಕಲಿಸುತ್ತೇನೆ." ಅಂತ ಹಾರಾಡಿದರು. ಆದರೆ, ಸುಮತಿ ಸಮಾಧಾನ ಚಿತ್ತದಿಂದ ಅಪ್ಪ ಮಗಳನ್ನು ಮಾಡಿದಳು,"ಫಾರಿನ್ ಕನಸನ್ನು ಬಿಡು, ಫಾರಿನ್ ನಲ್ಲಿ ಇಂಜಿನಿಯರ್ ಎಂದು ಹೇಳುವ ಇಂತವರಿಗೆ ಸಂಸ್ಕಾರ ಇರುವುದಿಲ್ಲ. ಹೆಣ್ಣು ಮಕ್ಕಳ ಬಗ್ಗೆ ಅಂತೂ ಬದ್ಧತೆಯಾಗಲಿ, ಗೌರವವಾಗಲಿ ಇರುವುದಿಲ್ಲ. ಇಂತವರಿಗಿಂತ ನಮ್ಮ ರಾಜೇಶ್ ಎಷ್ಟೋ ಪಾಲು ಮೇಲಲ್ಲವಾ?" ಎಂದು ಕೇಳಿದಳು. ಸುಧಾಗೂ, ಆನಂದರಾಯರಿಗೂ ನಿಜ ಎನಿಸಿರಬೇಕು. ಮಾರನೆ ದಿನವೇ ಆನಂದರಾಯರು ರಾಜೇಶ್ ನ ಅಪ್ಪ ಅಮ್ಮನ ಹತ್ತಿರ ಮದುವೆ-ಮಾತುಕತೆ ಆಡಿ ಬರೋಣ ಬಾ ಎಂದು ಸುಮತಿಯನ್ನು ಕರೆದರು.
***
ಮಗಳು ಈಗ ಮದುವೆಯಾಗಿ ಸುಖವಾಗಿದ್ದಾಳೆ, ಸುಮತಿ ಮತ್ತೆ ಕಾದಂಬರಿ ಓದಿನಲ್ಲಿ ಖುಷಿ ಕಾಣುತ್ತಿದ್ದಾಳೆ.
❍ ಶಾಂತಿ ಮಾಧವ
ಗೃಹಿಣಿ. ಮಕ್ಕಳು, ಮನೆ, ತೋಟದ ನಡುವೆ ಬಿಡುವು ಸಿಕ್ಕಾಗ ಓದು-ಬರಹದಲ್ಲಿ ಸಮಯ ಕಳೆಯುವ ಖುಷಿ. ಇತ್ತೀಚೆಗೆ ಬರೆಯಲು ಆರಂಭಿಸಿರುವ ಇವರ ಕೆಲವು ಕತೆಗಳು ರಾಜ್ಯಮಟ್ಟದ ವಾರಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.


No comments:
Post a Comment