ಮೋದಿಗೆ ನೀರು ಕುಡಿಸಿದ್ದ ಕರಣ್ ಥಾಪರ್!


ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಹಿಂದಿಯ ಜೀ ನ್ಯೂಸ್ ಮತ್ತು ಇಂಗ್ಲೀಷ್ನ ಟೈಮ್ಸ್ ನವ್ ವಾಹಿನಿಗಳಿಗೆ ಸಂದರ್ಶನ ನೀಡಿದರು. ಮೋದಿ ಏನೇ ಮಾಡಿದರೂ ಕಾಲೆಳೆಯುವ ಮಂದಿ ಈ ಬಾರಿಯೂ ಒಂದಿಷ್ಟು ತಗಾದೆ ತೆಗೆದರು. ಮುಖ್ಯವಾಗಿ ಎರಡು ತಕರಾರುಗಳಿದ್ದವು.

  • ಮೋದಿ ಯಾಕೆ ಪತ್ರಿಕಾಗೋಷ್ಠಿ ಕರೆದು ಮುಕ್ತ ಪ್ರಶ್ನೋತ್ತರಕ್ಕೆ ಅವಕಾಶ ಕೊಡಲ್ಲ?
  • ಸರ್ಕಾರದ ಪರ ಇವೆ ಎಂದು ಈಗಾಗಲೇ ಸಾಬೀತಾಗಿರುವ ಚಾನೆಲ್ಗಳಿಗೆ ಮಾತ್ರ ಯಾಕೆ ಸಂದರ್ಶನ ನೀಡ್ತಾರೆ?

ಈ ಎರಡು ಪ್ರಶ್ನೆಗಳಲ್ಲೂ ಹುರುಳಿದೆ; ಮನಮೋಹನ್ ಸಿಂಗ್ರನ್ನು ಮಾತು ಬಾರದ ಮೌನಿ ಅಂತೆಲ್ಲ ಚುನಾವಣಾ ಸಭೆಗಳಲ್ಲಿ ಹಂಗಿಸಿ ಎದೆ ತಟ್ಟಿಕೊಳ್ಳುತ್ತಿದ್ದ ಮೋದಿಗೆ, ಪತ್ರಿಕಾಗೋಷ್ಠಿ ಎದುರಿಸಿ ಮಾತನಾಡೋಕೆ ಯಾಕೆ ಭಯ? ಕಳೆದ ನಾಲ್ಕು ವರ್ಷಗಳಲ್ಲಿ ‘ಅಭಿವೃದ್ಧಿ’ಯೊಂದನ್ನು ಬಿಟ್ಟು ಬೇರೇನನ್ನೂ ಮಾಡದ ಮೋದಿ, ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರಿಗೆ ತಮ್ಮ ಆಡಳಿತದ ಸಾಧನೆಗಳನ್ನು ಮನದಟ್ಟು ಮಾಡಿಸಲು ಹಿಂಜರಿಯುತ್ತಿರುವುದು ನಿಜಕ್ಕೂ ವಿಚಿತ್ರ!

ಎರಡನೇ ಪ್ರಶ್ನೆ ಒಂದಿಷ್ಟು ಅಸಮಂಜಸ. ಯಾವ ಮಾಧ್ಯಮಕ್ಕೆ ಸಂದರ್ಶನ ನೀಡಬೇಕು ಎಂಬುದು ಪ್ರಧಾನಿಯವರ ವಿವೇಚನೆಗೆ ಬಿಟ್ಟದ್ದು ಮತ್ತು ಅವರು ಯಾವ ಮಾಧ್ಯಮದ ಮೂಲಕ ಮಾತನಾಡಿದರೂ ಅದು ದೇಶದ ಜನರನ್ನು ತಲುಪುತ್ತದೆ. ಹಾಗಾಗಿ ಈ ವಿಷಯಕ್ಕೆ ಸಂಬಂಧಿಸಿ ಮೋದಿಯವರತ್ತ ಬೆರಳು ಮಾಡುವುದು ತಪ್ಪು.

ವೃತ್ತಿಧರ್ಮ ಮರೆತಿರುವ ಪತ್ರಕರ್ತರು

ಪ್ರಧಾನಿ ವಿಷಯ ಹಾಗಿರಲಿ; ಪತ್ರಕರ್ತರಿಗೆ ಸಂಬಂಧಿಸಿದ ವಿಷಯ ಒಂದಿದೆ. ಸಂದರ್ಶನ ಮಾಡುವಾಗ ಪತ್ರಕರ್ತ ಪೂರ್ವ ಸಿದ್ಧತೆ ಮಾಡಿಕೊಂಡಿರಬೇಕು ಮತ್ತು ಸಂದರ್ಶನ ನೀಡುತ್ತಿರುವ ವ್ಯಕ್ತಿಯನ್ನು ನೇರ, ನಿಷ್ಠುರ ಪ್ರಶ್ನೆಗಳ ಮೂಲಕ ಓದುಗ/ ನೋಡುಗನೆದುರು ತೆರೆದಿಡಬೇಕು ಅನ್ನೋದು ಪತ್ರಿಕಾವೃತ್ತಿಯ ಅಲಿಖಿತ ನಿಯಮ. ಆದ್ರೆ ಅದನ್ನು ಬಹುತೇಕ ಮಂದಿ ಪಾಲಿಸುತ್ತಿಲ್ಲ ಅನ್ನೋದೂ ಅಷ್ಟೇ ಸತ್ಯ. ರಾಹುಲ್ ಗಾಂಧಿಯೆದುರು ದನಿ ಎತ್ತರಿಸಿ ಸವಾಲುಗಳ ಸುರಿಮಳೆಗೈದಿದ್ದ ಪತ್ರಕರ್ತ ಅರ್ಣಬ್ ಗೋಸ್ವಾಮಿ ಕೂಡ ಕಳೆದ ವರ್ಷ ಮೋದಿ ಸಂದರ್ಶನ ಮಾಡುವ ವೇಳೆ ಮುದ್ದಿನ ಬೆಕ್ಕಿನಂತೆ ಕಾಲು ಸುತ್ತುತ್ತಿದ್ದರು! ಈ ಬಾರಿ ಜೀನ್ಯೂಸ್ನ ಸುಧೀರ್ ಚೌಧರಿಯ ಪ್ರಶ್ನೋತ್ತರ ಕಾರ್ಯಕ್ರಮವೂ ಸರಿಸುಮಾರು ಹಾಗೇ ಇತ್ತು.

ಥಾಪರ್ ಪ್ರಶ್ನೆಗೆ ಕಿಡಿಯಾಗಿದ್ದ ಮೋದಿ

ಈ ಎಲ್ಲ ಸದ್ದಿನ ಮಧ್ಯೆ ಮೋದಿ ಪ್ರಧಾನಿಯಾಗುವುದಕ್ಕೂ ಮುನ್ನ ಕರಣ್ ಥಾಪರ್ ನಡೆಸಿದ್ದ ಸಂದರ್ಶನವೊಂದರ ದೃಶ್ಯ ಈಗ ಮತ್ತೆ ಸಾಮಾಜಿಕ ತಾಣಗಳಲ್ಲಿ ಹಂಚಿಕೆಯಾಗುತ್ತಿದೆ. 2007ರ ಅಕ್ಟೋಬರ್ನಲ್ಲಿ ನಡೆಸಲಾಗಿರುವ ಈ ಸಂದರ್ಶನದಲ್ಲಿ, "2002ರ ಗೋಧ್ರೋತ್ತರ ಗಲಭೆ ಸಂದರ್ಭ ನೀವು ಕೈಕಟ್ಟಿ ಕೂತಿದ್ದಿರಿ ಅನ್ನೋ ಆರೋಪ ಇದೆಯಲ್ಲ?" ಅಂತ ಕರಣ್ ಥಾಪರ್ ಕೇಳುತ್ತಾರೆ. ಅದಕ್ಕೆ ಮೋದಿ, "ನಾನೇನು ಹೇಳಬೇಕೋ ಅದೆಲ್ಲವನ್ನು ಹೇಳಿ ಆಗಿದೆ, ಸುಪ್ರೀಂಕೋರ್ಟ್ ಕ್ಲೀನ್ಚಿಟ್ ಕೊಟ್ಟೂ ಆಗಿದೆ" ಅನ್ನುತ್ತಾರೆ. ಥಾಪರ್ ಅಲ್ಲಿಗೆ ನಿಲ್ಲಿಸೋದಿಲ್ಲ. "ನಿಮ್ಮ ಒಳ್ಳೆಯ ಆಡಳಿತಕ್ಕೆ ಈ ದಂಗೆ ಒಂದು ಕಪ್ಪು ಚುಕ್ಕೆ ಆಗ್ತಿದೆ ಅನಿಸೋದಿಲ್ಲವೇ? ನೀವ್ಯಾಕೆ ಈ ಬಗ್ಗೆ ಸ್ಪಷ್ಟನೆ ನೀಡಬಾರದು?" ಅಂತ ಕೇಳ್ತಾರೆ. ಇದರಿಂದ ವಿಚಲಿತರಾಗುವ ಮೋದಿ, ಮೊದಲು ಬ್ರೇಕ್ ತಗೋತೀನಿ ಅಂತಾರೆ. ನೀರು ಕುಡೀತಾರೆ. ಆಮೇಲೆ ಲ್ಯಾಪೆಲ್ (ಅಂಗಿಗೆ ಸಿಕ್ಕಿಸಿಕೊಳ್ಳುವ ಸಣ್ಣ ಮೈಕ್) ತೆಗೆದು ಸಂದರ್ಶನ ಅರ್ಧಕ್ಕೆ ನಿಲ್ಲಿಸಿ ಎದ್ದುಹೋಗ್ತಾರೆ.

ಸಿನಿಮಾದಲ್ಲಿತ್ತು ಸಂದರ್ಶನ ಹೋಲುವ ದೃಶ್ಯ!

ಒಂದು ವಿಚಿತ್ರ ಸಾಮ್ಯತೆ ಅಂದ್ರೆ, ಶಂಕರ್ ನಿರ್ದೇಶನದ ನಾಯಕ್ ಸಿನಿಮಾದಲ್ಲೂ ಇದನ್ನೇ ಹೋಲುವ ಒಂದು ದೃಶ್ಯವಿದೆ. ಅಲ್ಲಿ ಮುಖ್ಯಮಂತ್ರಿ ಪಾತ್ರಧಾರಿ ಅಮರೀಶ್ ಪುರಿಯನ್ನು ಪತ್ರಕರ್ತ ಪಾತ್ರಧಾರಿ ಅನಿಲ್ ಕಪೂರ್ ಸಂದರ್ಶನ ಮಾಡ್ತಿರ್ತಾರೆ. "ದಂಗೆ ನಡೀತಿದ್ರೂ ನೀವು ಸುಮ್ಮನಿದ್ರಿ, ಯಾಕಂದ್ರೆ ನಿಮಗೆ ನಿಮ್ಮ ಕುರ್ಚಿ ಭದ್ರಪಡಿಸಿಕೊಳ್ಳೋದಷ್ಟೇ ಮುಖ್ಯವಾಗಿತ್ತು. ದಂಗೆ ನಿಯಂತ್ರಿಸೋದಕ್ಕೆ ಯಾವುದೇ ಪ್ರಯತ್ನ ಮಾಡಲಿಲ್ಲ. ಬದಲಾಗಿ ದಂಗೆ ಇನ್ನಷ್ಟು ಹೆಚ್ಚೋದಕ್ಕೆ ಪ್ರಚೋದನೆ ಕೊಟ್ರಿ" ಅಂತ ಪತ್ರಕರ್ತ ಕೇಳಿದಾಗ ಬೆವರುವ ಮುಖ್ಯಮಂತ್ರಿ, ನೀರು ಕುಡಿದು ಬಾಯಿ ಮುಚ್ಚುವಂತೆ ಸನ್ನೆ ಮಾಡುತ್ತಾರೆ. ಅಂದಹಾಗೆ ಈ ಸಿನಿಮಾ ಬಿಡುಗಡೆಯಾಗಿದ್ದು 2001ರಲ್ಲಿ. ಗೋಧ್ರೋತ್ತರ ದಂಗೆಗೂ ಮುಂಚೆ.

ಸಿನಿಮಾದ ದೃಶ್ಯ ಮತ್ತು ಮೋದೀಜಿ ಸಂದರ್ಶನದ ಒಂದು ದೃಶ್ಯಾವಳಿ ಇಲ್ಲಿದೆ ನೋಡಿ.
(ಕನ್ನಡ ಸಬ್‌ಟೈಟಲ್‌ಗಳಿಗೆ ಸಿಸಿ ಬಟನ್ ಪ್ರೆಸ್‌ ಮಾಡಿ)

❍ ರವಿ ದೇವಳಿ

No comments:

Post a Comment