ತಲೆಕೂದಲು ಬಿಳಿಯಾಗುವುದಿಲ್ಲ, ಬಣ್ಣ ಕಳಕೊಳ್ಳುತ್ತದೆ!

ವಯಸ್ಸು ಮೂವತ್ತೈದರ ಗಡಿ ದಾಟುತ್ತಿದ್ದ ಹಾಗೆ ತಲೆಗೂದಲಲ್ಲಿ, ಗಂಡಸರಿಗೆ ಗಡ್ಡ ಮೀಸೆಯಲ್ಲಿ ಅಲ್ಲೊಂದು ಇಲ್ಲೊಂದು ಬಿಳಿ ಕೂದಲುಗಳು ಹಣಕಿ ಹಾಕೋಕೆ ಶುರು ಮಾಡ್ತವೆ. ಆ ಒಂದೆರಡು ಕೂದಲಿಗೆ ಕತ್ತರಿ ಪ್ರಯೋಗ ಮಾಡಿ ಸಮಾಧಾನ ಮಾಡಿಕೊಳ್ತೀರಿ. ವರ್ಷ ಕಳೆಯುವಷ್ಟರಲ್ಲಿ ಒಂದೆರಡು ಗುಣಾಕಾರವಾಗಿ ಹತ್ತಾರು ಆಗಿರುತ್ತೆ! ಆ ಹೊತ್ತಿಗೆ ಕತ್ತರಿ ಪ್ರಯೋಗ ಮಾಡಿ ಮಾಡಿ ಸುಸ್ತೂ ಆಗಿರುತ್ತೆ. ಹೇರ್‌ಡೈ ಅನ್ನೋ ದಿವ್ಯ ದ್ರವ್ಯ ಒಂದಿಲ್ಲದೇ ಹೋಗಿದ್ದರೆ ಬಹುತೇಕರು ಬಿಳಿಕೂದಲಿನ ಕೊರಗಿನಲ್ಲಿ ಮತ್ತಷ್ಟು ಕೂದಲು ಬೆಳ್ಳಗೆ ಮಾಡಿಕೊಳ್ತಿದ್ದರು!
ವಯಸ್ಸಾದಂತೆ ಕೂದಲು ಬಿಳಿ ಬಣ್ಣಕ್ಕೆ ಬದಲಾಗುತ್ತೆ ಅನ್ನೋದು ನಮ್ಮ ಸಾಮಾನ್ಯ ನಂಬಿಕೆ. ಆದ್ರೆ ಅಸಲಿಗೆ ಮೂಲತಃ ಕೂದಲು ಇರೋದೇ ಬೆಳ್ಳಗೆ! ಅದು ಕಪ್ಪು, ಅಥವಾ ಕೆಲ ಫಾರಿನರ್ಸ್‌ಗೆ ಇರೋ ಹಾಗೆ ಕೆಂಪು ಅಥವಾ ಹೊಳಪುಳ್ಳ ಕಲರ್‌ನಲ್ಲಿ ಕಾಣೋದಕ್ಕೆ ಮೆಲನಿನ್‌ ಅನ್ನೋ ರಾಸಾಯನಿಕ ಕಾರಣ.
ಬೆಂಕಿ ಗಡ್ಡ!
ಬಿಳಿಕೂದಲು ಸಹಜವಾಗಿ ವಯಸ್ಸಿನ ಮಾನದಂಡವಾಗಿ ಪರಿಗಣನೆಯಾಗುತ್ತೆ ಮತ್ತು ತನಗೆ ವಯಸ್ಸಾಯಿತು ಅಂತ ಹೇಳಿಕೊಳ್ಳೋದಕ್ಕೆ ಹೆಚ್ಚಿನವರು ಹಿಂದೆ ಮುಂದೆ ನೋಡ್ತಾರೆ. ಅದರ ಪರಿಣಾಮವಾಗಿಯೇ ಹೇರ್‌ಡೈ ಉತ್ಪನ್ನಗಳಿಗೆ ಭರ್ತಿ ಬೇಡಿಕೆ. ಹೇರ್‌ಡೈಗಿಂತ ಕಡಿಮೆ ವೆಚ್ಚದ, ಕೆಮಿಕಲ್‌ ಇಲ್ಲದ ಮತ್ತು ಪಕ್ಕಾ ಇಂಡಿಯನ್‌ ವರ್ಷನ್‌ ಆದ ಮೆಹಂದಿ ಹಚ್ಚಿಕೊಂಡು ಕೆಲವರು ಕೂದಲನ್ನ ಬೆಂಕಿ ಕಲರ್‌ ಮಾಡಿಕೊಳ್ಳೋದೂ ಉಂಟು!
ವಯಸ್ಸಾದಂತೆ ಕೂದಲು ಬಿಳಿ ಬಣ್ಣಕ್ಕೆ ಬದಲಾಗುತ್ತೆ ಅನ್ನೋದು ನಮ್ಮ ಸಾಮಾನ್ಯ ನಂಬಿಕೆ. ಆದ್ರೆ ಅಸಲಿಗೆ ಮೂಲತಃ ಕೂದಲು ಇರೋದೇ ಬೆಳ್ಳಗೆ! ಅದು ಕಪ್ಪು, ಅಥವಾ ಕೆಲ ಫಾರಿನರ್ಸ್‌ಗೆ ಇರೋ ಹಾಗೆ ಕೆಂಪು ಅಥವಾ ಹೊಳಪುಳ್ಳ ಕಲರ್‌ನಲ್ಲಿ ಕಾಣೋದಕ್ಕೆ ಮೆಲನಿನ್‌ ಅನ್ನೋ ರಾಸಾಯನಿಕ ಕಾರಣ. ಮೆಲನಿನ್‌ ಅಂದ ತಕ್ಷಣ ನಿಮ್ಮಲ್ಲಿ ಕೆಲವರಿಗೆ ಚರ್ಮದ ಬಣ್ಣ ನೆನಪಿಗೆ ಬರಬಹುದು. ಚರ್ಮದ ಬಣ್ಣಕ್ಕೂ ಇದೇ ಮೆಲನಿನ್ ಕಾರಣ.

ವಯಸ್ಸಾದ ಹಾಗೆ ವರ್ಣಕೋಶಗಳು ಸಾಯ್ತವೆ

ತಲೆಕೂದಲಿನ ವಿಷ್ಯಕ್ಕೆ ಬರೋದಾದ್ರೆ, ತಲೆಯ ಚರ್ಮದ ಒಳಗೆ ಪ್ರತೀ ಕೂದಲೆಳೆಯ ಬುಡದಲ್ಲಿ ಫಾಲಿಕಲ್‌ ಅನ್ನೋ ಅಂಗಾಂಶ ಇರುತ್ತೆ. ಪ್ರತೀ ಫಾಲಿಕಲ್‌ನಲ್ಲೂ ಒಂದಿಷ್ಟು ವರ್ಣದ್ರವ್ಯದ ಕೋಶಗಳಿರ್ತವೆ. ಈ ಕೋಶಗಳು ನಿರಂತರವಾಗಿ ಮೆಲನಿನ್‌ ರಾಸಾಯನಿಕವನ್ನು ಉತ್ಪತ್ತಿ ಮಾಡ್ತವೆ. ಇದರಿಂದಾಗಿ ತಲೆಗೂದಲು ಕಪ್ಪು, ಕೆಂಪು, ಬ್ಲಾಂಡ್‌ ಇತ್ಯಾದಿ ಬಣ್ಣಗಳನ್ನು ಪಡೆದುಕೊಳ್ಳುತ್ತೆ. ವಯಸ್ಸು ನಲವತ್ತು ದಾಟುತ್ತಿದ್ದ ಹಾಗೆ ಫಾಲಿಕಲ್‌ನಲ್ಲಿರುವ ವರ್ಣದ್ರವ್ಯ ಕೋಶಗಳು ಕ್ರಮೇಣ ಸಾಯುತ್ತವೆ. ವರ್ಣದ್ರವ್ಯ ಕೋಶಗಳ ಸಂಖ್ಯೆ ಕಡಿಮೆಯಾದ ಹಾಗೆ ಮೆಲನಿನ್‌ ಉತ್ಪತ್ತಿಯ ಪ್ರಮಾಣವೂ ಕಡಿಮೆಯಾಗುತ್ತೆ. ವರ್ಣದ್ರವ್ಯ ಕೋಶಗಳು ಸಂಪೂರ್ಣ ನಶಿಸಿಹೋದ ಮೇಲೆ ಕೂದಲು ಪೂರ್ಣ ಬೆಳ್ಳಗೆ ಕಾಣುತ್ತೆ.

ಚಿಂತೆಗೂ ಬಣ್ಣಕ್ಕೂ ಇದೆಯಂತೆ ಕನೆಕ್ಷನ್‌

ಯೋಚ್ನೆ ಮಾಡೀ ಮಾಡಿ ತಲೆಕೂದ್ಲು ಉದುರಿಹೋಯ್ತು ಅಂತಾನೋ, ಕೂದಲೆಲ್ಲ ಬೆಳ್ಳಗಾಯ್ತು ಅಂತಾನೋ ಮಾತಿಗೆ ಹೇಳೋದಿದೆ. ಚಿಂತೆ ಅಥವಾ ಮಾನಸಿಕ ಒತ್ತಡ ಬೇರೆ ಬೇರೆ ಕಾಯಿಲೆಗಳಿಗೆ ಕಾರಣವಾಗೋ ಹಾಗೆ ಕೂದಲು ಬಣ್ಣ ಕಳೆದುಕೊಳ್ಳೋದಕ್ಕೂ ಕಾರಣವಾಗುತ್ತಾ? ಆ ಸಾಧ್ಯತೆ ಇದೆ. ಸುದೀರ್ಘ ಕಾಲ ನೀವು ಒತ್ತಡದಿಂದ ಬಳಲುತ್ತಿದ್ದರೆ ದೇಹದಲ್ಲಿ ಬಿಡುಗಡೆಯಾಗುವ ಒತ್ತಡ ನಿರೋಧಕ ಹಾರ್ಮೋನ್‌ ಕಾರ್ಟಿಸೋನ್‌ ಪ್ರಮಾಣ ಕಡಿಮೆಯಾಗುತ್ತದೆ. ಇದು ಮೆಲನಿನ್ ಕಡಿಮೆಯಾಗುವಿಕೆಗೆ ಸಮನಾದ ಪರಿಣಾಮವನ್ನೇ ಉಂಟುಮಾಡಿ ಕೂದಲು ಬೆಳ್ಳಗಾಗಿಸಬಹುದು. 

ಮೋದಿಯವರ ಬಿಳಿಗೂದಲು ಸ್ಫೂರ್ತಿಯಾಗಲಿ!

ಇನ್ನು ಕೆಲವರಿಗೆ 20 ವರ್ಷಕ್ಕೆ ಮುನ್ನವೇ ಕಪ್ಪು ಕೂದಲು ಬಣ್ಣ ಕಳಕೊಳ್ಳುವುದುಂಟು. ಅಂಥವರು ಹೇರ್‌ಡೈ ಮೊರೆಹೋಗದಿರುವುದೇ ಲೇಸು; ಯಾಕಂದ್ರೆ ಸುದೀರ್ಘ ಕಾಲದ ಹೇರ್‌ಡೈ ಬಳಕೆಯಿಂದ ಅಡ್ಡಪರಿಣಾಮಗಳೂ ಉಂಟು. ಇಷ್ಟಕ್ಕೂ ಕೂದಲು ಪೂರ್ಣ ಬೆಳ್ಳಗಾಗಿದ್ದರೆ ಅದಕ್ಕೆ ಬಣ್ಣ ಹಚ್ಚುವುದಕ್ಕಿಂತ ಹಾಗೇ ಬಿಡುವುದೇ ಉತ್ತಮ. ಹೇಗಿದ್ದರೂ ಸ್ಫೂರ್ತಿಯಾಗಿ ನಮ್ಮ ಪ್ರಧಾನಿ ಮೋದೀಜಿ ಇದ್ದಾರಲ್ಲ! 

❍ ರವಿ ದೇವಳಿ 
ಪತ್ರಕರ್ತ. ಸಾಹಿತ್ಯ, ವಿಜ್ಞಾನದಲ್ಲಿ ಆಸಕ್ತ. ದೈನಂದಿನ ಸಂಗತಿಗಳ ಹಿಂದಿರುವ ಕೆಲ ವೈಜ್ಞಾನಿಕ ಕೌತುಕಗಳನ್ನು ಸರಳವಾಗಿ ಸಿಂಪಲ್‌ ಸೈನ್ಸ್ ಮೂಲಕ ತೆರೆದಿಡಲಿದ್ದಾರೆ.

No comments:

Post a Comment