ತರಕಾರಿ ಬುಕ್ಕಿಂಗ್‌ನಿಂದ
ಹಿಡಿದು ಬ್ಯಾಂಕಿಂಗ್‌ನವರೆಗೆ ಎಲ್ಲ ಸೇವೆಗಳೂ ಇವತ್ತು ಇಂಟರ್ನೆಟ್ ಮೂಲಕ ಸಿಗ್ತವೆ. ಆದ್ರೆ ಸ್ವಲ್ಪ
ಎಚ್ಚರ ತಪ್ಪಿದ್ರೂ ಅದೇ ಇಂಟರ್ನೆಟ್ಟಿನ ಮೂಲಕ ಬ್ಯಾಂಕ್ ಅಕೌಂಟಿನ ಅಷ್ಟೂ ಹಣವನ್ನೂ ಕಳೆದುಕೊಳ್ಳುವ
ಅಪಾಯವೂ ಇದೆ!
ಸಾಮಾನ್ಯವಾಗಿ ನಿಮ್ಮ
ಕ್ರೆಡಿಟ್/ ಡೆಬಿಟ್ ಕಾರ್ಡ್ ಡಿಟೇಲ್ಸ್, ನೆಟ್ ಬ್ಯಾಂಕಿಂಗ್ ಯೂಸರ್ ಐಡಿ, ಪಾಸ್‌ವರ್ಡ್
ಇತ್ಯಾದಿ ಸೂಕ್ಷ್ಮ ಮಾಹಿತಿಗಳನ್ನು ಕಳ್ಳತನ ಮಾಡೋದಕ್ಕೆ ಮಾಲ್‌ವೇರ್ ಅನ್ನೋ ಕಂತ್ರಿ ತಂತ್ರಾಂಶಗಳನ್ನ
ಲಿಂಕುಗಳ ಮೂಲಕ ಹರಿಬಿಡುತ್ತಾರೆ. ಸಾಮಾನ್ಯವಾಗಿ ಇಂಥ ಲಿಂಕುಗಳು ಪೂರ್ಣರೂಪದಲ್ಲಿ ಇರೋದಿಲ್ಲ. Bit.ly
ಥರದ ವೆಬ್‌ಸೈಟುಗಳು ಉದ್ದೂದ್ದ ಲಿಂಕ್‌ಗಳನ್ನ ಚಿಕ್ಕದು ಮಾಡಿಕೊಡುತ್ತವಲ್ಲ? ಅಂಥ ಸೇವೆಗಳನ್ನ ಬಳಸಿ
ಖದೀಮರು ಕಳ್ಳ ಲಿಂಕುಗಳನ್ನು ಚಿಕ್ಕದು ಮಾಡಿರುತ್ತಾರೆ. ಹಾಗಾಗಿ ಆ ಲಿಂಕು ನೋಡಿದ ತಕ್ಷಣ ಅದು ಎಲ್ಲಿಗೆ ಕನೆಕ್ಟ್ ಆಗುತ್ತೆ?
ಯಾವ ವೆಬ್ ಸರ್ವರ್‌ಗೆ ಮಾಹಿತಿ ಕಳಿಸುತ್ತೆ ಅನ್ನೋದು ತಿಳಿಯೋದಿಲ್ಲ.
ಸಾಮಾನ್ಯವಾಗಿ ಇಂಥ
ಲಿಂಕುಗಳು ನೀವು ಬಯಸದಿರುವ ಇ-ಮೇಲ್‌ಗಳ ಮೂಲಕ ಬರ್ತವೆ. ಉದಾಹರಣೆಗೆ ನಿಮ್ಮ ಮಾಹಿತಿಯನ್ನು ನಿರ್ದಿಷ್ಟಪಡಿಸಿ
ಅನ್ನುವ ಒಕ್ಕಣೆಯ ಇ-ಮೇಲ್ ಬಂದಿರುತ್ತದೆ. ಮೇಲ್ನೋಟಕ್ಕೆ ಅದು ಬ್ಯಾಂಕ್‌ನಿಂದಲೇ ಬಂದಿರುವ ಮೇಲ್‌ನಂತೆಯೇ
ಕಂಡುಬರುತ್ತದೆ. ಹಾಗೆ ಕಂಡುಬಂದರೂ ಆ ಲಿಂಕನ್ನು ತಕ್ಷಣಕ್ಕೆ ಕ್ಲಿಕ್ ಮಾಡಬೇಡಿ. ಬ್ಯಾಂಕ್ ವ್ಯವಹಾರಗಳನ್ನು
ಬ್ಯಾಂಕ್ ಖಾತೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾತ್ರ ನಡೆಸಿ.
ಲಿಂಕ್‌ನಲ್ಲಿರುತ್ತೆ ವಿಚಿತ್ರ ಅಕ್ಷರಗಳ ಸರಣಿ
ಕಳ್ಳಲಿಂಕುಗಳನ್ನ
ಕಳಿಸುವ ಹ್ಯಾಕರ್‌ಗಳು ಆ ಲಿಂಕ್ ತಲುಪುವ ಗುರಿಯನ್ನು ಮರೆಮಾಚಿರುತ್ತಾರೆ. ಈ ಕಳ್ಳವಿದ್ಯೆಗೆ ಯೂಆರ್‌ಎಲ್
ಎನ್‌ಕೋಡಿಂಗ್ ಅಂತ ಹೆಸರು. ಉದಾಹರಣೆಗೆ A ಎಂಬ ಅಕ್ಷರದ ಯೂಆರ್‌ಎಲ್ ಎನ್‌ಕೋಡಿಂಗ್ ‘%41’ ಆಗಿರುತ್ತದೆ.
ಇಂಥ ಲಿಂಕುಗಳನ್ನು ಕ್ಲಿಕ್ ಮಾಡದೇ ಅವುಗಳ ಅಸಲಿಯತ್ತು ಪತ್ತೆ ಮಾಡೋದು ಹೇಗೆ? ಅದಕ್ಕೆ ಇಂಟರ್ನೆಟ್ಟಿನಲ್ಲೇ
ಕೆಲವು ಮಾರ್ಗಗಳಿವೆ.
ಲಿಂಕ್‌ಗಳನ್ನು ವಿಸ್ತರಿಸಿ ನೋಡಿ
ಲಿಂಕ್‌ಗಳನ್ನು ಸಣ್ಣದಾಗಿ
ಮಾಡುವ ವೆಬ್‌ಸೈಟ್‌ಗಳಿರುವಂತೆ ಅವುಗಳನ್ನು ವಿಸ್ತರಿಸಿ ತೋರಿಸುವ ವೆಬ್‌ಸೈಟ್‌ಗಳೂ ಇವೆ. ಅಂಥ ಒಂದು
ವೆಬ್‌ಸೈಟ್ Checkshorturl ಈ ತಾಣದಲ್ಲಿ ಅನುಮಾನಾಸ್ಪದ ಲಿಂಕನ್ನ ಕಾಪಿ ಪೇಸ್ಟ್ ಮಾಡುವ ಮೂಲಕ ಆ ಲಿಂಕ್‌ನ ಅಸಲಿಯತ್ತನ್ನು
ಪತ್ತೆ ಮಾಡಬಹುದು. ಇಂಥ ಲಿಂಕುಗಳ ಪತ್ತೆಗೆ Urlvoid Safeweb ಥರದ ಸಾಧನಗಳೂ ಇವೆ. ಇವುಗಳ ಮೂಲಕವೂ ಲಿಂಕುಗಳ ಸುರಕ್ಷತಾ ತಪಾಸಣೆ
ಮಾಡಿಕೊಳ್ಳಬಹುದು.
ಸುರಕ್ಷಿತ ಆನ್‌ಲೈನ್ ವಹಿವಾಟಿಗೆ ಕೆಲವು ಟಿಪ್ಸ್
- ಯಾವುದೇ ಅನುಮಾನಾಸ್ಪದ ಲಿಂಕ್‌ಗಳನ್ನ ಕ್ಲಿಕ್ ಮಾಡಿ ತೆರೆಯಬೇಡಿ
- ಆನ್‌ಲೈನ್‌ನಲ್ಲಿ ಹಣದ ವಹಿವಾಟು ನಡೆಸುವ ಮುನ್ನ https:// ಇದೆಯೇ ಪರಿಶೀಲಿಸಿ
- ಎಚ್‌ಟಿಟಿಪಿ ಮುಂದಿರುವ 'ಎಸ್' ಸುರಕ್ಷಿತ ಎಂಬ ಸೂಚಕ; ಅದರ ಮುಂದೆ ಒಂದು ಹಸಿರು ಬಣ್ಣದ ಚಿಕ್ಕ ಬೀಗಮುದ್ರೆಯೂ ಕಾಣಿಸುತ್ತದೆ.
- ಖುದ್ದು ಬ್ಯಾಂಕ್‌ನವರೇ ಕೇಳಿದರೂ ಯೂಸರ್ ಐಡಿ, ಪಾಸ್‌ವರ್ಡ್, ಪಿನ್ ಇತ್ಯಾದಿಗಳನ್ನು ಆನ್‌ಲೈನ್‌ನಲ್ಲಿ ನೀಡಬೇಡಿ!
- ನಿಮ್ಮ ಕಂಪ್ಯೂಟರ್, ಲ್ಯಾಪ್‌ಟಾಪ್‌ನಲ್ಲಿರುವ ಸಾಫ್ಟ್‌ವೇರ್ ಸುರಕ್ಷತಾ ತಂತ್ರಾಂಶಗಳನ್ನು ನಿಯಮಿತವಾಗಿ ಅಪ್‌ಡೇಟ್ ಮಾಡುತ್ತಿರಿ.
ಇಷ್ಟು ಮಾಡಿದರೆ ನಿಮ್ಮ ಆನ್‌ಲೈನ್ ವಹಿವಾಟು ಸುಭದ್ರ.
ಸಾಫ್ಟ್‌ವೇರ್ ತಂತ್ರಜ್ಞ. ಸಾಹಿತ್ಯದಲ್ಲಿ ಆಸಕ್ತ. ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಷಯಗಳನ್ನು ಸರಳವಾಗಿ ಪ್ರತೀವಾರ Tech Knowledge ಮೂಲಕ ತಿಳಿಸಿಕೊಡಲಿದ್ದಾರೆ.


No comments:
Post a Comment