ಅವನ ಹೆಸರು ಕೃಪಾನಿಧಿ ಸಂಗಮೇಶ್.
ಮೂರು ವರ್ಷದ ಹಿಂದೆ ನಾಲ್ಕನೇ ಕ್ಲಾಸ್. ಒಬ್ಬ ಶಿಕ್ಷಕರು ಡೆಪ್ಯುಟೇಶನ್ ಅಂತ ಹೋಗಿದ್ರಿಂದ ಕೊನೆಯ ಎರಡು ತಿಂಗಳು ನಾನೇ 4-5 ರ ಗಣಿತ ತೆಗೊಳ್ಬೇಕಾಗಿ ಬಂತು. ಆಗ ಕಂಬೈಂಡ್ ಕ್ಲಾಸ್‌ನ ಕೊನೆಯ ಸಾಲಿನಲ್ಲಿ ಕುಳ್ತಿರ್ತಿದ್ದ. ಪ್ರತೀ ಸಲ ಹೋಂವರ್ಕ್ ಚೆಕ್ ಮಾಡೋವಾಗ್ಲೂ ಅವನಿಗೆರಡು ಏಟುಗಳು ಗ್ಯಾರಂಟಿ!
ಕೊಟ್ಟ ರಿವಿಷನ್ ವರ್ಕ್ನಲ್ಲಿ ಒಂದಕ್ಷರನೂ ಬರೀದೆ ಹಾಗೇ ತರ್ತಿದ್ದ. ಹತ್ರ ಹೋಗ್ತಿದ್ದ ಹಾಗೆ ನಡ್ಗೋಕೆ ಶುರು. ಕೇಳಿದ್ರೆ 'ಬರ್ದಿಲ್ಲ ಮಿಸ್..' ಅನ್ನೋ ಉತ್ರ. ನನ್ನ ಮುಖವನ್ನ ನೋಡದೆ ಇನ್ನೆಲ್ಲೋ ನೋಡೋನು. ಅವನ ಹೆಸರಿನಷ್ಟೇ ಉದ್ದ ಅವನ ಅಳು. ಒಂದು ಏಟು ಬೀಳಂಗಿಲ್ಲ, ಊ..... ಅಂತ ಜೋರಾಗಿ ಅಳ್ತಾ ಶರ್ಟಿನ ತುದಿಯಿಂದ ಕಣ್ಣು ಮೂಗು ಒರಸ್ಕೊಳ್ತಾ ಐದ್ ನಿಮ್ಷ ನಿಲ್ತಿದ್ದ. ಉಳಿದ ಮಕ್ಕಳಿಗೆ ಅವನೊಂಥರಾ ಪುಕ್ಸಟ್ಟೆ ಮನರಂಜನೆ.
ಅದಕ್ಕಿಂತ ಹೆಚ್ಚಾಗಿ ಅವನ ಕಿವಿ ಸೋರುವಿಕೆಯಿಂದ ಬರ್ತಿದ್ದ ದುರ್ನಾತ. ಏನ್ ಬರೀದಿದ್ರೂ ಸರಿ, ಮೊದ್ಲು ಅಪ್ಪಂಗ್ ಹೇಳಿ ಡಾಕ್ಟ್ರಿಗೆ ತೋರ್ಸು ಅಂತ ಬೈಗುಳ ಮುಗ್ಸ್‌ತಿದ್ದೆ. 'ನಲಿ ಕಲಿ' ಟೀಚರ್ ನ ಕೇಳ್ದಾಗ, "ಅವ್ನು ಒಂದಕ್ಷರ ಬಾಯ್ಬಿಡಲ್ಲ ಮಿಸ್, ಸ್ವಲ್ಪ ಮಂದ, ಅವರಪ್ಪನೇ ಹೇಳ್ತಾರೆ. ಅವ್ನ ತಮ್ಮ ಹಾಗಲ್ಲ ನೋಡಿ, ಚೆನ್ನಾಗ್ ಓದ್ತಾನೆ.." ಅಂದಿದ್ರು. ಒಟ್ಟಾರೆ ಕಲಿಕೆಯಲ್ಲಿ ಹಿಂದುಳಿದವರ ಪಟ್ಟಿಗೆ ಅವನ ಹೆಸ್ರು ಸೇರ್ಸ್ಬಿಟ್ಟಿದ್ದೆ. 7, 8ರ ಗಣಿತ ನಂದೇ ಆದ್ರಿಂದ "ಸೇತುಬಂಧ"ದಿಂದ್ಲೇ ಅವ್ನನ್ನ ಸರಿ ಮಾಡಿದ್ರಾಯ್ತು ಅಂತ ಮನಸ್ನಲ್ಲೇ ಷರಾ ಬರ್ದ್ಬಿಟ್ಟಿದ್ದೆ. ಬಹುಶಃ ನಾನು ಜಡ್ಡುಗಟ್ಟೋಕೆ ಶುರು ಆಗಿದ್ದೆ.
ಪ್ರಶ್ನೆ ಕೇಳ್ತಿದ್ದ ಹಾಗೇ ಕಂಗಾಲಾಗಿ ಕಣ್ಣೀರು ಸುರಿಸ್ತಿದ್ದ ಅಳುಮುಂಜಿ ವಿದ್ಯಾರ್ಥಿ ಸಂಗಮೇಶ್, ಸ್ವಾತಂತ್ರ್ಯೋತ್ಸವದ ದಿನ ಯಾವ ಅಳುಕಿಲ್ಲದೆ ಭಾಷಣ ಬಿಗಿದದ್ದು ಅಚ್ಚರಿ ಮೂಡಿಸಿತ್ತು. ಶತದಡ್ಡನ ಕೆಟಗರಿಗೆ ಸೇರಿಸಲ್ಪಟ್ಟಿದ್ದ ಸಂಗಮೇಶ್ ಮೂರು ವರ್ಷಗಳಲ್ಲಿ ಹುಶಾರು ಹುಡುಗರ ಸಾಲಿಗೆ ಬಂದು ನಿಂತಿದ್ದಾನೆ. ಈ ಮಹತ್ತರ ಬದಲಾವಣೆಗೆ ಕಾರಣ ಸರಿತಾ ಮಿಸ್. ಅವರು ಬರೀ ಪಾಠ ಮಾಡುವ ಟೀಚರ್ ಅಷ್ಟೇ ಅಲ್ಲ, ವಿದ್ಯಾರ್ಥಿಗಳಿಗೆ ಔಷಧ ನೀಡಿ ಆರೈಕೆ ಮಾಡುವ ತಾಯಿಯೂ ಹೌದು..
ಕಳ್ದ ವರ್ಷ ಹೆಚ್ಚುವರಿ ಶಿಕ್ಷಕರ ವರ್ಗಾವಣೆಯಲ್ಲಿ ಬಂದಿದ್ರು ಸರಿತಾ ಮಿಸ್. ನನ್ನಷ್ಟೇ ವಯಸ್ಸು, ಆದ್ರೆ ವೃತ್ತಿಯಲ್ಲಿ ಏರು-ಪೇರುಗಳನ್ನ ಕಂಡು ಗಟ್ಟಿಯಾದ ದಿಟ್ಟೆ. ಶಿಸ್ತು ಸಂಯಮದ ಪ್ರತೀಕ ಅನ್ಬಹ್ದು. ಅವರೇ ಅವನ ಕ್ಲಾಸ್ ಟೀಚರ್ ಆದ್ರು.
ಸ್ವಾತಂತ್ರ್ಯ ದಿನಾಚರಣೆ ಸಂದರ್ಭ. "ಈಗ ನಾಲ್ಕು ಮಾತುಗಳನ್ನಾಡಲಿದ್ದಾನೆ 6ನೇ ತರಗತಿ ಕೃಪಾನಿಧಿ ಸಂಗಮೇಶ್" ಅಂತಿದ್ ಹಾಗೇ ನನಗೋ ಆಶ್ಚರ್ಯ. ಹತ್ತು ವಾಕ್ಯಗಳನ್ನು, ಸೈಡ್ ನೋಡ್ತಾ ನೀಟಾಗಿ ಹೇಳಿದ್ದ! ನೋಡೋಕೆ ಬಂದಿದ್ದ ಅವರಪ್ಪನ ಮುಖದಲ್ಲೂ ಸಂತಸ ತುಳುಕುತ್ತಿತ್ತು.
ಮಾರನೇ ದಿನ, "ಏನ್ ಮ್ಯಾಜಿಕ್ ಮಾಡಿದ್ರಿ ಮೇಡಂ?" ಅಂತ ಕೇಳಿದ್ರೆ, "ಏನಿಲ್ಲಾ, ಕಲೀತಾನೆ, ಆದ್ರೆ ನಿಧಾನ ಅಷ್ಟೇ", ಅನ್ನೋ ತಣ್ಣಗಿನ ಉತ್ರ. ನನ್ಗೆ ಸಮಾಧಾನ ಆಗ್ಲಿಲ್ಲ. ಅವ್ರ ಕಾರ್ಯ ವೈಖರಿನ ಅಬ್ಸರ್ವ್ ಮಾಡೋಕೆ ಶುರು ಮಾಡ್ದೆ.
"ಹಂಗಲ್ಲ ಮನೇ(ಮಗನೇ), ಹೀಗ್ ಹೇಳು. ಈ ರೀತಿ ಮಾಡು.." ಅಂತ ಅವ್ರು ಮೆಲ್ಲಗೆ ಹೇಳೋ ಸ್ಟೈಲ್ ಗೆ ಭಯ ಮಾಯವಾಗ್ತಿತ್ತು. ಅಷ್ಟೇ ಅಲ್ಲ, ಮಕ್ಕಳಿಗೇನಾದ್ರೂ ಸಣ್ಣ ಪುಟ್ಟ ಸಮಸ್ಯೆ ಇದ್ರೆ ಸೊಲ್ಯೂಷನ್ ಕೂಡ ಇತ್ತು ಅವ್ರ ಹತ್ರ. ಹುಳುಕಡ್ಡಿಗೆ(ರಿಂಗ್ವರ್ಮ್) ಮುಲಾಮು, ಕಿವಿ ಸೋರೋದಕ್ಕೆ ಇಯರ್ ಡ್ರಾಪ್, ಹತ್ತಿ ತಂದು ಕೊಟ್ಟಿದ್ರು. "ಏನ್ ಒಡ್ ಮಕ್ಳಪ್ಪಾ, ಎಷ್ಟು ಹೇಳಿದ್ರೂ ಬದ್ಲಾಗಲ್ಲ", ಅಂತ ನಾನು ಪೇಚಾಡುವಾಗ, "ನಾವು ಮಾಡುವುದನ್ನ ಮಾಡೋದು, ಸ್ವಲ್ಪನಾದ್ರು ಚೇಂಜ್ ಬರತ್ತೆ" ಅನ್ನೋ ಪಾಸಿಟಿವಿಟಿ !
ಈಗ ಸಂಗಮೇಶ್ ಏಳನೇ ಕ್ಲಾಸು. ವಿಜ್ಞಾನ ತರಗತಿಯಲ್ಲಿ ಯಾರೂ ಉತ್ತರಿಸದ ಸಾಮಾನ್ಯ ಜ್ಞಾನದ ಪ್ರಶ್ನೆಗೆ ಅವನಿಂದ ಫಟ್ ಅಂತ ಉತ್ರ ಬರುತ್ತೆ. ನಾನು ವೆರಿಗುಡ್ ಅಂದ್ರೆ ಅವನ, ಅದೇ ಸೈಡ್ ಫೋಸ್ ಮುಖದಲ್ಲಿ ಸಣ್ಣ ಖುಷಿ. ಈಗ ಮೇಡಂ ದೀರ್ಘ ರಜೆಯಲ್ಲಿದ್ದಾರೆ.
ಇವತ್ತು ಗಣಿತ ಕ್ಲಾಸ್ ನಲ್ಲಿ ಇಪ್ಪತ್ತರವರೆಗೆ ಮಗ್ಗಿ ಕೇಳ್ತಾ ಇದ್ದೆ. ಅವ್ನು ನಡುಗದೆ, ಎಂಟನೇ ಮಗ್ಗಿ ತಪ್ಪಿಲ್ಲದೆ ಹೇಳ್ತಿದ್ರೆ ಅವನಲ್ಲಾದ ಹಾಗೂ ನನ್ನಲ್ಲಾದ ಬದಲಾವಣೆಗೆ ಕಾರಣಳಾದ ಗೆಳತಿಯ ನೆನಪು. ನಿಜ, ಕಲಿಕೆ ಎಂದರೆ "ವರ್ತನೆಯಲ್ಲಿ ಪರಿವರ್ತನೆ." ನನ್ನಲ್ಲೂ, ನನ್ನ ವಿದ್ಯಾರ್ಥಿಯಲ್ಲೂ ಮೂಡಿದ ಈ ಬದಲಾವಣೆ ಸರಿತಾ ಮಿಸ್ ಬರುವುದರೊಳಗೆ ಮತ್ತೆ ಕುಸಿಯದಂತೆ ನೋಡ್ಕೋಬೇಕು.
❍ ವೀಣಾ ವಾಸುದೇವ್
ಗೃಹಿಣಿ. ತಾಯಿ. ನಂಜನಗೂಡು ಸಮೀಪದ ಹಳ್ಳಿಯೊಂದರ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿ. ತಮ್ಮ ವೃತ್ತಿ ಜೀವನದ ಸಿಹಿ-ಕಹಿ ಕ್ಷಣಗಳನ್ನು ಕರಿಹಲಗೆ ಮೂಲಕ ಹಂಚಿಕೊಳ್ಳಲಿದ್ದಾರೆ.


No comments:
Post a Comment