'ವಯಸ್ಸಾದ ತಂದೆಯನ್ನು ದೇವಸ್ಥಾನದಲ್ಲೇ ಬಿಟ್ಟುಹೋದ ಮಕ್ಕಳು. ಕನಿಕರಿಸಿ ನೆರವಿಗೆ ಬಂದ ಜನ..'
ಜೋರಾಗಿ ಸುದ್ದಿ ಓದ್ತಿದ್ಳು ಶಿಲ್ಪಾ. ಮಧ್ಯಾಹ್ನ ಊಟದ ಸಮಯದಲ್ಲಿ ಟೇಬಲ್ ಮೇಲಿದ್ದ ಪೇಪರ್ ನೋಡ್ತಾ, "ಅಲ್ಲಾ ಎಂತಾ ಜನ ಇರ್ತಾರೆ ನೋಡಿ.." ಅಂತ ಡಿಸ್ಕಷನ್ ಸ್ಟಾರ್ಟ್ ಆಯ್ತು. "ಏನ್ ಕ್ರೌರ್ಯ ಅಂತೀನಿ, ಬಡವ್ರೋ ಶ್ರೀಮಂತ್ರೋ ಹೆತ್ತವ್ರಿಗೆ ಊಟ ಹಾಕ್ಲಿಕ್ ಆಗ್ದಿದ್ ಮೇಲೆ ಅವ್ರೆಂತಾ ಮಕ್ಳುರೀ.." ಅಂತ ಮಾಲಿನಿ ಹೇಳ್ತಿದ್ರು.
ತಟ್ಟಂತ ಆ ಹಳೇ ಘಟನೆ ನೆನಪಿಗೆ ಬಂತು; ನನ್ನ ಮೊದಲ ಉತ್ತರ ಭಾರತ ಪ್ರವಾಸದ ಸಮಯದಲ್ಲಿ ಕಂಡ ಸನ್ನಿವೇಶ. ಹತ್ತು ದಿನಗಳ ತಿರುಗಾಟ ಮುಗ್ಸಿ ಬೆಂಗಳೂರಿನ ಏರ್ಪೋರ್ಟ್ನಿಂದ ಚೆಕೌಟ್ ಆಗಿ ಹೊರಗ್ ಬಂದಿದ್ವಿ. ಪಿಕಪ್ಗೆ ಬುಕ್ಕಾಗಿದ್ದ ಕಾರು ಬರ್ಲಿಕ್ಕೆ ಇನ್ನೂ ಅರ್ಧ ಗಂಟೆ ಬೇಕಿತ್ತು. ಪ್ರವಾಸದ ಅನುಭವಗಳನ್ನ ಮೆಲುಕು ಹಾಕ್ತಾ ಕೂತಿದ್ವಿ. ಕಾಸು, ಕ್ಲಾಸ್‌ಗಳನ್ನ ಹೇಗೆ ಸೃಷ್ಟಿ ಮಾಡಿದೆ ಅಂತ ಯೋಚಿಸ್ತಿದ್ದೆ.
ವಯಸ್ಸಾಗಿ ಕಾಯಿಲೆ ಬಿದ್ದಿರುವ ತಂದೆಯನ್ನು ನೋಡಿಕೊಳ್ಳೋಕೆ ಮಗ- ಸೊಸೆಯಂದಿರು ಎಷ್ಟು ಕಾಳಜಿ ವಹಿಸ್ತಿದಾರಲ್ಲ ಅಂತ ಅವರ ಬಗ್ಗೆ ಮೆಚ್ಚುಗೆಯಾಗಿತ್ತು. ಆದರೆ ತಾತನನ್ನು ಹೊತ್ತಿದ್ದ ಆಂಬುಲೆನ್ಸ್ ಹೊರಟು ನಿಂತಾಗ ಕಂಡ ದೃಶ್ಯ ಆಘಾತ ಮೂಡಿಸಿತ್ತು! ಸಂಬಂಧಗಳ ಬಂಧ ಇಷ್ಟೇನಾ? ಅನಿಸಿತು..
ಸಣ್ಣ ನರಳಾಟ, ಈ ಯೋಚನೆಗೆ ಬ್ರೇಕ್ ಕೊಟ್ಟಿತ್ತು. ಯಾರು ಅಂತ ತಿರುಗಿ ನೋಡಿದ್ರೆ, ವೃದ್ಧರೊಬ್ರನ್ನ -ಸುಮಾರು ಎಪ್ಪತ್ತಿರ್ಬಹ್ದು ವಯಸ್ಸು- ವ್ಹೀಲ್‌ಚೇರ್‌ನಲ್ಲಿ ಗಾರ್ಡ್ಸ್ ಕರ್ಕೊಂಡ್ ಬಂದ್ರು. ಒಂದು ಆಂಬುಲೆನ್ಸೂ, ಹಿಂದೇನೇ ಒಂದು ಸ್ಯಾಂಟ್ರೋ ಕಾರೂ ಬಂತು. ಇಬ್ರು ಗಂಡಸ್ರು ಅವರ ಜೊತೆ ಇಬ್ರು ಹೆಂಗಸ್ರು ಮತ್ತೊಬ್ಬ ಸಣ್ಣ ಹುಡುಗ. ಮಗ-ಸೊಸೆಯಂದಿರು-ಮೊಮ್ಮಗ ಇರ್ಬಹ್ದು ಅಂದ್ಕೊಂಡೆ. "ಹುಷಾರು.." ಅಂತ ಹೇಳ್ತಾ ಒಬ್ಬ ಗ್ಲುಕೋಸ್ ಪೈಪ್ ಕೈಲಿ ಹಿಡ್ಕೊಂಡ. ಇನ್ನೊಬ್ಬ ಹಿಂದೆ ನಿಂತ. ಗಾರ್ಡ್ಸ್ ಮೆಲ್ಲಗೆ ಅವ್ರನ್ನ ಎತ್ತಿ ಆಂಬುಲೆನ್ಸ್ ಒಳ್ಗೆ ಮಲಗ್ಸಿದ್ರು. ಒಬ್ಬ ಮಗ, ದೊಡ್ಡವನಿರ್ಬಹುದು ಎಷ್ಟು ಅಂತ ಕೇಳಿ ಆಂಬುಲೆನ್ಸ್ ಡ್ರೈವರ್ಗೆ ನೋಟುಗಳನ್ನ ಎಣಿಸಿ ಕೊಟ್ಟ.
"ರೀ.. ಅಲ್ನೋಡಿ, ಪಾಪ ಏನು ಕಾಯ್ಲೇನೋ. ಅಟ್‌ಲೀಸ್ಟ್ ಮಕ್ಕಳು ಹತ್ರ ಇದಾರೆ ಅನ್ನೋದೇ ಸಮಾಧಾನದ ವಿಷ್ಯ.." ಅಂತ ಮೊಬೈಲಲ್ಲಿ ಮುಳುಗಿದ್ದ ಮನೆಯವ್ರಿಗೆ ತೋರ್ಸಿದ್ದೆ. ಅವ್ರೂ ನೋಡಿದ್ರು. ಮಕ್ಳು ಬಂದ ಕಾರಲ್ಲೆ ಹತ್ತಿ ಮುಂದೆ ಹೋದ್ರು. ಆಂಬುಲೆನ್ಸ್ ಡ್ರೈವರ್ ನೋಟುಗಳನ್ನ ಎಣಿಸಿ ಜೋಬಿಗೆ ತುರುಕಿ ಹಿಂದಿನ ಡೋರ್ ಹಾಕ್ದ.
ಸಡನ್ನಾಗಿ ಮನೆಯವ್ರು, ಮುಚ್ಚಿದ ಬಾಗಿಲು ತೋರ್ಸಿ "ಯಾರಿದ್ರೇನು ನೋಡಲ್ಲಿ.." ಅಂದ್ರು. 'ಶಾಂತಿನಿಲಯ ವೃದ್ಧಾಶ್ರಮ' ಅಂತ ಬರ್ದಿತ್ತು.
ಕೆದರು ಕೂದಲಿನ, ಅರೆಬರೆ ಗಡ್ಡದ, ಬಡಕಲು ಶರೀರದ ತಾತನೊಬ್ಬ ಕಣ್ಮುಂದೆ ಬಂದು ಮೈ ನಡುಗಿ ತಣ್ಣಗಿನ ಪುಳಿಯೋಗರೆ ಕಹಿ ಅನ್ನಿಸಿತು!
❍ ವೀವಾ

No comments:
Post a Comment