ಬೆಂಗಳೂರಿಗದು ಪೊರೆಬಿಡುವ ಸಮಯ. ರೋಡುಗಳೆಲ್ಲ ನಿತ್ರಾಣಗೊಂಡಿದ್ದವು. ಸಾಯುವ ಮುನ್ನ ತುಳಸೀ ನೀರು ಕುಡಿಯೋ ಗಂಟಲಿನ ಹಾಗೆ ಆಗೊಮ್ಮೆ ಈಗೊಮ್ಮೆ ಹೊಯ್ಸಳ ಶಿಳ್ಳೆ ಹಾಕ್ಕೊಂಡು ಓಡಾಡ್ತಿತ್ತು. ಮೌನ ಸಾವಿನ ಪ್ರತಿಧ್ವನಿಯನ್ನಷ್ಟೇ ಹೊರಡಿಸುತ್ತಿತ್ತು.
ನಡುಗುತ್ತಲೇ ಮಲಗಿದ್ದ ನರಸಪ್ಪ. ಹುಟ್ಟಿಸಿದ ಮಕ್ಕಳೇ ಬೀದಿಗೆ ಎಸೆದು ಹೋಗಿದ್ದರು. ಭಿಕ್ಷೆ ಬೇಡಿಯಾದ್ರೂ
ಬದುಕ್ತಿನಿ ಮತ್ತಲ್ಲಿಗೆ ಹೋಗೋದಿಲ್ಲ ಅಂತ ದೃಢ ನಿರ್ಧಾರ ಮಾಡ್ಕೊಂಡು ಕೆ.ಜಿ.ರೋಡ್ ನ ಬೀದಿಯಲ್ಲಿ
ಬಿದ್ದುಕೊಂಡಿದ್ದ. ಅಷ್ಟೊತ್ತಿಗೆ ಜೋರಾಗಿ ಅರಚೋ ಶಬ್ದ ಕೇಳಿಸ್ತು. ಕಣ್ಣುಬಿಟ್ಟು ನೋಡಿದ ನರಸಪ್ಪ.
ಅಲ್ಲಿ ವೇಶ್ಯೆ ಯೊಬ್ಬಳನ್ನ ಪೊಲೀಸರು ಪೀಡಿಸುತ್ತಿದ್ದರು.
"ಬೋಳಿ ಮಕ್ಳು.." ಅಂತ ಗೊಣಗಿ ಸುಮ್ಮನಾದ.
ಅದು
ಬಿಟ್ಟರೆ ಮತ್ತೇನೂ ಮಾಡಲು ಅವನ ಕೈಲಾಗುತ್ತಿರಲಿಲ್ಲ. ಮಗ್ಗಲು ಬದಲಿಸಲೂ ಅವನಿಂದಾಗಲಿಲ್ಲ. ಎಪ್ಪತ್ತರ
ಅಜ್ಜ ನಿನ್ನೆಯಿಂದ ಏನನ್ನೂ ತಿಂದಿರಲಿಲ್ಲ. ಊದಿಕೊಂಡ ನರವೂ ರಕ್ತ ಪರಿಚಲನೆಯಾಗದೆ ಇಡೀ ಮೈ ಜೋಮು ಹಿಡಕೊಂಡಿತ್ತು.
ಅಂಥ ನೋವಲ್ಲೂ ನರಸಪ್ಪನ ಮೆದುಳಲ್ಲಿ ಮಿಂಚೊಂದು ಫಳ್ಳನೆ ಹೊಳೆದು ಮುಖದಲ್ಲಿ ಸಣ್ಣ ನಗುವನ್ನ ಚಿಗುರಿಸಿತ್ತು. ಬೆಳಗ್ಗೆ ಭಿಕ್ಷೆ ಬೇಡುವಾಗ ಶಿವಾನಂದ ಸರ್ಕಲ್ ನಲ್ಲಿ ಒಂದು ಗುಂಡನೆಯ ವಸ್ತು ಕಾಲಿಗೆ ತಾಕಿತ್ತು. ಅದನ್ನ ಎತ್ತಿಕೊಂಡರೆ ಉಳಿಸಿ, ದಕ್ಕಿಸಿಕೊಳ್ಳೊದು ಹಗಲಲ್ಲಿ ಕಷ್ಟ ಅಂತ ಮೋರಿಯ ಪಕ್ಕಕ್ಕೆ ಕಾಲಿಂದ ಜಾಡಿಸಿ ಬಂದಿದ್ದ. ಇದೇ ಸರಿಯಾದ ಸಮಯ, ಅದನ್ನ ತರಲೇಬೇಕಂತ ನಿರ್ಧರಿಸಿದ.
ಯಾರೋ ಕಳ್ಳನಿರಬೇಕು ಅಂತ ಪೇದೆಯೊಬ್ಬ ಮುದುಕನನ್ನ ತದುಕಿದ್ದ. ಒಂದೇ ಏಟಿಗೆ ಸತ್ತ ನರಸಪ್ಪನ ಬಗ್ಗೆ ಪೇದೆಗೆ ಏನೂ ಅನಿಸಲಿಲ್ಲ. ಆದ್ರೆ, ಅವನ ಕೈಯಲ್ಲಿದ್ದ ಪೊಟ್ಟಣ ಬಿಚ್ಚಿ ನೋಡಿದ ಪೇದೆ ಇಂದಿಗೂ ಬಿಕ್ಕುತ್ತಾನೆ..
ಹಿಂದೆಯೇ ದುರಾದೃಷ್ಟದ ಆಲೋಚನೆ ತಲೆ ಹೊಕ್ಕಿತ್ತು. ಅದು ಅಲ್ಲಿಯೇ ಇರುತ್ತಾ? ಇದ್ದರೆ ಸರಿ, ಇಲ್ಲ ಅಂದ್ರೆ? ಗೊಂದಲದ ಮಧ್ಯೆಯೇ ಹಿರಿಜೀವ ಹೋಗಿಯೇ ಬಿಡುವ ಮನಸ್ಸು ಮಾಡಿತ್ತು. ಗಾಳಿ ತುಂಬಿದ ಸಪ್ಪೆ ರುಚಿಯ ತೇಗುಗಳು ಗ್ಯಾಸ್ಟಿಕ್ ನ್ನ ಗುರುತು ಮಾಡುತ್ತಿದ್ದವು. ಬಿಳುಚಿಕೊಂಡ ತುಟಿಗಳು ನಾಲಿಗೆ ನೀರನ್ನೂ ಮುಟ್ಟಿಲ್ಲ ಅನ್ನೋದಕ್ಕೆ ಸಾಕ್ಷಿಯಾಗಿ ಉಳಿದಿದ್ದವು.
ಎದ್ದು
ನಿಲ್ಲುವ ಪ್ರಯತ್ನಕ್ಕೆ ಸೋತು ಕುಸಿದು ಬಿದ್ದ ನರಸಪ್ಪ. ನಡಗುತ್ತಲೇ ಜೇಬು ತಡಕಿದ. ಅಲ್ಲಿ ಒಂಚೂರು
ಮಿಕ್ಸರ್ ಸಿಕ್ತು. ಅದನ್ನೇ ಬಾಯಿಗೆ ಹಾಕಿಕೊಂಡು ಜಗಿದ. ನುಂಗಿದರೆ, ಮುಗಿದೇ ಹೋಗುತ್ತದೆಂದು ಮತ್ತೆ
ಮತ್ತೆ ನಮುರು ಹಾಕಿದ. ಎದ್ದು ನಿಲ್ಲುವ ತಾಕತ್ತು ಬಂತು.
ನಿಧಾನವಾಗಿ ಕೆ.ಜಿ. ರೋಡ್ ಮೂಲಕ ಮೂವಿಲ್ಯಾಂಡ್ಸ್
ಥಿಯೇಟರ್ ನತ್ತ ಹೆಜ್ಜೆ ಹಾಕಿದ. ಹಿಂದಿನಿಂದ ಶಿಳ್ಳೆ ಹೊಡೆಯುತ್ತಾ ಬಂದ ಹೊಯ್ಸಳಕ್ಕೆ ಎದೆ ಹಿಡಿದುಕೊಂಡಂತಾಯ್ತು.
ಮತ್ತೊಮ್ಮೆ ಕುಸಿದುಬಿದ್ದ. ಗಾಡಿ ಮುಂದೆ ಸಾಗುವವರೆಗೂ ಮಲಗಿದ್ದ. ಯಾರೋ ಕುಡುಕ ಅಂತ ಪೊಲೀಸರು ಹೊರಟು
ಹೋದ್ರು.
ಮತ್ತದೇ ಆಮೆವೇಗದಲ್ಲಿ ಶಿವಾನಂದ ಸರ್ಕಲಿಗೆ ಬಂದು ಸುತ್ತಲು ನೋಡಿದ. ಒಂದಷ್ಟು ನಾಯಿಗಳು
ಮಾತ್ರ ಕಚ್ಚಾಡುತ್ತಿದ್ದವು. ಅದು ಅಲ್ಲೇ ಇತ್ತು. ಕಾರ್ಪೋರೇಷನ್ನವರು ಮುಂಜಾನೆ ಎತ್ತಿ ಕಸಕ್ಕೆ ಹಾಕುತ್ತಿದ್ದರೇನೋ?
ಸದ್ಯ ನರಸಪ್ಪನ ಕೈಗದು ಸಿಕ್ಕಿತ್ತು. ಕವರಿನಿಂದ ಸುತ್ತಿದ್ದ ಆ ಗುಂಡನೆಯ ವಸ್ತು ಏನಿರಬಹುದೆಂದು ಕುತೂಹಲದಿಂದ
ಬಿಚ್ಚುತ್ತಿದ್ದ.
ಹಿಂದಿನಿಂದ ಯಾರೋ ಬಲವಾಗಿ ಬೆನ್ನಿಗೆ ಹೊಡೆದಂತಾಯ್ತು. ನರಸಪ್ಪ ತೊಪ್ಪನೆ ಬಿದ್ದ.
ಭಯದಿಂದಲೋ ಏನೋ ಎದೆ ಹೊಡೆದುಕೊಂಡು ಸತ್ತ. ಸಾಯುವ ಮುನ್ನ ಹಸಿವನ್ನೂ ನೀಗಿಸಿಕೊಳ್ಳಲಿಲ್ಲ. ಯಾರೋ ಕಳ್ಳನಿರಬೇಕು
ಅಂತ ಪೇದೆಯೊಬ್ಬ ಮುದುಕನನ್ನ ತದುಕಿದ್ದ. ಒಂದೇ ಏಟಿಗೆ ಸತ್ತ ನರಸಪ್ಪನ ಬಗ್ಗೆ ಪೇದೆಗೆ ಏನೂ ಅನಿಸಲಿಲ್ಲ.
ಆದ್ರೆ, ಅವನ ಕೈಯಲ್ಲಿದ್ದ ಪೊಟ್ಟಣ ಬಿಚ್ಚಿ ನೋಡಿದ ಪೇದೆ ಇಂದಿಗೂ ಬಿಕ್ಕುತ್ತಾನೆ.
ಪೇದೆಗೆ ಪೊಟ್ಟಣದಲ್ಲಿ
ಕಾಣಿಸಿದ್ದು ಎದುರು ಬದುರಾಗಿ ತಬ್ಬಿಕೊಂಡಿದ್ದ ಎರಡು ಬನ್ನು. ಆ ಪೇದೆ ನರಸಪ್ಪನನ್ನು ಅನಾಥ ಹೆಣವಾಗಿಸಿದ್ದನಾದರೂ,
ಇವತ್ತಿಗೂ ಶಿವಾನಂದ ಸರ್ಕಲ್ ಕಡೆ ಹೊರಟರೆ ಕಣ್ಣುಗಳು ಸುಮ್ಮನೆ ಜಿನುಗುತ್ತವೆ.
ಪತ್ರಕರ್ತ. ಸೃಜನಶೀಲ ಬರಹಗಾರ. ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಬಹುಮಾನ ವಿಜೇತ ಉದಯೋನ್ಮುಖ ಸಾಹಿತಿ. ತಮ್ಮ ಲಹರಿಗಳನ್ನು ಕಥಾಕಾಲದಲ್ಲಿ ತೆರೆದಿಡಲಿದ್ದಾರೆ.


No comments:
Post a Comment